ಮಾಲೆ (ಮಾಲ್ಡೀವ್ಸ್): ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಶೇ.33 ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳನ್ನು ಆಧರಿಸಿ ಮಾಲ್ಡೀವ್ಸ್ ವೆಬ್‌ಸೈಟ್‌ವೊಂದು ವರದಿ ಮಾಡಿದೆ.
2023ರ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷದ ಆರಂಭದಿಂದ ಮಾರ್ಚ್ 4ರ ವೇಳೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.
ಈ ವರ್ಷದ ಆರಂಭದಿಂದ ಮಾರ್ಚ್ 2ರ ಹೊತ್ತಿಗೆ ಭಾರತೀಯ ಪ್ರವಾಸಿಗರ ಸಂಖ್ಯೆ 27,224 ದಾಖಲಾಗಿದೆ. ಇದು ಕಳೆದ ವರ್ಷಕ್ಕಿಂತ 13,830 ಕಡಿಮೆಯಾಗಿದೆ ಎಂದು ತಿಳಿಸಿದೆ.
ಅಲ್ಲದೆ, ಕಳೆದ ವರ್ಷ ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ನಂ.2 ಇದ್ದ ಭಾರತ ಈ ಸಲ 6ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಮಾರುಕಟ್ಟೆ ಪಾಲು ಶೇ.10ರಿಂದ 6ಕ್ಕೆ ಇಳಿದಿದೆ.
ಕೆಲವು ತಿಂಗಳುಗಳ ಹಿಂದೆ ಭಾರತ-ಮಾಲ್ಡೀವ್ಸ್ ನಡುವೆ ಪ್ರವಾಸೋದ್ಯಮ ಹಾಗೂ ರಾಜತಾಂತ್ರಿಕ ಸಂಘರ್ಷ ಆರಂಭವಾಗಿತ್ತು.
ಮಾಲ್ಡೀವ್ಸ್‌ಗೆ ಪ್ರತಿಯಾಗಿ ಭಾರತವು ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು ಮಾಲ್ಡೀವ್ಸ್ ಕೆಂಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ಸಾವಿರಾರು ಭಾರತೀಯರು ಮಾಲ್ಡೀವ್ಸ್ ಪ್ರವಾಸ ಬಹಿಷ್ಕರಿಸಿದ್ದಾರೆ.