ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಪ್ರತಿವರ್ಷ 3 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಪ್ರತಿವರ್ಷ 3 ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ. ಅಲ್ಲದೆ, ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯಕ್ಕೆ ಇದ್ದ 40 ಕಿ.ಮೀ. ಮಿತಿ ತೆಗೆದು ಹಾಕಿ ರಾಜ್ಯಾದ್ಯಂತ ವಿಸ್ತರಿಸುವ ಘೋಷಣೆ ಮಾಡಿದ್ದಾರೆ.
1.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್
ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್ ಅವರು, 1.34 ಕೋಟಿ ಕುಟುಂಬಗಳಿಗೆ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್ ಸಿಗಲಿದೆ. ಅರ್ಹ ಫಲಾನುಭವಿಗಳಿಗೆ 3 ಸಿಲಿಂಡರ್‌ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ವಾರ್ಷಿಕ 2.5 ಲಕ್ಷ ರು.ವರೆಗೆ ಆದಾಯ ಹೊಂದಿರುವ, ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಇತರ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಈ ಯೋಜನೆಗೆ ಪ್ರತಿ ವರ್ಷ 4,000 ಕೋಟಿ ರು. ವೆಚ್ಚವಾಗಲಿದೆ’ ಎಂದು ತಿಳಿಸಿದರು.
ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದೆ
ಇದರ ಜೊತೆಗೆ, ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಇದಕ್ಕೆ ಇದ್ದ 40 ಕಿ.ಮೀ. ಮಿತಿ ತೆಗೆದು ಹಾಕಲಾಗಿದೆ. ಇನ್ನು ಮುಂದೆ ಯಾವುದೇ ಅಂತರ್ ಜಿಲ್ಲಾ ಸಾಮಾನ್ಯ ಬಸ್‌ಗಳು, ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ‘ವೆಟ್ರಿ ಪಯಣಂ ತಿಟ್ಟಂ’ ಹೆಸರಿನ ಈ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ. ಉಚಿತ ಪ್ರಯಾಣ ಪಡೆಯುವ ಪ್ರಯಾಣಗಳ ಸಂಖ್ಯೆಯ ಮೇಲೂ ಯಾವುದೇ ನಿರ್ಬಂಧ ಇರುವುದಿಲ್ಲ. ಆದಾಯದ ಮಿತಿಯನ್ನೂ ವಿಧಿಸಲಾಗುವುದಿಲ್ಲ’ ಎಂದರು.

