ನವದೆಹಲಿ: ಡಬಲ್ ಎಂಜಿನ್ ಸರ್ಕಾರದ ಮೂಲಕ ವಿಕಸಿತ ಭಾರತವನ್ನು ನಿರ್ಮಿಸುತ್ತೇವೆ ಎಂದು ಬೀಗುವ ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲೇ ಕಳೆದ 3 ವರ್ಷಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರ ನೀಡುವ ಸೌಲಭ್ಯಗಳ ಪ್ರತಿಬಿಂಬವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ‘ತಮ್ಮ ತವರು ರಾಜ್ಯ ಗುಜರಾತ್‌ನಲ್ಲೇ 25 ಸಾವಿರಕ್ಕೂ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಪ್ರಧಾನಿ ಮೋದಿಯವರ ಮೌನ ಜಾಣ ಕಿವುಡಾಗಿದೆ.
ಅಭಿವೃದ್ಧಿ ಪರ್ವದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಬೀಗುವ ಗುಜರಾತ್ ರಾಜ್ಯದಲ್ಲಿ ಈ ಪ್ರಮಾಣದ ಆತ್ಮಹತ್ಯೆಯ ಅಂಕಿಅಂಶಗಳು ಅಲ್ಲಿನ ನಿಜಬಣ್ಣವನ್ನು ಬಯಲು ಮಾಡಿವೆ.
ಈ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯ ಸರ್ಕಾರಕ್ಕೆ ಜನರ ಮೂಲಸೌಕರ್ಯಕ್ಕೆ ಎಲ್ಲಕ್ಕಿಂತ ಮೊದಲ ಆದ್ಯತೆಯನ್ನು ನೀಡಬೇಕೆಂದು ಆಗ್ರಹಿಸುತ್ತೇನೆ’ ಎಂದು ತಿಳಿಸಿದರು.
ಗುಜರಾತ್‌ನಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ 495 ವಿದ್ಯಾರ್ಥಿಗಳನ್ನು ಒಳಗೊಂಡಂತೆ 25,478 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸದನಕ್ಕೆ ತಿಳಿಸಿದ್ದರು.