;Resize=(412,232))
ಮಧುರೈ: ದೀಪಾವಳಿಗೆ ನನ್ನ ಮನೆಗೆ ಸಿಹಿ ತಿನಿಸು ಕಳುಹಿಸಿ ಕೊಡಿ ಎಂಬ ಸಾಮಾಜಿಕ ಜಾಲತಾಣ ಇನ್ಫ್ಲುಯೆನ್ಸರ್ ಬೇಡಿಕೆಗೆ, ಜನರು ತರಹೇವಾರಿ ಉತ್ಪನ್ನಗಳನ್ನು ಆನ್ಲೈನ್ ತಾಣಗಳ ಮೂಲಕ ಕ್ಯಾಶ್ ಆನ್ ಡೆಲಿವರಿ ಮೂಲಕ ಕಳುಹಿಸಿದ ಕಾರಣ ಆತ ಮನೆಯನ್ನೇ ಬಿಟ್ಟು ವಿಚಿತ್ರ ಹೋದ ವಿಚಿತ್ರ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.
ಹಾಸ್ಯಭರಿತ ವಿಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿರುವ ಮಧುರೈನ ಕಂಟೆಂಟ್ ಕ್ರಿಯೇಟರ್ ವೀರಮಣಿ, ದೀಪಾವಳಿ ಹಬ್ಬದ ನಿಮಿತ್ತ ಅಭಿಮಾನಿಗಳು ನನಗೆ ಸಿಹಿ ಕಳುಹಿಸಬಹುದು ಎಂದು ಹೇಳಿ ವಿಡಿಯೋ ಪೋಸ್ಟ್ ಹಾಕಿ ಅದರಲ್ಲಿ ತನ್ನ ಮನೆಯ ವಿಳಾಸ ಹಂಚಿಕೊಂಡಿದ್ದರು.
ಆದರೆ, ಇದನ್ನು ಗೇಲಿಯಾಗಿ ತೆಗೆದುಕೊಂಡ ಕೆಲ ಕಿಡಿಗೇಡಿಗಳು, ವೀರಮಣಿ ಮನೆಗೆ ನಾನ್-ಸ್ಟಾಪ್ ಆಗಿ ಕ್ಯಾಶ್-ಆನ್-ಡೆಲಿವರಿ ಆರ್ಡರ್ಗಳನ್ನು ಕಳುಹಿಸಲು ಶುರು ಮಾಡಿದ್ದಾರೆ. ಪರಿಣಾಮ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಸೇರಿದಂತೆ ಹಲವು ಇ-ಕಾಮರ್ಸ್ ಕಂಪನಿಗಳ ಡೆಲಿವರಿ ಬಾಯ್ಗಳು ದುಬಾರಿ ಎಲೆಕ್ಟ್ರಾನಿಕ್ಸ್ ವಸ್ತುಗಳೊಂದಿಗೆ ವೀರಮಣಿ ಮನೆಗೆ ಸಾಲುಗಟ್ಟಿ ನಿಂತು ಉತ್ಪನ್ನಗಳ ಡೆಲಿವರಿಗೆ ಮುಂದಾಗಿದ್ದಾರೆ. ಹೀಗೆ ಬಂದ ಉತ್ಪನ್ನಗಳಲ್ಲಿ. ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಸ್ಮಾರ್ಟ್ಫೋನ್ ಮತ್ತು ಟೀವಿ ಸೇರಿದ್ದವು.
ಜೊತೆಗೆ ಕೆಲವು ಕಿಡಿಗೇಡಿಗಳು, ಬೃಹತ್ ಜೆಸಿಬಿ, 70 ಕೋಟಿ ರು.ಬೆಲೆಯ ಮಿಲಿಟರಿ ಟ್ಯಾಂಕ್ಗಳನ್ನು ಸಹ COD ಮೂಲಕ ಆರ್ಡರ್ ಮಾಡಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ಶಾಟ್ಗಳನ್ನು ವೈರಲ್ ಮಾಡಿದರು. ಎಲೆಕ್ಟ್ರಾನಿಕ್ಸ್ ಮಾತ್ರವಲ್ಲದೆ, ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಸಿಬ್ಬಂದಿ ಕೂಡ ಆಹಾರದ ಆರ್ಡರ್ಗಳೊಂದಿಗೆ ಸಾಲುಗಟ್ಟಿ ಬಂದಿದ್ದಾರೆ.
ಆ ವಸ್ತುಗಳನ್ನು ತಾವು ಆರ್ಡರ್ ಮಾಡಿರದ, ಅದನ್ನು ಖರೀದಿಸಲು ಹಣವೂ ಇಲ್ಲದ ಕಾರಣ ಹಾಗೂ ಒಟಿಪಿಯು ಇಲ್ಲದ ಕಾರಣ ಉತ್ಪನ್ನಗಳನ್ನು ಅವರು ಹಾಗೆ ಮರಳಿಸಿದ್ದಾರೆ. ಜೊತೆಗೆ ನಿರಂತರವಾಗಿ ಬಂದ ಈ ಪ್ರ್ಯಾಂಕ್ ಆರ್ಡರ್ಗಳಿಂದ ತೀವ್ರ ಮಾನಸಿಕ ಒತ್ತಡಕ್ಕೊಳಗಾದ ವೀರಮಣಿ, ತಮ್ಮ ಮನೆಯಿಂದಲೇ ವೀಡಿಯೊ ಒಂದನ್ನು ಅಪ್ಲೋಡ್ ಮಾಡಿ, ‘ನಾನು ಸಿಹಿಯ ಡಬ್ಬಿ ಕೇಳಿದ್ದಕ್ಕೆ ಈಗ ದೊಡ್ಡ ಶಿಕ್ಷೆ ಅನುಭವಿಸುತ್ತಿದ್ದೇನೆ. ದಯವಿಟ್ಟು ಆರ್ಡರ್ ಮಾಡುವುದನ್ನು ನಿಲ್ಲಿಸಿ. ನಿಮ್ಮ ಕಾಲು ಹಿಡಿಯುತ್ತೇನೆ’ ಎಂದು ಕಣ್ಣೀರಿಟ್ಟು ಮನವಿ ಮಾಡಿಕೊಂಡಿದ್ದರು. ಆದರೂ ಕಿಡಿಗೇಡಿಗಳ ಕಿರುಕುಳ ನಿಲ್ಲಲಿಲ್ಲ. ಹೀಗಾಗಿ ಅವರೀಗ ತಮ್ಮ ಮನೆ ಖಾಲಿ ಮಾಡಿಕೊಂಡು ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ,