ದೀದಿಗಿರಿ ಬಳಿಕ ಮಮತಾ ಲಾಯರ್‌ಗಿರಿ

KannadaprabhaNewsNetwork |  
Published : May 15, 2026, 01:45 AM ISTUpdated : May 15, 2026, 04:37 AM IST
Mamatha Banerjee

ಸಾರಾಂಶ

15 ವರ್ಷ ಮುಖ್ಯಮಂತ್ರಿಯಾಗಿ, ಇತ್ತೀಚಿನ ಚುನಾವಣೆಯಲ್ಲಿ ಸೋಲುಕಂಡಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಗುರುವಾರ ಕೋಲ್ಕತಾ ಹೈಕೋರ್ಟಗೆ ಹಾಜರಾಗಿ ವಕೀಲಿಕೆ ವೃತ್ತಿ ಪುನಾರಂಭಿಸಿದರು. ಅವರು ಕೋರ್ಟ್‌ ಪ್ರವೇಶಿಸುವ ವೇಳೆ ಕೆಲ ವ್ಯಕ್ತಿಗಳು ಮಮತಾ ವಿರುದ್ಧ ಚೋರ್‌ (ಕಳ್ಳಿ) ಎಂದು ಘೋಷಣೆ ಕೂಗಿದರು 

 ಕೋಲ್ಕತಾ: 15 ವರ್ಷ ಮುಖ್ಯಮಂತ್ರಿಯಾಗಿ, ಇತ್ತೀಚಿನ ಚುನಾವಣೆಯಲ್ಲಿ ಸೋಲುಕಂಡಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಗುರುವಾರ ಕೋಲ್ಕತಾ ಹೈಕೋರ್ಟಗೆ ಹಾಜರಾಗಿ ವಕೀಲಿಕೆ ವೃತ್ತಿ ಪುನಾರಂಭಿಸಿದರು. ಅವರು ಕೋರ್ಟ್‌ ಪ್ರವೇಶಿಸುವ ವೇಳೆ ಕೆಲ ವ್ಯಕ್ತಿಗಳು ಮಮತಾ ವಿರುದ್ಧ ಚೋರ್‌ (ಕಳ್ಳಿ) ಎಂದು ಘೋಷಣೆ ಕೂಗಿದ ಪ್ರಕರಣ ಕೂಡಾ ನಡೆಯಿತು.

ಇತ್ತೀಚಿನ ಚುನಾವಣಾ ಫಲಿತಾಂಶ ಬಳಿಕ ಬಂಗಾಳದಲ್ಲಿ ಹಿಂಸಾಚಾರ ನಡೆದಿತ್ತು. ಈ ಸಂಬಂಧ ಟಿಎಂಸಿ ನಾಯಕ ಕಲ್ಯಾಣ್‌ ಬಂಡೋಪಾಧ್ಯಾಯ ಅವರ ಪುತ್ರ ಶ್ರೀಶನ್ಯ ಬಂಡೋಪಾಧ್ಯಾಯ ಅರ್ಜಿ ಸಲ್ಲಿಸಿದ್ದರು.

ಅವರ ಪರ ವಕೀಲರಾಗಿ ಕೋರ್ಟ್‌ಗೆ ಹಾಜರಾದ ಮಮತಾ, ‘ಫಲಿತಾಂಶ ಪ್ರಕಟದ ಬಳಿಕ ರಾಜ್ಯದಲ್ಲಿ 10 ರಾಜಕೀಯ ಉದ್ದೇಶದ ಹತ್ಯೆ ನಡೆದಿವೆ. ಮಹಿಳೆಯರು ಮತ್ತು ಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ. ಟಿಎಂಸಿ ಕಚೇರಿಗಳ ಮೇಲೆ ದಾಳಿಯಾಗಿವೆ. ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇಷ್ಟೆಲ್ಲಾ ಆದರೂ ಪೊಲೀಸರು ಎಫ್‌ಐಆರ್‌ ದಾಖಲಿಸುತ್ತಿಲ್ಲ. ಹೀಗಾಗಿ ಕೂಡಲೇ ಸಂತ್ರಸ್ತರಿಗೆ ನ್ಯಾಯಾಲಯ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿಕೊಂಡರು. ಅಲ್ಲದೆ ತಮ್ಮ ಆರೋಪಕ್ಕೆ ಪೂರಕವಾಗಿ ಕೆಲವೊಂದಿಷ್ಟು ಫೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ದೀದಿ ವಕೀಲಿಕೆ ಬಗ್ಗೆ ವರದಿ ಕೇಳಿದ ಬಾರ್‌ ಕೌನ್ಸಿಲ್‌

ನವದೆಹಲಿ: ಸಿಎಂ ಹುದ್ದೆಯಿಂದ ಇಳಿದ ಬಳಿಕ ಕರಿಕೋಟು ತೊಟ್ಟು ಮಮತಾ ಬ್ಯಾನರ್ಜಿ ಕಲ್ಕತಾ ಹೈಕೋರ್ಟ್‌ನಲ್ಲಿ ವಕೀಲಿಕೆಗೆ ಹಾಜರಾಗಿರುವ ಬಗ್ಗೆ ರಾಷ್ಟ್ರೀಯ ವಕೀಲರ ಸಂಘ ಮಾಹಿತಿ ಕೇಳಿದೆ. ಜತೆಗೆ, ವಕೀಲರಾಗಿ ಅವರ ನೋಂದಣಿ, ಸದ್ಯದ ಸದಸ್ಯತ್ವ ಸ್ಥಿತಿಯ ಬಗ್ಗೆ 48 ತಾಸುಗಳೊಳಗೆ ದಾಖಲೆ ಸಹಿತ ವರದಿ ಸಲ್ಲಿಸುವಂತೆ ರಾಜ್ಯ ವಕೀಲರ ಸಂಘಕ್ಕೆ ತಾಕೀತು ಮಾಡಿದೆ. 

ಸಾಂವಿಧಾನಿಕ ಹುದ್ದೆಗೇರಿದವರ ವಕೀಲಿಕೆ ಪರವಾನಗಿ ರದ್ದಾಗುತ್ತದೆ

ನಿಯಮದ ಪ್ರಕಾರ ಸಾಂವಿಧಾನಿಕ ಹುದ್ದೆಗೇರಿದವರ ವಕೀಲಿಕೆ ಪರವಾನಗಿ ರದ್ದಾಗುತ್ತದೆ. ಮತ್ತೆ ವೃತ್ತಿಯನ್ನು ಆರಂಭಿಸಲು ಅದನ್ನು ಅಪ್‌ಡೇಟ್‌ ಮಾಡಿಸುವುದು ಕಡ್ಡಾಯ. ಆದ್ದರಿಂದ, 2011ರಿಂದ 2026ರ ವರೆಗೆ ಸಿಎಂ ಆಗಿದ್ದ ಮಮತಾ ವಕೀಲರ ಪಟ್ಟಿಯಿಂದ ಅಮಾನತುಗೊಳ್ಳಲು ಅರ್ಜಿ ಸಲ್ಲಿಸಿದ್ದರೇ? ರಾಜ್ಯ ಬಾರ್‌ ಕೌನ್ಸಿಲ್‌ನನಲ್ಲಿ ಇನ್ನೂ ಅವರ ಹೆಸರು ಇದೆಯೇ? ವಕೀಲಿಕೆಯ ಹಕ್ಕಿಗಾಗಿ ಅವರು ಅರ್ಜಿ ಸಲ್ಲಿಸಿದ್ದರೇ? ಅವರಿಗೆ ಪರವಾನಗಿ ನೀಡಲಾಗಿದೆಯೇ? ಎಂದು ಪ್ರಶ್ನಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಇಸಿ ಆಯ್ಕೆಯಿಂದ ಸಿಜೆಐ ಕೈ ಬಿಟ್ಟಿದ್ದಕ್ಕೆ ಸುಪ್ರೀಂ ಚಾಟಿ
ಗೌರ್ನರ್‌ ಗೆಹಲೋತ್ ಮಿತವ್ಯಯ ಮಂತ್ರ!