ಚುನಾವಣೆ ಎಕ್ಸಿಟ್‌ ಪೋಲ್‌ಗಳ ಬಗ್ಗೆ ಆತ್ಮಾವಲೋಕನ ಅಗತ್ಯ : ಕೇಂದ್ರ ಚುನಾವಣಾ ಆಯೋಗ

KannadaprabhaNewsNetwork |  
Published : Oct 16, 2024, 12:32 AM ISTUpdated : Oct 16, 2024, 07:25 AM IST
ಚುನಾವಣೆ ದಿನಾಂಕ ಘೋಷಣೆ | Kannada Prabha

ಸಾರಾಂಶ

ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಕ್ಕೆ ಒಂದೇ ಹಂತದಲ್ಲಿ, ಜಾರ್ಖಂಡ್‌ ವಿಧಾನಸಭೆಯ 81 ಕ್ಷೇತ್ರಕ್ಕೆ 2 ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಕ್ಕೆ ಒಂದೇ ಹಂತದಲ್ಲಿ, ಜಾರ್ಖಂಡ್‌ ವಿಧಾನಸಭೆಯ 81 ಕ್ಷೇತ್ರಕ್ಕೆ 2 ಹಂತದಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಪಾಲಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹಿನ್ನೆಲೆ ಉಭಯ ರಾಜ್ಯಗಳ ಬಲಾಬಲದ ಕುರಿತು ನೋಟ ಇಲ್ಲಿದೆ.

ಮಹಾರಾಷ್ಟ್ರ: ಬಿಜೆಪಿ ಕೂಟ, ಕಾಂಗ್ರೆಸ್‌ ಕೂಟಕ್ಕೆ ಮಹಾಪ್ರತಿಷ್ಠೆ

ಮುಂಬೈ: ಹಾಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆಬಣ)- ಎನ್‌ಸಿಪಿ (ಅಜಿತ್‌ ಬಣ) ಮೈತ್ರಿಕೂಟ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಕಾಂಗ್ರೆಸ್‌-ಎನ್‌ಸಿಪಿ (ಶರದ್ ಬಣ)-ಶಿವಸೇನೆ (ಠಾಕ್ರೆ ಬಣ) ಮೈತ್ರಿಕೂಟ ಸಾಹಸ ನಡೆಸುತ್ತಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿಗೆ ನ.20ರಂದು ನಡೆಯುವ ವಿಧಾನಸಭೆ ಚುನಾವಣೆ ಬಿಜೆಪಿ ಕೂಟ ಹಾಗೂ ಕಾಂಗ್ರೆಸ್‌ ಕೂಟಗಳ ನಡುವೆ ಪ್ರತಿಷ್ಠೆಯ ಸಮರವಾಗಲಿದೆ.ಕಳೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅವಿಭಜಿತ ಶಿವಸೇನೆ ಕೂಟ 161 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿತ್ತು. ಆದರೆ ಸಿಎಂ ಯಾರಾಗಬೇಕು ಎಂದು ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಶಿವಸೇನೆ ಪ್ರಮುಖ ಉದ್ಧವ ಠಾಕ್ರೆ ನಡುವೆ ‘ಜಂಗಿಕುಸ್ತಿ’ ನಡೆದಿತ್ತು. ಹೀಗಾಗಿ ಬಿಜೆಪಿ ಸಖ್ಯದಿಂದ ಹೊರಬಂದು ಶಿವಸೇನೆ ಕಾಂಗ್ರೆಸ್‌-ಎನ್‌ಸಿಪಿ ಜತೆ ಸೇರಿ ಸರ್ಕಾರ ರಚಿಸಿತ್ತು. ಠಾಕ್ರೆ ಸಿಎಂ ಆಗಿದ್ದರು.

ಆದರೆ ನಂತರ ಶಿವಸೇನೆಯಲ್ಲಿ ಏಕನಾಥ ಶಿಂಧೆ ಬಂಡಾಯ ಎದ್ದು ಬಿಜೆಪಿ ಜತೆ ಕೈಜೋಡಿಸಿದರು. ಆಗ ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಸರ್ಕಾರ (ಮಹಾ ವಿಕಾಸ ಅಘಾಡಿ ಕೂಟ) ಪತನಗೊಂಡು ಬಿಜೆಪಿ-ಶಿಂಧೆ ಸೇನೆ ಸರ್ಕಾರ ಅಧಿಕಾರಕ್ಕೆ ಬಂದಿತ್ತು.ಆದರೆ ಇತ್ತೀಚೆಗೆ ‘ಮಹಾಯುತಿ’ ಎಂದು ಕರೆಯಲ್ಪಡುವ ಆಡಳಿತ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ 48 ಸಂಸದೀಯ ಸ್ಥಾನಗಳಲ್ಲಿ ಕೇವಲ 17 ಸ್ಥಾನಗಳನ್ನು ಗೆದ್ದಿದೆ. ಇದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಆದರೆ ಇತ್ತೀಚಿನ ಹರ್ಯಾಣ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕೇಸರಿ ಕೂಟದಲ್ಲಿ ಹುಮ್ಮಸ್ಸು ಮೂಡಿಸಿದೆ.

==

ಎಕ್ಸಿಟ್‌ ಪೋಲ್‌ ಬಗ್ಗೆ ಆತ್ಮಾವಲೋಕನ ಅಗತ್ಯ: ಆಯೋಗ

ನವದೆಹಲಿ: ಎಕ್ಸಿಟ್‌ ಪೋಲ್ ವಿಚಾರದಲ್ಲಿ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಮತ್ತು ಸರಿಪಡಿಸಿಕೊಳ್ಳುವ ಸಮಯ ಬಂದಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.

2 ರಾಜ್ಯಗಳ ಚುನಾವಣೆ ಘೋಷಣೆ ನಿಮಿತ್ತ ನಡೆದ ಸುದ್ದಿಗೋಷ್ಠಿಯಲ್ಲಿ ಅವರಿಗೆ ಪತ್ರಕರ್ತರು, ‘ಇತ್ತೀಚೆಗೆ ಹರ್ಯಾಣ ಹಾಗೂ ಕಾಶ್ಮೀರ ಎಕ್ಸಿಟ್‌ ಪೋಲ್‌ಗಳು ಸಂಪೂರ್ಣ ವಿಫಲವಾದವು’ ಎಂದು ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ರಾಜೀವ್‌, ‘ನಾವು ಚುನಾವಣೋತ್ತರ ಸಮೀಕ್ಷೆ ನಿಯಂತ್ರಿಸುವುದಿಲ್ಲ. ಆದರೆ ಆ ಬಗ್ಗೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಮತ ಎಣಿಕೆ ಆರಂಭಿಸುವುದೇ 8.30ಕ್ಕೆ. ಆದರೆ ಸುದ್ದಿ ವಾಹಿನಿಗಳು 8.10ಕ್ಕೆಲ್ಲಾ ಆರಂಭಿಕ ಟ್ರೆಂಡ್‌ ನೀಡಲು ಆರಂಭಿಸುತ್ತವೆ. ಇದು ಅಸಂಬದ್ಧ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.ಇನ್ನು ಎಕ್ಸಿಟ್‌ ಪೋಲ್‌ ಪ್ರಕಾರ ಹರ್ಯಾಣ ಫಲಿತಾಂಶ ಬಂದಿಲ್ಲ ಎಂಬ ಕಾಂಗ್ರೆಸ್‌ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಿರೀಕ್ಷೆ ಮತ್ತು ವಾಸ್ತವದ ನಡುವಿನ ಅಂತರವು ಹತಾಶೆಗೆ ಕಾರಣವಾಗಬಹುದು. ಎಕ್ಸಿಟ್‌ ಪೋಲ್‌ ಪ್ರಕಾರವೇ ಫಲಿತಾಂಶ ನಿರೀಕ್ಷಿಸಲಾಗದು’ ಎಂದರು.

==

ಜಾರ್ಖಂಡಲ್ಲಿ ಜೆಎಂಎಂ-ಬಿಜೆಪಿ ಜಂಗಿಕುಸ್ತಿ

ರಾಂಚಿ: 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನ.13 ಹಾಗೂ 20ರಂದು ಮತದಾನ ನಡೆಯಲಿದ್ದು, ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್‌ ನೇತೃತ್ವದ ಒಕ್ಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನೇರ ಸ್ಪರ್ಧೆಗೆ ವೇದಿಕೆ ಸಿದ್ಧವಾಗಿದೆ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಉಭಯ ಕೂಟಗಳಿಗೆ ಸಮಾನ ಅವಕಾಶವಿದೆ.

2019ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ 47 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು. ಆದರೆ ಭ್ರಷ್ಟಾಚಾರ ಆರೋಪದ ಕಾರಣ ಬಂಧಿತರಾದ ಸಿಎಂ ಹೇಮಂತ ಸೊರೇನ್‌ ಈ ವರ್ಷಾರಂಭದಲ್ಲಿ ರಾಜೀನಾಮೆ ನೀಡಿದ್ದರು ಹಾಗೂ ಚಂಪೈ ಸೊರೇನ್‌ ಸಿಎಂ ಆಗಿದ್ದರು.ಆದರೆ ಹೇಮಂತ್‌ ಜಾಮೀನು ಮೇಲೆ ಹೊರಬರುತ್ತಿದ್ದಂತೆಯೇ ಮತ್ತೆ ಅವರಿಗೆ ಪಟ್ಟ ಕಟ್ಟಲಾಯಿತು ಹಾಗೂ ಚಂಪೈ ಅವರನ್ನು ಕೆಳಗಿಳಿಸಲಾಯಿತು. ಇದರಿಂದ ಕೋಪಗೊಂಡ ಚಂಪೈ, ಈಗ ಜೆಎಂಎಂಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಇದು 5 ವರ್ಷ ಬಳಿಕ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಬಿಜೆಪಿ ಆಸೆಗೆ ನೀರೆರೆದಿದೆ.

ಬಿಜೆಪಿ ಇಲ್ಲಿ ಎಜೆಎಸ್‌ಯು, ಜೆಡಿಯು ಹಾಗೂ ಎಲ್‌ಜೆಪಿ (ರಾಮ್ ವಿಲಾಸ್) ಪಕ್ಷಗಳೊಂದಿಗೆ ಮೈತ್ರಿ ಮಾತುಕತೆಯಲ್ಲಿ ನಿರತವಾಗಿದೆ. ಸೊರೇನ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಅಜೆಂಡಾ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.ಇನ್ನು ಜೆಎಂಎಂ ನೇತೃತ್ವದ ಮೈತ್ರಿಕೂಟವು ಎಲ್ಲಾ 81 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಮಂತ ಸೊರೇನ್‌ ಹೇಳಿದ್ದಾರೆ ಆದಾಗ್ಯೂ ಕಾಂಗ್ರೆಸ್‌ ಹಾಗೂ ಇತರ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮನೆಮನೆಗೆ ಆಯುರ್ವೇದ ಅಗತ್ಯ : ಸಚ್ಚಿದಾನಂದ ಶ್ರೀ
ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ