ಹಬ್ಬದ ಋತುವಿನಲ್ಲಿ ಸಕ್ಕರೆ, ಬೆಲ್ಲದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಕಹಿ ತಿನ್ನಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಬಹುಬೇಡಿಕೆಯ ವಸ್ತುವಾದ ಈರುಳ್ಳಿ ಬೆಲೆ ಕೂಡಾ ಗಗನಮುಖಿಯಾಗಿದ್ದು ಗ್ರಾಹಕರನ್ನು ಕಂಗಾಲು ಮಾಡಿದೆ. ದೇಶದ ಅನೇಕ ಕಡೆ ಬೆಲೆ ಕೇಜಿಗೆ 50 ರು.ನಿಂದ 65 ರು.ವರೆಗೆ ಏರಿದೆ.

ನವದೆಹಲಿ: ಹಬ್ಬದ ಋತುವಿನಲ್ಲಿ ಸಕ್ಕರೆ, ಬೆಲ್ಲದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಕಹಿ ತಿನ್ನಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಬಹುಬೇಡಿಕೆಯ ವಸ್ತುವಾದ ಈರುಳ್ಳಿ ಬೆಲೆ ಕೂಡಾ ಗಗನಮುಖಿಯಾಗಿದ್ದು ಗ್ರಾಹಕರನ್ನು ಕಂಗಾಲು ಮಾಡಿದೆ. ದೇಶದ ಅನೇಕ ಕಡೆ ಬೆಲೆ ಕೇಜಿಗೆ 50 ರು.ನಿಂದ 65 ರು.ವರೆಗೆ ಏರಿದೆ.

ಒಂದು ವರ್ಷದ ಹಿಂದೆ ಈ ಅವಧಿಯಲ್ಲಿ ಚಿಲ್ಲರೆ ಈರುಳ್ಳಿಗೆ ಕೇಜಿಗೆ 27 ರು. ಇದ್ದ ಬೆಲೆ, ಈಗ ಸರಾಸರಿ 43 ರು.ಗೆ ತಲುಪಿದೆ. ಇನ್ನು ಸಗಟು ಈರುಳ್ಳಿ ಬೆಲೆ ₹21ರಿಂದ 35 ರು.ಗೆ ತಲುಲಿದೆ. ಚೆನ್ನೈನಲ್ಲಿ ಕೆಜಿಗೆ 60 ರು. (1 ವರ್ಷದ ಹಿಂದೆ 33 ರು), ದೆಹಲಿಯಲ್ಲಿ 65 ರು. (ವರ್ಷದ ಹಿಂದೆ 35 ರು,) ಮತ್ತು ಕೋಲ್ಕತ್ತಾದಲ್ಲಿ 53 ರು.ಗೆ ತಲುಪಿದೆ.

ಈ ಹಿನ್ನೆಲೆಯಲ್ಲಿ ದರ ನಿಯಂತ್ರಣಕ್ಕೆಂದೇ ತಾನು ದಾಸ್ತಾನು ಇಟ್ಟಿದ್ದ ಈರುಳ್ಳಿ ಸಂಗ್ರಹವನ್ನು ಕೇಂದ್ರ ಸರ್ಕಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈರುಳ್ಳಿ ಹೊತ್ತ ವಿಶೇಷ ‘ಕಾಂದಾ ಎಕ್ಸ್‌ಪ್ರೆಸ್‌’ ರೈಲುಗಳು ಸೋಮವಾರದಿಂದಲೇ ಮಹಾರಾಷ್ಟ್ರದ ನಾಸಿಕ್‌ನಿಂದ ದೆಹಲಿ, ಚೆನ್ನೈ, ಕೊಚ್ಚಿ ಮತ್ತು ಗುವಾಹಟಿಗೆ ಪ್ರಯಾಣ ಆರಂಭಿಸಿವೆ. ಆ ಪ್ರದೇಶಗಳಲ್ಲಿ ಈರುಳ್ಳಿ ಬೆಲೆ ದೇಶದ ಸರಾಸರಿಗಿಂತ ಹೆಚ್ಚಿರುವ ಕಾರಣ ಆಧ್ಯತೆಯ ಮೇರೆಗೆ ಅಲ್ಲಿಗೆ ಪೂರೈಕೆ ಆರಂಭಿಸಲಾಗಿದೆ.

ಈ ಹಿಂದೆ 2024ರಲ್ಲಿ ಇದೇ ರೀತಿ ಈರುಳ್ಳಿ ದರ ಗಗನಕ್ಕೇರಿದ ವೇಳೆ ಕೇಂದ್ರ ಸರ್ಕಾರ ವಿಶೇಷ ರೈಲುಗಳ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಈರುಳ್ಳಿ ಸಾಗಿಸಿ ಅಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಮೂಲಕ ಬೆಲೆ ನಿಯಂತ್ರಣಕ್ಕೆ ಪ್ರಯತ್ನಿಸಿತ್ತು.

ದರ ಏರಿಕೆ ಏಕೆ?:

ಪ್ರಮುಖ ಈರುಳ್ಳಿ ಉತ್ಪಾದನೆಯ ರಾಜ್ಯವಾದ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಶೇ.5-7ರಷ್ಟು ಉತ್ಪಾದನೆ ಕೊರತೆ ಆಗಿರುವುದು, ಜೊತೆಗೆ ಕರ್ನಾಟಕದಲ್ಲೂ ಇದೇ ರೀತಿಯ ಪರಿಸ್ಥಿತಿ ಇರುವುದು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಲು ಕಾರಣವಾಗಿದೆ. ಪ್ರಸಕ್ತ ಬೆಳೆ ವರ್ಷದಲ್ಲಿ (2025-26ರ ಜುಲೈನಿಂದ ಜೂನ್‌ ಹಂಗಾಮು) ದೇಶದಲ್ಲಿ 307 ಲಕ್ಷ ಟನ್‌ಗಳಷ್ಟು ಈರುಳ್ಳಿ ಉತ್ಪಾದನೆ ಆಗಬಹುದು ಎಂದು ಕೃಷಿ ಸಚಿವಾಲಯ ಅಂದಾಜು ಮಾಡಿದೆ. 2024-25ರ ಬೆಳೆ ವರ್ಷದಲ್ಲೂ ಉತ್ಪಾದನೆ ಇದೇ ಮಟ್ಟಕ್ಕೆ ಕುಂಠಿತವಾಗಿತ್ತು. ಸದ್ಯ ನಾಫೆಡ್‌ನಲ್ಲಿ 1.2 ಲಕ್ಷ ಟನ್‌ಗಳಷ್ಟು ಈರುಳ್ಳಿ ಸಂಗ್ರಹವಿದೆ.

ಅತಿವೃಷ್ಟಿ, ಬರದಿಂದ ಮಹಾರಾಷ್ಟ್ರ, ಕರ್ನಾಟಕದಲ್ಲಿ ಈರುಳ್ಳಿ ಉತ್ಪಾದನೆ ಭಾರೀ ಕುಸಿತ

ಹೀಗಾಗಿ ಮಾರುಕಟ್ಟೆಯಲ್ಲಿ ದರ ಭಾರೀ ಏರಿಕೆ. ದಿಲ್ಲಿಯಲ್ಲಿ ಕೆಜಿಗೆ ₹65, ಚೆನ್ನೈನಲ್ಲಿ ₹58

ಈ ಹಿನ್ನೆಲೆಯಲ್ಲಿ ತನ್ನ ತುರ್ತು ಸಂಗ್ರಹದಲ್ಲಿದ್ದ ಈರುಳ್ಳಿ ಬಿಡುಗಡೆ ಮಾಡಿದ ಸರ್ಕಾರ

ನಾಸಿಕ್‌ನಿಂದ ದೆಹಲಿ, ಚೆನ್ನೈ, ಗುವಾಹಟಿ ಸೇರಿ ಹಲವು ಕಡೆಗೆ ರೈಲಿನಲ್ಲಿ ಸಾಗಾಟ ಶುರು

ರಿಯಾಯಿತಿ ದರದಲ್ಲಿ ಮಾರಾಟ. ಈ ಮೂಲಕ ಮಾರುಕಟ್ಟೆಯಲ್ಲಿ ದರ ನಿಯಂತ್ರಣಕ್ಕೆ ಕ್ರಮ

2024ರಲ್ಲೂ ದರ ಹೆಚ್ಚಳವಾದಾಗ ಇದೇ ರೀತಿ ರೈಲಿನಲ್ಲಿ ಸಾಗಿಸಿ ಅಗತ್ಯವಿರುವ ಕಡೆ ಸೇಲ್‌