ವಿಮಾನ, ನಿಲ್ದಾಣಗಳ ಕಳಪೆ ನಿರ್ವಹಣೆ
ನವದೆಹಲಿ: ಅಹಮದಾಬಾದ್‌ನ ಘೋರ ಏರ್ ಇಂಡಿಯಾ ದುರಂತದ ಬಳಿಕ ಹಲವು ವಿಮಾನಗಳಲ್ಲಿ ಬೆನ್ನುಬೆನ್ನಿಗೆ ದೋಷಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ವಾಯುಯಾನ ಕಣ್ಗಾವಲು ಸಂಸ್ಥೆ ಡಿಜಿಸಿಎ ವಿಮಾನ ನಿಲ್ದಾಣಗಳಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ, ಹಲವು ವಿಮಾನಗಳ ಚಕ್ರಗಳು ಕಿತ್ತುಹೋಗಿದ್ದರೆ, ಕೆಲ ನಿಲ್ದಾಣಗಳಲ್ಲಿ ರನ್‌ವೇ ಮೇಲಿನ ಗೆರೆಗಳೇ ಅಳಿಸಿ ಹೋಗಿರುವುದು ಕಂಡುಬಂದಿದೆ. ಈ ರೀತಿ ಅಪಘಾತಕ್ಕೆ ಕಾರಣವಾಗಬಹುದಾದ ಗಂಭೀರ ಸಮಸ್ಯೆಗಳು ಕಂಡುಬಂದಿದೆ.
ಹಲವು ಕಡೆಗಳಲ್ಲಿ ಸಾಫ್ಟ್‌ವೇರ್‌ಗಳನ್ನು ಪ್ರಸ್ತುತ ಆವೃತ್ತಿಗೆ ನವೀಕರಿಸಲಾಗಿರಲ್ಲ. ಕೆಲ ವಿಮಾನಗಳಲ್ಲಿ ಮೊದಲೇ ಪತ್ತೆಯಾಗಿದ್ದ ದೋಷಗಳು ಪುನರಾವರ್ತಿಸುತ್ತಿದ್ದು, ನಿರ್ವಹಣೆಯ ಕೊರತೆಯನ್ನು ಎತ್ತಿತೋರಿಸುತ್ತಿದ್ದವು. ಟ್ರಾಲಿಗಳು ಹಾಳಾಗಿದ್ದು, ಕೆಲ ವಿಮಾನಗಳ ಆಸನಗಳ ಕೆಳಗೆ ಲೈಫ್ ಜ್ಯಾಕೆಟ್‌ಗಳಿರಲಿಲ್ಲ. ಹಲವು ದೋಷಗಳು ಲಾಗ್‌ಬುಕ್‌ನಲ್ಲಿ ದಾಖಲಾಗಿರಲಿಲ್ಲ.ವಿಮಾನ ಕಾರ್ಯಾಚರಣೆ, ವಾಯುಸಂಚಾರದ ಯೋಗ್ಯತೆ, ರ‍್ಯಾಂಪ್ ಸುರಕ್ಷತೆ, ವಾಯು ಸಂಚಾರ ನಿಯಂತ್ರಣ, ಸಂವಹನ, ಸಂಚರಣೆ ವ್ಯವಸ್ಥೆ ಮತ್ತು ವಿಮಾನ ಹಾರಾಟಕ್ಕೆ ಮುಂಚಿನ ಮೌಲ್ಯಮಾಪನಗಳಂತಹ ವಿಷಯಗಳನ್ನು ಪರಿಶೀಲಿಸಲಾಯಿತು. ಬಳಿಕ ಡಿಜಿಸಿಎ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಲೋಪದೋಷಗಳನ್ನು 7 ದಿನಗಳ ಒಳಗಾಗಿ ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದೆ.