ತಿರುವನಂತಪುರಂ: ಬಸ್ಸಿನಲ್ಲಿ ತಮಗೆ ವ್ಯಕ್ತಿಯೊಬ್ಬರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಘಟನೆಯ ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದ ಘಟನೆ ಕೇರಳದಲ್ಲಿ ನಡೆದಿದೆ. ಅದರ ಬೆನ್ನಲ್ಲೇ ಆರೋಪದಿಂದ ನೊಂದ ದಿಲೀಪ್ ಎಂಬ ವ್ಯಕ್ತಿ ಆತ್ಮ*ತ್ಯೆಗೆ ಶರಣಾಗಿದ್ದಾರೆ.
ಜಾಲತಾಣದಲ್ಲಿ ಇನ್‌ಪ್ಲ್ಯೂಯೆನ್ಸರ್ ಆಗಿರುವ ಶಂಜಿತಾ ಮುಸ್ತಫಾ ಎಂಬ ಮಹಿಳೆಯ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ದೂರು ನೀಡುವ ಮೊದಲೇ, ಸತ್ಯಾಸತ್ಯತೆ ಅರಿಯದೇ ವಿಡಿಯೋವನ್ನು ಜಾಲತಾಣದಲ್ಲಿ ಹಾಕಿ, ಆಕೆ ದಿಲೀಪ್‌ನ ಮರ್ಯಾದೆ ಹರಾಜು ಹಾಕಿದ್ದಾರೆ. ಇದು ಕೂಡಾ ಪುರುಷರ ಮೇಲಿನ ದೌರ್ಜನ್ಯಕ್ಕೆ ಉದಾಹರಣೆ ಎಂದು ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ಟೆಕ್ಸ್‌ಟೈಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಲ್ಲಿಕೋಟೆಯ ದೀಪಕ್ ಕಳೆದ ಶುಕ್ರವಾರ ಬಸ್‌ನಲ್ಲಿ ಕಣ್ಣೂರಿಗೆ ತೆರಳುತ್ತಿದ್ದರು. ಅದೇ ಬಸ್ಸಿನಲ್ಲಿ ಶಂಜಿತಾ ಕೂಡ ತೆರಳುತ್ತಿದ್ದರು. ರಶ್ ಇದ್ದ ಬಸ್‌ನಲ್ಲಿ ಇಬ್ಬರೂ ಪಕ್ಕಪಕ್ಕ ನಿಂತಿದ್ದರು. ಈ ವೇಳೆ ದಿಲೀಪ್ ಕೈ ಶಂಜಿತಾ ಮೈಗೆ ತಾಗಿದೆ. ಈ ಘಟನೆಯನ್ನು ಆಕೆ ವಿಡಿಯೋದಲ್ಲಿ ಸೆರೆಹಿಡಿದು ಲೈಂಗಿಕ ಕಿರುಕುಳ ಎನ್ನುವಂತೆ ಬಿಂಬಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದ್ದು, 20 ಲಕ್ಷ ವೀಕ್ಷಣೆ ಕಂಡಿತ್ತು. ಪರ- ವಿರೋಧದ ಚರ್ಚೆ ಕೂಡ ನಡೆದಿದ್ದು, ಶಂಜಿತಾ ನಡೆಗೆ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಆಕೆ ವಿಡಿಯೋ ಡಿಲೀಟ್ ಮಾಡಿ, ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದರು.
ಇದರಿಂದ ಬಂದ ನಕಾರಾತ್ಮಕ ಕಾಮೆಂಟ್‌ಗಳಿಂದ ನೊಂದು ದೀಪಕ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ದೀಪಕ್ ಪೋಷಕರು ಮಹಿಳೆ ವಿರುದ್ಧ ದೂರು ನೀಡಿದ್ದಾರೆ.