‘ಸದ್ಯ ದೇಶದಲ್ಲಿ ಸಕ್ಕರೆ ಕೊರತೆ ಇಲ್ಲ. ಜೊತೆಗೆ, ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ಟನ್ ಸಕ್ಕರೆ ಆಮದಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದ ಸಕ್ಕರೆ ಬೆಲೆಯಲ್ಲಿ ಇಳಿಕೆ ಆರಂಭವಾಗಿದೆ’ ಎಂದು ಸಕ್ಕರೆ ಉತ್ಪಾದಕರ ಸಂಘಟನೆಯಾದ ಐಎಸ್‌ಎಂಎ ಹೇಳಿದೆ.
ನವದೆಹಲಿ: ‘ಸದ್ಯ ದೇಶದಲ್ಲಿ ಸಕ್ಕರೆ ಕೊರತೆ ಇಲ್ಲ. ಜೊತೆಗೆ, ಕೇಂದ್ರ ಸರ್ಕಾರ ಈಗಾಗಲೇ 10 ಲಕ್ಷ ಟನ್ ಸಕ್ಕರೆ ಆಮದಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದ ಸಕ್ಕರೆ ಬೆಲೆಯಲ್ಲಿ ಇಳಿಕೆ ಆರಂಭವಾಗಿದೆ’ ಎಂದು ಸಕ್ಕರೆ ಉತ್ಪಾದಕರ ಸಂಘಟನೆಯಾದ ಐಎಸ್‌ಎಂಎ ಹೇಳಿದೆ.
ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಕುಂಠಿತ ಊಹಾಪೋಹ
ಈ ಕುರಿತು ಮಾಹಿತಿ ನೀಡಿರುವ ದೇಶದ ಸಕ್ಕರೆ ಉತ್ಪಾದಕರ ಅತ್ಯುನ್ನತ ಸಂಸ್ಥೆಯಾದ ಐಎಸ್‌ಎಂಎ (ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್)ನ ಅಧ್ಯಕ್ಷ ನೀರಜ್ ಶಿರಗಾಂವಕರ್, ‘ಪ್ರತಿಕೂಲ ಹವಾಮಾನದಿಂದ ಉತ್ಪಾದನೆ ಕುಂಠಿತ, ಊಹಾಪೋಹಗಳಿಗೆ ಕಿವಿಗೊಟ್ಟು ವ್ಯಾಪಾರಿಗಳು ಮತ್ತು ಸಗಟು ಖರೀದಿದಾರರು ದೊಡ್ಡ ಮಟ್ಟದಲ್ಲಿ ಖರೀದಿಗೆ ಮುಂದಾಗಿರುವುದರಿಂದ ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಸಕ್ಕರೆಯ ಕೃತಕ ಅಭಾವ ಸೃಷ್ಟಿಸುವ ಮತ್ತು ಕಾರ್ಖಾನೆಯಲ್ಲೇ ಬೆಲೆ ಏರಿಕೆಯ ಯಾವುದೇ ಕೆಲಸವನ್ನು ಸಕ್ಕರೆ ಕಾರ್ಖಾನೆಗಳನ್ನು ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ವಿದೇಶಗಳಿಂದ 10 ಲಕ್ಷ ಟನ್ ಸಕ್ಕರೆ ಆಮದಿಗೆ ಅನುಮತಿ
ಈಗಾಗಲೇ ಕೇಂದ್ರ ಸರ್ಕಾರ, ವಿದೇಶಗಳಿಂದ 10 ಲಕ್ಷ ಟನ್ ಸಕ್ಕರೆ ಆಮದಿಗೆ ಅನುಮತಿ ನೀಡಿದ ಬಳಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇಳಿಕೆಯಾಗುತ್ತಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದಲ್ಲಿ 35 ಲಕ್ಷ ಟನ್‌ಗಳಷ್ಟು ಸಕ್ಕರೆ ದಾಸ್ತಾನು ಇರಲಿದೆ. ಅಲ್ಲದೆ ಅ.15ರಿಂದ ಕಾರ್ಖಾನೆಗಳು ಉತ್ಪಾದನೆ ಆರಂಭಿಸಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ 10-12 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಿವೆ. ಅಕ್ಟೋಬರ್ ತಿಂಗಳಿನ ಬೇಡಿಕೆ 24-25 ಲಕ್ಷ ಟನ್‌ಗಳಷ್ಟು ಇರುವ ನಿರೀಕ್ಷೆ ಇದೆ. ಹೀಗಾಗಿ ದೇಶದಲ್ಲಿ ಸಕ್ಕರೆ ಕೊರತೆ ಸಾಧ್ಯತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

