ಧಾರವಾಡ:
ಕಳಪೆ ಬಿತ್ತನೆ ಬೀಜದಿಂದಾಗಿ ಸಂಕಷ್ಟಕ್ಕೆ ಈಡಾಗಿದ್ದ ಕಬ್ಬೇನೂರು ಗ್ರಾಮದ ರೈತರಿಗೆ ತೋಟಗಾರಿಕೆ ಇಲಾಖೆ ಮೂಲಕ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಸ್ಪಂದನೆ ದೊರೆತಿದ್ದು, ಮಂಗಳವಾರ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಮಹಾರಾಷ್ಟ್ರ ಮೂಲದ ಪಂಚಗಂಗಾ ಕಂಪನಿಯ ಈರುಳ್ಳಿ ಬೀಜವನ್ನು ಕಬ್ಬೇನೂರು ಗ್ರಾಮದ ಸುಮಾರು 500 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ಶೇ. 75ರಷ್ಟು ಬೀಜ ಮೊಳಕೆ ಒಡಿದಿಲ್ಲ. ಶೇ. 25ರಷ್ಟು ಮೊಳಕೆಯೊಡೆದು ನಂತರ ಬೆಳೆಯಲಿಲ್ಲ. ಇದು ರೈತರನ್ನು ಕಂಗಾಲು ಮಾಡಿತ್ತು. ಅಲ್ಲದೇ, ರೈತರ ಸಮಸ್ಯೆಗೆ ಪಂಚಗಂಗಾ ಕಂಪನಿ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಈ ಕುರಿತು ಜೂ. 29ರಂದು ಕನ್ನಡಪ್ರಭ ವಿಶೇಷ ವರದಿ ಪ್ರಕಟಿಸಿತ್ತು. ಜೊತೆಗೆ ಸೋಮವಾರ ಕಬ್ಬೇನೂರ ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ 50ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ತೋಟಗಾರಿಕಾ ವಿವಿ ವಿಜ್ಞಾನಿಗಳು ರೈತರ ಹೊಲಗಳಿಗೆ ಹೋಗಿ ಪರಿಶೀಲನೆ ಮಾಡಿದರು. ಬಹುತೇಕ ಹೊಲಗಳಲ್ಲಿ ಬೀಜಗಳು ಮೊಳಕೆಯೊಡೆಯದಿರುವ ಬಗ್ಗೆಯೂ ತಂಡ ಗಮನ ಹರಿಸಿತು. ಇನ್ನು, ಮೊಳಕೆಯೊಡೆದ ಬೆಳೆ ಒಣಗಿದ್ದು ವಿಜ್ಞಾನಿಗಳ ತಂಡಕ್ಕೆ ಕಂಡು ಬಂತು. ಈ ರೀತಿಯಾಗಲು ಬೀಜಗಳ ಕಳಪೆಮಟ್ಟವೇ ಇರಬಹುದು ಎಂದು ಅವರೂ ಸಹ ಶಂಕೆ ವ್ಯಕ್ತಪಡಿಸಿದರು.ರೈತರ ಆರೋಪದಂತೆ ಅವರ ಹೊಲಗಳಿಗೆ ಹೋಗಿ ಪರಿಶೀಲನೆ ಮಾಡಲಾಗಿದೆ. ಬೀಜಗಳನ್ನು ಸಹ ಅವರಿಂದ ಪಡೆದುಕೊಂಡಿದ್ದು, ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷಾ ವರದಿ ಬರಲು ಕೆಲ ವಾರಗಳು ಬೇಕಾಗುತ್ತದೆ ಎಂದು ವಿಜ್ಞಾನಿ ಡಾ. ಶಿವಯೋಗಿ ರಾವಲ್ದ್ ಮಾಹಿತಿ ನೀಡಿದರು.