ವಶಕ್ಕೆ ಪಡೆದ 24 ಗಂಟೇಲಿ ಕೋರ್ಟ್‌ಗೆ ಹಾಜರು ಕಡ್ಡಾಯ

Published : Nov 06, 2026, 01:06 PM IST
supreme court

ಸಾರಾಂಶ

‘ವಿಚಾರಣೆಯ ನೆಪದಲ್ಲಿ ಪೊಲೀಸರು ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆಯುವುದು ಬಂಧನಕ್ಕೆ ಸಮ. ವಶಕ್ಕೆ ಪಡೆದ 24 ಗಂಟೆಯೊಳಗೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನವದೆಹಲಿ : ‘ವಿಚಾರಣೆಯ ನೆಪದಲ್ಲಿ ಪೊಲೀಸರು ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆಯುವುದು ಬಂಧನಕ್ಕೆ ಸಮ. ವಶಕ್ಕೆ ಪಡೆದ 24 ಗಂಟೆಯೊಳಗೆ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬಂಧನಕ್ಕೂ ವಶಕ್ಕೂ ಹಚ್ಚು ವ್ಯತ್ಯಾಸವಿಲ್ಲ ವ್ಯಕ್ತಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು. ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದಲ್ಲ. ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದ 24 ಗಂಟೆಗಳ ಒಳಗಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂದು ಅದು ಹೇಳಿದೆ.

24 ಗಂಟೆಗಳ ಅವಧಿ ಅಧಿಕೃತ ಬಂಧನ ದಾಖಲಿಸಿದ ಸಮಯದಿಂದ ಮಾತ್ರ ಆರಂಭವಾಗುತ್ತದೆ ಎಂಬ ಅಭಿಪ್ರಾಯವು ಸಂವಿಧಾನದ 22(2)ನೇ ವಿಧಿ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್ಎಸ್‌) ಸೆಕ್ಷನ್ 56ರ ಆಶಯಕ್ಕೆ ವಿರುದ್ಧವಾಗಿದೆ’ ಎಂದು ಪೀಠ ಹೇಳಿದೆ.

ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಪ್ರಕರಣವೊಂದರಲ್ಲಿ, ತ್ರಿಪುರಾ ಹೈಕೋರ್ಟ್ ತಮಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ನಾಲ್ವರು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ಪೀಠವು ಈ ತೀರ್ಪು ನೀಡಿ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಕೋರ್ಟ್‌ ಹೇಳಿದ್ದೇನು?:

ವಶಕ್ಕೆ ಪಡೆದ ಕ್ಷಣದಿಂದಲೇ ಸಮಯ ಆರಂಭ:

ಆರೋಪಿಯನ್ನು ಕೇವಲ ‘ಅಧಿಕೃತವಾಗಿ ಬಂಧಿಸಿದ’ (Formal Arrest) ಸಮಯದಿಂದಲ್ಲ, ಪೊಲೀಸರು ತಮ್ಮ ‘ವಶಕ್ಕೆ’ (Detention) ಪಡೆದ ಕ್ಷಣದಿಂದಲೇ 24 ಗಂಟೆಗಳ ಅವಧಿ ಲೆಕ್ಕ ಹಾಕಬೇಕು.

ತಕ್ಷಣ ಬಿಡುಗಡೆ:

ಯಾವುದೇ ವ್ಯಕ್ತಿಯನ್ನು ವಶಕ್ಕೆ ಪಡೆದು 24 ಗಂಟೆಗಳ ಒಳಗಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದಿದ್ದರೆ, ಆತನನ್ನು ತಕ್ಷಣವೇ ಕಸ್ಟಡಿಯಿಂದ ಬಿಡುಗಡೆ ಮಾಡಬೇಕು.

ವಿನಾಯಿತಿ ಕೇವಲ ಪ್ರಯಾಣದ ಸಮಯಕ್ಕೆ ಮಾತ್ರ:

ವಶಕ್ಕೆ ಪಡೆದ ಸ್ಥಳದಿಂದ ನ್ಯಾಯಾಲಯಕ್ಕೆ ಕರೆದೊಯ್ಯಲು ತಗಲುವ ನ್ಯಾಯಸಮ್ಮತ ಪ್ರಯಾಣದ ಸಮಯವನ್ನು ಹೊರತುಪಡಿಸಿ, ತನಿಖೆ ಅಥವಾ ವಿಚಾರಣೆಯ ನೆಪದಲ್ಲಿ ಯಾವುದೇ ಹೆಚ್ಚಿನ ಸಮಯವನ್ನು ಈ 24 ಗಂಟೆಗಳ ಮಿತಿಯಿಂದ ಹೊರಗಿಡುವಂತಿಲ್ಲ.

ಮ್ಯಾಜಿಸ್ಟ್ರೇಟ್‌ಗಳಿಗೆ ಕಡ್ಡಾಯ ಸೂಚನೆ:

ಆರೋಪಿಯನ್ನು ಮೊದಲ ಬಾರಿಗೆ ಹಾಜರುಪಡಿಸಿದಾಗ, ಪೊಲೀಸರು ಆತನನ್ನು ವಶಕ್ಕೆ ಪಡೆದ ನಿಖರವಾದ ದಿನಾಂಕ ಮತ್ತು ಸಮಯವನ್ನು ಮ್ಯಾಜಿಸ್ಟ್ರೇಟ್‌ಗಳು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು ಹಾಗೂ 24 ಗಂಟೆಗಳ ನಿಯಮ ಪಾಲನೆಯಾಗಿದೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು. ಸಂವಿಧಾನದ 22(2)ನೇ ವಿಧಿ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 56 ರ ಅಡಿಯಲ್ಲಿ ಈ ಸಾಂವಿಧಾನಿಕ ಹಕ್ಕನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸಂವಿಧಾನಕ್ಕೆ ವಿರುದ್ಧ:

ಪ್ರಕರಣವೇನು?:

ತ್ರಿಪುರಾದ ನಾಲ್ವರನ್ನು ಪ್ರಕರಣವೊಂದರಲ್ಲಿ 2025ರ ಸೆಪ್ಟೆಂಬರ್ 29ರಂದು ಮಧ್ಯಾಹ್ನ 2 ಗಂಟೆಗೆ ಶೋಧ ಕಾರ್ಯದ ನೆಪದಲ್ಲಿ ವಶಕ್ಕೆ ಪಡೆಯಲಾಗಿತ್ತು. ಆದರೆ, ಅವರನ್ನು ಸೆಪ್ಟೆಂಬರ್ 30ರಂದು ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ಬಂಧಿಸಲಾಗಿದೆ ಎಂದು ತೋರಿಸಲಾಗಿತ್ತು. ಅಂದರೆ, 21 ತಾಸು ವಶದಲ್ಲಿಟ್ಟುಕೊಂಡಿದ್ದರೂ, ಅವರನ್ನು ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿರಲಿಲ್ಲ. ಇದು ಅಕ್ರಮ ಬಂಧನ, ವಶ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್​ನಲ್ಲಿ ದಾವೆ ಹೂಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಗ್ನಿವೀರರಿಗಿನ್ನು ಸೇನೇಲಿ ಪೂರ್ಣ ಸೇವೆಗೆ ಅವಕಾಶ
ಎಸ್‌ಐಆರ್‌ ಚರ್ಚೆಗೆ ಅಧಿವೇಶನ ಕರೆದ್ರೆ ಚರ್ಚೆಗೆ ಬರ್ತೀರಾ?: ಶಾ