ಮಂಗಳೂರು ರೈಲು ನಿಲ್ದಾಣಕ್ಕೂ ಬಂದಿದೆ ಕುತ್ತು

Published : Aug 27, 2026, 05:19 AM IST
Mangaluru

ಸಾರಾಂಶ

ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಂ ಪಾಲಾಗಿದ್ದಾಯ್ತು. ಇದೀಗ, 3 ದಶಕಗಳ ಹೋರಾಟದ ಫಲವಾಗಿ ಕರ್ನಾಟಕಕ್ಕೆ ದಕ್ಕಿರುವ ಮಂಗಳೂರು ರೈಲ್ವೆ ವಲಯವನ್ನು ಕೂಡ ಕರ್ನಾಟಕದಿಂದ ಕಸಿಯುವ ಷಡ್ಯಂತ್ರ ಆರಂಭವಾಗಿದೆ

ಪಾಲಕ್ಕಾಡ್‌: ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಇದ್ದರೂ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಂ ಪಾಲಾಗಿದ್ದಾಯ್ತು. ಇದೀಗ, 3 ದಶಕಗಳ ಹೋರಾಟದ ಫಲವಾಗಿ ಕರ್ನಾಟಕಕ್ಕೆ ದಕ್ಕಿರುವ ಮಂಗಳೂರು ರೈಲ್ವೆ ವಲಯವನ್ನು ಕೂಡ ಕರ್ನಾಟಕದಿಂದ ಕಸಿಯುವ ಷಡ್ಯಂತ್ರ ಆರಂಭವಾಗಿದೆ. ಕರ್ನಾಟಕದ ರಾಜಕೀಯ ಪಕ್ಷಗಳು, ಕನ್ನಡಪರ ಸಂಘಟನೆಗಳು, ಹೋರಾಟಗಾರರು, ಕನ್ನಡಪ್ರೇಮಿಗಳು ಇನ್ನೂ ಮೌನ ವಹಿಸಿದ್ದೇ ಆದಲ್ಲಿ ದೆಹಲಿ ಮಟ್ಟದಲ್ಲಿರುವ ಕೇರಳಂನ ದೊಡ್ಡ ಲಾಬಿ ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ ಮಾಡುವುದರಲ್ಲಿ ಅನುಮಾನವೇ ಇಲ್ಲ ಎನ್ನುವಂತಾಗಿದೆ.

ಇಂಥದ್ದೊಂದು ಆತಂಕಕ್ಕೆ ಕಾರಣವಾಗಿರುವುದು ಪಾಲಕ್ಕಾಡ್‌ ರೈಲ್ವೆ ವಲಯಕ್ಕೆ ಸೇರಿದ್ದ ಮಂಗಳೂರು ವಲಯದ ರೈಲ್ವೆ ಕಚೇರಿಗಳನ್ನು ಮೈಸೂರಿನಲ್ಲಿರುವ ನೈಋತ್ಯ ರೈಲ್ವೆ ವಿಭಾಗಕ್ಕೆ ಸೇರಿಸುವ ಪ್ರಯತ್ನಕ್ಕೆ ಒಳಗೊಳಗೇ ತಡೆಯೊಡ್ಡಲು ಕೇರಳಂನಲ್ಲಿ ನಡೆದಿರುವ ದೊಡ್ಡಮಟ್ಟದ ಯತ್ನ!

ಪಾಲಕ್ಕಾಡ್‌ ರೈಲ್ವೆ ವಲಯವನ್ನು ವಿಭಜಿಸುವ ರೈಲ್ವೆ ಮಂಡಳಿಯ ನಿರ್ಧಾರ ಕೇರಳಂನಲ್ಲಿ ಭಾರೀ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳೀಯರ ಆಕ್ರೋಶ ತಣಿಸಲು ಅಧಿಕಾರಿಗಳ ಮಟ್ಟದಲ್ಲಿ ಹೊಸದೊಂದು ವಿಷಯ ಚರ್ಚೆಗೆ ಬಂದಿದೆ. ಅದೇನೆಂದರೆ ಮಂಗಳೂರು ಕೇಂದ್ರ ಮತ್ತು ಮಂಗಳೂರು ಜಂಕ್ಷನ್‌ ನಿಲ್ದಾಣವನ್ನು ಮರಳಿ ಪಾಲಕ್ಕಾಡ್‌ ವಲಯಕ್ಕೆ ಸೇರಿಸುವುದು, ಅದನ್ನು ಬಿಟ್ಟು ಉಳಿದೆಲ್ಲಾ ನಿಲ್ದಾಣ ಮತ್ತು ಆಸ್ತಿಗಳನ್ನು ಮೈಸೂರಿಗೆ ಬಿಟ್ಟುಕೊಡುವುದಾಗಿದೆ.

ಇದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲವಾದರೂ, ಇಂಥದ್ದೊಂದು ಹೊಂದಾಣಿಕೆ ತಂತ್ರ ಪಾಲಕ್ಕಾಡ್‌ ರೈಲ್ವೆ ವಲಯಕ್ಕೆ ಎದುರಾಗಬಹುದಾದ ಹೊಸ ಸಮಸ್ಯೆ ನಿವಾರಿಸುವುದರ ಜೊತೆಗೆ ಕೇರಳಿಯರ ಆಕ್ರೋಶವನ್ನೂ ಬಹುಮಟ್ಟಿಗೆ ತಣ್ಣಗೆ ಮಾಡಬಹುದು ಎಂಬ ಲೆಕ್ಕಾಚಾರ ಸ್ಥಳೀಯ ರೈಲ್ವೆ ಅಧಿಕಾರ ವರ್ಗದ್ದಾಗಿದೆ ಎನ್ನಲಾಗಿದೆ.

ದೊಡ್ಡ ಮೌನ!:

ಮಂಗಳೂರು ಕರ್ನಾಟಕದ್ದು. ಕರ್ನಾಟಕದ ಮೈಸೂರು ವಿಭಾಗಕ್ಕೆ ಅದನ್ನು ಸೇರಿಸುವುದರಲ್ಲಿ ಯಾವುದೇ ತಪ್ಪೂ ಇಲ್ಲ. ಆದರೂ ಇದಕ್ಕೆ ಕೇರಳಂನಲ್ಲಿ ಉಗ್ರ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೇರಳಂನ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ, 3 ದಶಕಗಳ ಹೋರಾಟದ ಫಲವಾಗಿ ಸಿಕ್ಕಿರುವ ಮಂಗಳೂರು ಸುತ್ತಮುತ್ತಲ ರೈಲು ನಿಲ್ದಾಣಗಳನ್ನು ಉಳಿಸಿಕೊಳ್ಳುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು, ನಾಯಕರು, ಸಂಘಟನೆಗಳಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಕೇರಳಂ ಹೋರಾಟವನ್ನು ಕನಿಷ್ಠ ಖಂಡಿಸುವ ಧ್ವನಿಯೂ ಕೇಳುತ್ತಿಲ್ಲ.

ರಾಜ್ಯದ ಪರ ಧ್ವನಿ ಎತ್ತಬೇಕಿದ್ದ ಜನಪ್ರತಿನಿಧಿಗಳ ಈ ಮೌನ ಕರ್ನಾಟಕಕ್ಕೆ ಮಂಗಳೂರು ರೈಲ್ವೆ ವಿಷಯದಲ್ಲಿ ಅನ್ಯಾಯ ಮಾಡಿದರೂ ಅಚ್ಚರಿ ಇಲ್ಲ. ಹೀಗಾಗಿ ಈಗಲೂ ಕಾಲ ಮಿಂಚಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡರೆ ಮಂಗಳೂರು ವಲಯ ಕರ್ನಾಟಕದ ಬಳಿ ಉಳಿಯಲಿದೆ. ಇಲ್ಲವಾದರಲ್ಲಿ ಕಾಸರಗೋಡು ಕೈತಪ್ಪಿದಂತೆ ಮಂಗಳೂರು ರೈಲ್ವೆ ವಲಯವೂ ಮರಳಿ ಕೇರಳಂನ ಪಾಲಾಗಲಿದೆ.

ಪ್ರಸ್ತಾವಕ್ಕೆ ಕಾರಣ?:

ಪಾಲಕ್ಕಾಡ್‌ ರೈಲ್ವೆ ವಲಯಕ್ಕೆ ಮಂಗಳೂರು ಕೇಂದ್ರ ನಿಲ್ದಾಣ ಅತ್ಯಂತ ಮಹತ್ವದ್ದು. ಕಾರಣ, ಮುಖ್ಯವಾದ ಕೋಚಿಂಗ್‌ ಮತ್ತು ಇತರೆ ನಿರ್ವಹಣಾ ವ್ಯವಸ್ಥೆಗಳು ಮಂಗಳೂರು ಕೇಂದ್ರ ನಿಲ್ದಾಣದ ವ್ಯಾಪ್ತಿಯಲ್ಲೇ ಇವೆ. ಮಂಗಳೂರು ಕೇಂದ್ರ ನಿಲ್ದಾಣ ಪಾಲಕ್ಕಾಡ್‌ ವಲಯದ ರೈಲ್ವೆಗೆ ಈಗಲೂ ಅತ್ಯಂತ ಮಹತ್ವವಾದ ನಿರ್ವಹಣಾ ನೆಲೆಯಾಗಿದೆ. ಹೀಗಾಗಿ ಈ ನಿಲ್ದಾಣ ಪಾಲಕ್ಕಾಡ್‌ನಲ್ಲೇ ಉಳಿದರೆ ಅದರ ರೈಲಿನ ನಿರ್ವಹಣೆ ಸುಗಮವಾಗಲಿದೆ. ಒಂದು ವೇಳೆ ಕೈತಪ್ಪಿದರೆ ಮತ್ತೆ ಪಾಲಕ್ಕಾಡ್‌ ವಲಯವು ಎಲ್ಲಾ ವ್ಯವಸ್ಥೆಗಳನ್ನು ಹೊಸದಾಗಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥದ್ದೊಂದು ಪ್ರಸ್ತಾಪದ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹೀಗೆ ಮಾಡಿದಲ್ಲಿ ಕೇರಳಂನ ರಾಜಕೀಯ ಪಕ್ಷಗಳ ಆಕ್ರೋಶವನ್ನು ಒಂದು ಹಂತದವರೆಗೆ ತಣ್ಣಗೆ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಜೊತೆಗೆ, ಪಾಲಕ್ಕಾಡ್‌ ರೈಲ್ವೆ ವಲಯದ ಪ್ರಮುಖ ಆದಾಯವೇ ಮಂಗಳೂರು ವ್ಯಾಪ್ತಿಯ ರೈಲ್ವೆ ನಿಲ್ದಾಣಗಳು. ಮಂಗಳೂರು ಬಂದರಿಗೆ ಆಗಮಿಸುವ ಸರಕನ್ನು ಹೊತ್ತು ರೈಲುಗಳು ದೇಶವ್ಯಾಪಿ ಸಂಚಾರ ಮಾಡುವ ಕಾರಣ ದೊಡ್ಡಮಟ್ಟದ ಆದಾಯ ಪಾಲಕ್ಕಾಡ್‌ ರೈಲ್ವೆ ವಲಯಕ್ಕೆ ಬರುತ್ತದೆ. ಈ ವಲಯದ ಶೇ.50ಕ್ಕೂ ಹೆಚ್ಚಿನ ಆದಾಯದ ಮೂಲ ಮಂಗಳೂರು ವ್ಯಾಪ್ತಿಯ ನಿಲ್ದಾಣಗಳು. ಹೀಗಾಗಿ ಅದೇ ಕೈತಪ್ಪಿದರೆ ಪಾಲಕ್ಕಾಡ್‌ ವಲಯ ಅಸ್ತಿತ್ವವೇ ಕಳೆದುಕೊಳ್ಳುತ್ತದೆ.

ಜೊತೆಗೆ ಮಂಗಳೂರು ವ್ಯಾಪ್ತಿಯ ನಿಲ್ದಾಣಗಳಲ್ಲಿ ಅಭಿವೃದ್ಧಿ, ಹೊಸ ಚಟುವಟಿಕೆಯ ಪ್ರತಿಯೊಂದಕ್ಕೂ ಇದುವರೆಗೂ ಪಾಲಕ್ಕಾಡ್‌ನಿಂದಲೇ ಆದೇಶ ಆಗಬೇಕಿತ್ತು. ಬಹಳಷ್ಟು ಸಮಯದಲ್ಲಿ ಮಂಗಳೂರು ವಲಯಕ್ಕೆ ಅನ್ಯಾಯವಾಗುವ ರೀತಿಯಲ್ಲೇ ನಿರ್ಧಾರಗಳು ಪ್ರಕಟವಾಗುತ್ತಿದ್ದವು. ಜೊತೆಗೆ ಸಿಬ್ಬಂದಿಗಳ ನೇಮಕ, ವಿವಿಧ ಕಾಮಗಾರಿಗಳ ಗುತ್ತಿಗೆ ಹೀಗೆ ಎಲ್ಲದರಲ್ಲೂ ಕೇರಳಿಗರ ಲಾಬಿಯೇ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ಆದರೆ ಇದೀಗ ಮಂಗಳೂರು ಕೈತಪ್ಪಿದರೆ ಅದೆಲ್ಲಾ ನಿಂತು ಹೋಗಲಿದೆ ಎಂಬುದು ಕೇರಳಂನ ರಾಜಕೀಯ ಪಕ್ಷಗಳ ನಾಯಕರು ಮತ್ತು ಪಕ್ಷಗಳ ಕಳವಳ. ಹೀಗಾಗಿಯೇ ಅವರು ಮಂಗಳೂರನ್ನು ಮರಳಿ ಪಡೆಯಲು ಹೋರಾಡುತ್ತಿದ್ದಾರೆ.

ಪಾಲಕ್ಕಾಡ್‌ ಕೈತಪ್ಪಲಿರುವ ರೈಲ್ವೆ ನಿಲ್ದಾಣಗಳು:

ಸದ್ಯದ ರೈಲ್ವೆ ಮಂಡಳಿ ಪ್ರಸ್ತಾವದ ಅನ್ವಯ ಅ.1ರಿಂದ ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಲಯದ ವ್ಯಾಪ್ತಿಯಿಂದ ಕರ್ನಾಟಕದ ಮಂಗಳೂರು ಕೇಂದ್ರ, ಮಂಗಳೂರು ಜಂಕ್ಷನ್, ಪಣಂಬೂರು (ನವ ಮಂಗಳೂರು ಬಂದರು ಯಾರ್ಡ್‌) ಮತ್ತು ಉಳ್ಳಾಲ ಕೇಂದ್ರಗಳು ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡಲಿವೆ.

ಏಳಿ ಕನ್ನಡಿಗರೇ, ಎದ್ದೇಳಿ!

- 3 ದಶಕ ಬಳಿಕ ಮೈಸೂರಿಗೆ ಸಿಕ್ಕ ಮಂಗಳೂರು ನಿಲ್ದಾಣ ಕಸಿಯಲು ಪ್ಲಾನ್‌

- ಕೇರಳಂ ರಾಜಕೀಯ ಪಕ್ಷಗಳ ಆಕ್ರೋಶ ತಣಿಸಲು ಅಧಿಕಾರಿಗಳ ಷಡ್ಯಂತ್ರ

- ಮಂಗಳೂರು ನಿಲ್ದಾಣಗಳನ್ನು ವಾಪಸ್‌ ಪಾಲಕ್ಕಾಡ್‌ಗೆ ನೀಡುವ ಬಗ್ಗೆ ಚರ್ಚೆ

- ನಮ್ಮದೇ ಊರು ನಮಗೇ ಬೇಡವಾಯಿತೇ? ಇನ್ನೂ ಎಷ್ಟು ದಿನ ಈ ಮೌನ?

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದೇಶದಲ್ಲಿ ಸಕ್ಕರೆ ಕೊರತೆ ಇಲ್ಲ: ಉತ್ಪಾದಕರ ಸ್ಪಷ್ಟನೆ
ತ.ನಾಡು ಜನರಿಗೆ ವಿಜಯ್‌ ಬಂಪರ್