ಕೊಚ್ಚಿ: ಕೇರಳ ಚಿತ್ರರಂಗದಲ್ಲಿನ ಸೆಕ್ಸ್ ಹಗರಣ ಮತ್ತಷ್ಟು ವ್ಯಾಪಕವಾಗತೊಡಗಿದ್ದು, ಇದೀಗ ಮತ್ತೊಬ್ಬ ಖ್ಯಾತ ನಟ ನಿವಿನ್ ಪೌಳಿ ಮೇಲೂ ಅತ್ಯಾಚಾರದ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ವರ್ಷ ನಿವಿನ್, ನಿರ್ಮಾಪಕ ಎ.ಕೆ.ಸುನಿಲ್ ಮತ್ತು ಇತರೆ ನಾಲ್ವರು, ಚಿತ್ರದಲ್ಲಿ ಅವಕಾಶ ನೀಡುವ ಕುರಿತು ಮಾತುಕತೆ ನಡೆಸಲು ದುಬೈಗೆ ಕರೆಸಿಕೊಂಡಿದ್ದರು. ಅಲ್ಲಿನ ಹೋಟೆಲ್ ಕೋಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು 40 ವರ್ಷದ ಮಹಿಳೆಯೊಬ್ಬರು ಮಂಗಳವಾರ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಓರ್ವ ಮಹಿಳೆ, ನಿವಿನ್ ಸೇರಿದಂತೆ 6 ಜನರ ವಿರುದ್ಧ ಎರ್ನಾಕುಲಂ ಪೊಲೀಸರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮಹಿಳೆಯನ್ನು ಮೊದಲ ಆರೋಪಿಯಾಗಿ ಹೆಸರಿಸಿದ್ದರೆ, ನಿವಿನ್ ಅವರನ್ನು 6ನೇ ಆರೋಪಿಯಾಗಿ ಹೆಸರಿಸಲಾಗಿದೆ.
ನಿವಿನ್ ಅವರು ಬೆಂಗಳೂರು ಡೇಸ್ ಚಿತ್ರದ ಮೂಲಕ ಬಹಳ ಖ್ಯಾತಿಯನ್ನು ಗಳಿಸಿದ್ದರು. ಇದಲ್ಲದೇ ಮಲರ್ವಾಡಿ ಆರ್ಟ್ಸ್ ಕ್ಲಬ್, ನೇರಂ, ಪ್ರೇಮಂ, 1983, ತುರಮುಖಂ, ಮೂತೋನ್ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.
ಬಾಲಿವುಡ್‌ನಲ್ಲೂ ಇದೆ ಸೆಕ್ಸ್ ಹಗರಣ: ನಟಿ ಸೋಮಿ
ನವದೆಹಲಿ: ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮಹಿಳೆಯರ ಲೈಂಗಿಕ ಶೋಷಣೆಯ ಕುರಿತು ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟ ನ್ಯಾ। ಹೇಮಾ ಸಮಿತಿಯ ವರದಿಯ ಬೆನ್ನಲ್ಲೇ ಬಾಲಿವುಡ್ ನಟಿ ಸೋಮಿ ಅಲಿ ಈ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
‘ಚಿತ್ರರಂಗದಲ್ಲಿ ಔದ್ಯೋಗಿಕ ಉನ್ನತಿಗಾಗಿ ಕೆಲ ಪುರುಷರ ಕೋಣೆಯ ಬಾಗಿಲು ಬಡಿಯುವುದು ಅಗತ್ಯ ಎಂದು ನನಗೆ ಹೇಳಲಾಗಿತ್ತು. ಜೊತೆಗೆ ಸಮಾಜದ ಮುಂದೆ ಸಭ್ಯ ಗೃಹಸ್ಥರ ಮುಖವಾಡ ತೊಟ್ಟ ಕೆಲ ಬಾಲಿವುಡ್ ನಟರ ಕೋಣೆಯಿಂದ ನಟಿಯರು ನೋವಿನಲ್ಲಿ ಹೊರಬರುವುದನ್ನು ಕಂಡಿದ್ದೇನೆ’ ಎಂದು ತಮಗಾದ ಕಹಿ ಅನುಭವವನ್ನು ಹಂಚಿಕೊಂಡ ಅಲಿ, ಹೇಮಾ ಸಮಿತಿಯ ವರದಿಯನ್ನು ಎಲ್ಲಾ ಚಿತ್ರರಂಗಗಳು ಎಚ್ಚರಿಕೆಯ ಕರೆಗಂಟೆಯೆಂದು ಪರಿಗಣಿಸಬೇಕು. ಕಲಾವಿದರು ನಿರ್ಭೀತರಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಮಹಿಳೆಯರನ್ನು ರಕ್ಷಿಸಿ ಅವರನ್ನು ಸಬಲರನ್ನಾಗಿ ಮಾಡುವ ಅಗತ್ಯವಿದೆ ಎಂದರು.