ಪ್ರೀತಿ ನಿರಾಕರಣೆ: ಪ್ರಿಯಕರನ ಹೆಸರಲ್ಲಿ ಉಡುಪಿ ಶಾಲೆ ಸೇರಿ ಹಲವೆಡೆ 21 ಬಾಂಬ್‌ ಬೆದರಿಕೆ

KannadaprabhaNewsNetwork |  
Published : Jun 25, 2025, 12:34 AM IST
ಬಾಂಬ್‌ ಬೆದರಿಕೆ | Kannada Prabha

ಸಾರಾಂಶ

ತಾನು ಪ್ರೀತಿಸುತ್ತಿದ್ದಾತ ತನ್ನನ್ನು ಮದುವೆಯಾಗಲು ಒಪ್ಪದೆ, ಬೇರೆಯವಳನ್ನು ವಿವಾಹವಾದ ಕಾರಣ, ಸೇಡಿಗಾಗಿ ಯುವತಿಯೊಬ್ಬಳು ಉಡುಪಿಯ ಶಾಲೆ ಸೇರಿದಂತೆ ದೇಶಾದ್ಯಂತ 21 ಬಾಂಬ್‌ ಬೆದರಿಕೆ ಇ-ಮೇಲ್‌ ಕಳಿಸಿದ್ದಾಳೆ.

ಅಹಮದಾಬಾದ್‌: ತಾನು ಪ್ರೀತಿಸುತ್ತಿದ್ದಾತ ತನ್ನನ್ನು ಮದುವೆಯಾಗಲು ಒಪ್ಪದೆ, ಬೇರೆಯವಳನ್ನು ವಿವಾಹವಾದ ಕಾರಣ, ಸೇಡಿಗಾಗಿ ಯುವತಿಯೊಬ್ಬಳು ಉಡುಪಿಯ ಶಾಲೆ ಸೇರಿದಂತೆ ದೇಶಾದ್ಯಂತ 21 ಬಾಂಬ್‌ ಬೆದರಿಕೆ ಇ-ಮೇಲ್‌ ಕಳಿಸಿದ್ದಾಳೆ. ಗುಜರಾತ್‌ನಾದ್ಯಂತ ಇಂತಹ 12 ಬೆದರಿಕೆಗಳನ್ನು ಒಡ್ಡಲಾಗಿದೆ. ಆರೋಪಿಯನ್ನು ಚೆನ್ನೈನಲ್ಲಿ ನೆಲೆಸಿರುವ ರೆನೆ ಜೋಶಿಲ್ಡಾ ಎಂದು ಗುರುತಿಸಲಾಗಿದೆ. ದಿವಿಜ್‌ ಪ್ರಭಾಕರ್‌ ಎನ್ನುವವರನ್ನು ರೆನೆ ಮೋಹಿಸುತ್ತಿದ್ದಳು. ಆದರೆ ಆತ ಆಕೆಯನ್ನು ನಿರಾಕರಿಸಿ ಬೇರೆ ಹುಡುಗಿಯ ಕೈಹಿಡಿದಿದ್ದ. ಇದರಿಂದ ಕುಪಿತಳಾದ ರೆನೆ, ತನ್ನ ತಾಂತ್ರಿಕ ಪಾಂಡಿತ್ಯವನ್ನು ಬಳಸಿ ನಕಲಿ ಇಮೇಲ್‌ ಐಡಿ, ವಿಪಿಎನ್‌, ಡಾರ್ಕ್‌ ವೆಬ್‌ ಇತ್ಯಾದಿಗಳನ್ನು ರಚಿಸಿ, ಆವುಗಳ ಮೂಲಕ ದಿವಿಜ್‌ ಹೆಸರಲ್ಲಿ ಶಾಲೆ, ಕಾಲೇಜು, ಸ್ಟೇಡಿಯಂ ಸೇರಿ 21 ಸ್ಥಳಗಳಿಗೆ ಬಾಂಬ್‌ ಬೆದರಿಕೆ ರವಾನಿಸುತ್ತಿದ್ದಳು. ಜತೆಗೆ, ಗಣ್ಯರು ಆಗಮಿಸುವ ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೂ ನಕಲಿ ಬೆದರಿಕೆ ಕಳಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಚೆನ್ನೈನ ನಿವಾಸದಲ್ಲಿ ಬಂಧಿಸಲಾಗಿದೆ.

==

ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ: ಮೊದಲ ಬಾರಿ ಟಾಪ್‌ 100ರಲ್ಲಿ

ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲ ವರದಿ । 109ರಿಂದ 99ನೇ ಸ್ಥಾನಕ್ಕೆ ಏರಿದ ಭಾರತ

ನವದೆಹಲಿ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಮೊದಲ ಬಾರಿಗೆ ಭಾರತ ಅಗ್ರ 100 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. 2025ನೇ ಸಾಲಿನಲ್ಲಿ 167 ದೇಶಗಳ ಪೈಕಿ ಭಾರತ 99ನೇ ಸ್ಥಾನ ಪಡೆದಿದೆ. ಫಿನ್ಲೆಂಡ್‌, ಸ್ವೀಡನ್‌ ಮತ್ತು ಡೆನ್ಮಾರ್ಕ್‌ ಅಗ್ರಸ್ಥಾನ ಪಡೆದುಕೊಂಡಿವೆ.

ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲದ 10ನೇ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ವರದಿ (ಎಸ್‌ಡಿಆರ್‌) ಬಿಡುಗಡೆಯಾಗಿದೆ. ಈ ವರದಿಯಲ್ಲಿ ಭಾರತ 67 ಅಂಕಗಳಿಸಿ 99ನೇ ಸ್ಥಾನಗಳಿಸಿದ್ದರೆ, ನೆರೆಯ ಚೀನಾ 74.4 ಅಂಕಗಳಿಂದ 49ನೇ ಸ್ಥಾನ, ಅಮೆರಿಕ 75.2 ಅಂಕಗಳಿಂದ 44ನೇ ಸ್ಥಾನ ಪಡೆದಿದೆ.ಈ ಮಾಪನವನ್ನು ಭ್ರಷ್ಟಾಚಾರ ನಿರ್ಮೂಲನೆ, ಸುಸ್ಥಿರ ಸಾರಜನಕ ನಿರ್ವಹಣೆ, ಪತ್ರಿಕಾ ಸ್ವಾತಂತ್ರ್ಯ, ಬೊಜ್ಜಿನ ಪ್ರಮಾಣ, ಇಂಟರ್ನೆಟ್‌ ಲಭ್ಯತೆ, ಮೊಬೈಲ್‌ ಸೇವೆ, ಶಿಶುಮರಣ ದರ ಹೀಗೆ ಇತ್ಯಾದಿ ಅಂಶಗಳ ಆಧಾರದ ಮೇಲೆ ಅಳೆಯಲಾಗುತ್ತದೆ.

ಇದರಲ್ಲಿ ಭಾರತದ ನೆರೆಹೊರೆಯ ದೇಶಗಳಾದ ಭೂತಾನ್‌ 74, ಶ್ರೀಲಂಕಾ 53, ನೇಪಾಳ 85, ಮಾಲ್ಡೀವ್ಸ್‌ 93, ಬಾಂಗ್ಲಾದೇಶ 114 ಮತ್ತು ಪಾಕಿಸ್ತಾನ 140ರಲ್ಲಿ ಸ್ಥಾನ ಪಡೆದಿವೆ.

==

ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ ಮಾತ್ರಕ್ಕೆ ದೌರ್ಜನ್ಯ ಸಹಿಸಲಾಗದು: ಸುಪ್ರೀಂ

ಪತ್ನಿ ಕೊಲೆ ದೋಷಿ ಯೋಧನ ವಿನಾಯಿತಿ ಅರ್ಜಿ ವಜಾ

ನವದೆಹಲಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯ ಸಾವಿಗೆ ಕಾರಣನಾದ ಭಾರತೀಯ ಯೋಧನೊಬ್ಬನ ಶಿಕ್ಷೆ ವಿನಾಯಿತಿ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಅಲ್ಲದೆ, ‘ಆಪರೇಷನ್ ಸಿಂದೂರದಲ್ಲಿ ಭಾಗವಹಿಸಿದ ಮಾತ್ರಕ್ಕೆ ಮನೆಯಲ್ಲಿ ನಡೆಸಿದ ದೌರ್ಜನ್ಯಕ್ಕೆ ವಿನಾಯಿತಿ ನೀಡಲಾಗುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬಲ್ಜಿಂದರ್ ಸಿಂಗ್‌ರ ಪತ್ನಿ ಮದುವೆಯಾದ ಎರಡೇ ವರ್ಷಕ್ಕೆ ಸಾವನ್ನಪ್ಪಿದ್ದರು. 2004ರಲ್ಲಿ ಅಮೃತಸರದ ವಿಚಾರಣಾ ಕೋರ್ಟ್ ಸಿಂಗ್ ದೋಷಿ ಎಂದು ತೀರ್ಪು ನೀಡಿತ್ತು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸಹ ವಿನಾಯಿತಿ ಅರ್ಜಿಯನ್ನು ತಿರಸ್ಕರಿಸಿತ್ತು. ಆ ಬಳಿಕ ಸುಪ್ರೀಂಗೆ ಹೋಗಿದ್ದ ಸಿಂಗ್, ‘ಕಳೆದ 20 ವರ್ಷಗಳಿಂದ ನಾನು ರಾಷ್ಟ್ರೀಯ ರೈಫಲ್‌ನಲ್ಲಿ ನಿಯೋಜಿತ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿದ್ದೇನೆ. ಹಾಗಾಗಿ ಶಿಕ್ಷೆಯಿಂದ ವಿನಾಯಿತಿ ನೀಡಬೇಕು’ ಎಂದು ಕೋರಿದ್ದ.ಈ ಅರ್ಜಿಯ ವಿಚಾರಣೆ ನಡೆಸಿದ ಪೀಠ, ‘ಸೇನೆಯಲ್ಲಿರುವುದು ಮನೆಯಲ್ಲಿ ದೌರ್ಜನ್ಯ ಎಸಗುವುದರಿಂದ ನಿಮಗೆ ವಿನಾಯಿತಿ ನೀಡುವುದಿಲ್ಲ. ಇದು ನೀವು ದೈಹಿಕವಾಗಿ ಎಷ್ಟು ಸದೃಢರಾಗಿದ್ದೀರಿ ಮತ್ತು ಹೆಂಡತಿಯನ್ನು ಹೇಗೆ ಕೊಂದಿದ್ದೀರಿ ಎಂಬುದನ್ನು ತೋರಿಸುತ್ತದೆ’ ಎಂದು ತೀಕ್ಷ್ಣವಾಗಿ ಉತ್ತರಿಸಿ, ಅರ್ಜಿಯನ್ನು ತಿರಸ್ಕರಿಸಿದೆ.

==

3 ರಕ್ಷಣಾ ಪಡೆಗಳಿಗೆ ಆದೇಶದ ಅಧಿಕಾರ ಸಿಡಿಎಸ್‌ಗೆ

ಸೇನೆ, ನೌಕಾದಳ, ವಾಯುಪಡೆ ನಡುವೆ ಹೆಚ್ಚಿನ ಸಮನ್ವಯಕ್ಕೆ ಕ್ರಮ

ನವದೆಹಲಿ: ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ನಡುವೆ ಹೆಚ್ಚಿನ ಸಮನ್ವಯ ತರುವ ಸಲುವಾಗಿ ಅವುಗಳಿಗೆ ಆದೇಶ ನೀಡುವ ಅಧಿಕಾರವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್ ಚೌಹಾಣ್ ಅವರಿಗೆ ನೀಡಿದ್ದಾರೆ.

‘ಸಶಸ್ತ್ರ ಪಡೆಗಳ ಆಧುನೀಕರಣ ಮತ್ತು ರೂಪಾಂತರದತ್ತ ಒಂದು ಪ್ರಮುಖ ಹೆಜ್ಜೆಯಾಗಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 3 ಪಡೆಗಳಿಗೂ ಜಂಟಿ ಸೂಚನೆಗಳು ಮತ್ತು ಜಂಟಿ ಆದೇಶಗಳನ್ನು ಹೊರಡಿಸಲು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗೆ ಅಧಿಕಾರ ನೀಡಿದ್ದಾರೆ’ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.ಈ ಹಿಂದೆ 2 ಅಥವಾ ಹೆಚ್ಚಿನ ಸೇವೆಗಳಿಗೆ ಸಂಬಂಧಿಸಿದ ಸೂಚನೆಗಳು ಮತ್ತು ಆದೇಶಗಳನ್ನು ಪ್ರತಿ ಪಡೆಗೆ ಪ್ರತ್ಯೇಕವಾಗಿ ನೀಡಲಾಗುತ್ತಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ