ಪಟನಾ: ಕರ್ನಾಟಕ ಚುನಾವಣೆ ಬಳಿಕ ಬಹುತೇಕ ಎಲ್ಲ ರಾಜ್ಯಗಳಲ್ಲಿ ಚುನಾವಣೆ ವೇಳೆ ಗ್ಯಾರಂಟಿ ಭರವಸೆಗಳ ಅಬ್ಬರವೋ ಅಬ್ಬರ. ಕರ್ನಾಟಕ ಬಳಿಕ ಚುನಾವಣೆ ನಡೆದ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಈ ಗ್ಯಾರಂಟಿಗಳು ಕೆಲಸ ಮಾಡಿದವು. ಆದರೆ ಬಿಹಾರದಲ್ಲಿ ಎಲ್ಲರ ನಿರೀಕ್ಷೆ ಮೀರಿ ಗ್ಯಾರಂಟಿಗಳನ್ನು ಘೋಷಿಸಿದ್ದ ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಮತದಾರ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಈ ಕೂಟಕ್ಕಿಂತ ಕಡಿಮೆ ಪ್ರಮಾಣದ ಗ್ಯಾರಂಟಿ ಭರವಸೆ ನೀಡಿದ್ದ ಜೆಡಿಯು-ಬಿಜೆಪಿಯನ್ನು ಅಪ್ಪಿಕೊಂಡಿದ್ದಾನೆ. ಈ ಮೂಲಕ ಈಡೇರಿಸಲು ಸಾಧ್ಯವಾಗದ ಗ್ಯಾರಂಟಿ ಘೋಷಣೆಗಳು ಚುನಾವಣೆಯಲ್ಲಿ ಗೆಲುವಿಗೆ ಮಾನದಂಡ ಆಗವು ಎಂಬ ಸಂದೇಶ ರವಾನಿಸಿದ್ದಾನೆ.
ಆದರೆ ಇದರ ಬದಲು ಕೆಲವು ಕೈಗೆಟಕುವ ಗ್ಯಾರಂಟಿಗಳನ್ನು ಬಿಜೆಪಿ-ಜೆಡಿಯು ಕೂಟ ಘೋಷಿಸಿತ್ತು. ಅವುಗಳಿಗೆ ಮತದಾರ ಮಣೆ ಹಾಕಿದ್ದಾನೆ.
ಬಿಹಾರದ ಪ್ರತಿ ಮನೆಗೆ ಉದ್ಯೋಗ ಮತ್ತು ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ ಎಂಬುದು ಕಾಂಗ್ರೆಸ್-ಆರ್‌ಜೆಡಿ ನೀಡಿದ್ದ 20 ಗ್ಯಾರಂಟಿಗಳಲ್ಲಿ ಪ್ರಧಾನವಾಗಿತ್ತು. ಮಹಿಳೆಯರಿಗೆ ಮಾಸಿಕ 2,500 ರು., 200 ಯುನಿಟ್ ಉಚಿತ ವಿದ್ಯುತ್, 500 ರು.ಗೆ ಗ್ಯಾಸ್ ಸಿಲಿಂಡರ್, ಮಹಿಳೆಯರಿಗೆ ಉಚಿತ ಬಸ್ ಸೇವೆ, ಜೀವಿಕಾ ದೀದೀಗಳಿಗೆ 30,000 ರು. ಸಂಬಳ, ವೃದ್ಧರಿಗೆ 1,500 ರು. ಮಾಸಿಕ ಪಿಂಚಣಿ, ಅಂಗವಿಕಲರಿಗೆ 3,000 ರು. ಮಾಸಿಕ ಪಿಂಚಣಿ ಮತ್ತು 25 ಲಕ್ಷ ರು.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡುವ ಭರವಸೆಗಳು ಪ್ರಮುಖವಾಗಿದ್ದವು. ಇವುಗಳಲ್ಲಿ ಬಚಿತ ಬಸ್ ಸೇವೆ ಹಾಗೂ ಉಚಿತ ವಿದ್ಯುತ್ ಕರ್ನಾಟಕ ಮಾದರಿ ಆಗಿದ್ದವು.
ಆದರೆ ಇದರ ಬದಲು ಎನ್‌ಡಿಎ, ಒಟ್ಟಾರೆ 1 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತು. ಇದು ಸರ್ಕಾರಿ ಆಗಬಹುದು ಅಥವಾ ಖಾಸಗಿ ಆಗಬಹುದು. ಒಟ್ಟಾರೆ ಉದ್ಯೋಗ ಸೃಷ್ಟಿಯದಾಗಿತ್ತು. ಇನ್ನು ಚುನಾವಣೆಗೂ ಮೊದಲೇ 10 ಸಾವಿರ ರು.ಗಳನ್ನು ಪ್ರತಿ ಮಹಿಳೆಯರ ಖಾತೆಗೆ ನಿತೀಶ್ ಸರ್ಕಾರ ಜಮೆ ಮಾಡಿ ಆಗಿತ್ತು. ಎನ್‌ಡಿಎ ಉಚಿತ ವಿದ್ಯುತ್ ಭರವಸೆ ನೀಡಿತ್ತಾದರೂ ಅದು 125 ಯುನಿಟ್‌ಗೆ ಸೀಮಿತ ಆಗಿತ್ತು ಹಾಗೂ ಬಡವರಿಗೆ ಮಾತ್ರ ನೀಡುವುದಾಗಿ ಹೇಳಿತ್ತು. ಇಂಥ ಕೈಗೆಟಕುವ ಭರವಸೆಗಳನ್ನು ಮತದಾರರು ನಂಬಿದ್ದಾರೆ. ಇದರ ಬದಲು ಪ್ರತಿ ಮನೆಗೂ ಸರ್ಕಾರಿ ನೌಕರಿಯಂಥ ಭರವಸೆಗಳಿಗೆ ಮನ್ನಣೆ ನೀಡಿಲ್ಲ.