ಕೇಂದ್ರ ವಕ್ಫ್‌ ಜೆಪಿಸಿ ಸಭೇಲಿ ಮಾಣಿಪ್ಪಾಡಿ ಹೇಳಿಕೆ ಗದ್ದಲ! - ‘ಖರ್ಗೆ, ರೆಹಮಾನ್‌ ವಕ್ಫ್‌ ಆಸ್ತಿ ಕಬಳಿಸಿದ್ದಾರೆ’

Published : Oct 15, 2024, 06:53 AM IST
Anwar Manippady

ಸಾರಾಂಶ

ಅನ್ವರ್‌ ಮಾಣಿಪ್ಪಾಡಿ ಅವರು, ‘ಕರ್ನಾಟಕ ವಕ್ಫ್‌ ಜಮೀನು ಹಗರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ರೆಹಮಾನ್‌ ಖಾನ್‌ ಭಾಗಿಯಾಗಿದ್ದಾರೆ’ ಎಂದು ಮಾಡಿದ ಆರೋಪ ಕೋಲಾಹಲಕ್ಕೆ ಕಾರಣವಾಗಿದೆ.

ನವದೆಹಲಿ :  ವಕ್ಫ್‌ ತಿದ್ದುಪಡಿ ಮಸೂದೆಯ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿರುವ ಜಂಟಿ ಸಂಸದೀಯ ಸಮಿತಿ ಸಭೆ ವೇಳೆ ಕರ್ನಾಟಕ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅನ್ವರ್‌ ಮಾಣಿಪ್ಪಾಡಿ ಅವರು, ‘ಕರ್ನಾಟಕ ವಕ್ಫ್‌ ಜಮೀನು ಹಗರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ಮುಖಂಡ ಕೆ.ರೆಹಮಾನ್‌ ಖಾನ್‌ ಭಾಗಿಯಾಗಿದ್ದಾರೆ’ ಎಂದು ಮಾಡಿದ ಆರೋಪ ಕೋಲಾಹಲಕ್ಕೆ ಕಾರಣವಾಗಿದೆ. ಇದನ್ನು ಖಂಡಿಸಿ ಸಮಿತಿಯಲ್ಲಿನ ಪ್ರತಿಪಕ್ಷ ಸದಸ್ಯರು ಸಭೆ ಬಹಿಷ್ಕರಿಸಿ ಹೊರಬಂದಿದ್ದಾರೆ.

ಸೋಮವಾರ ನಡೆದ ಸಭೆಗೆ ಈ ಹಿಂದೆ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದ ಮಾಣಿಪ್ಪಾಡಿ ಅವರನ್ನೂ ಮಸೂದೆ ಬಗ್ಗೆ ಅಭಿಪ್ರಾಯ ಮಂಡನೆಗೆ ಕರೆಯಲಾಗಿತ್ತು. ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ವಕ್ಫ್‌ ಭೂಹಗರಣದ ಬಗ್ಗೆ ಆ ಕುರಿತು ವರದಿ ನೀಡಿದ್ದ ಮಾಣಿಪ್ಪಾಡಿ ಅವರು ಸಭೆಯಲ್ಲಿ ‘ಖರ್ಗೆ ಹಾಗೂ ರೆಹಮಾನ್‌ ಖಾನ್‌ ಸರಿ ಹಲವರು ವಕ್ಫ್‌ ಆಸ್ತಿಗಳನ್ನು ಕಬಳಿಸಿದ್ದಾರೆ’ ಎಂದು ಆರೋಪಿಸಿದರು.

ಇದನ್ನು ವಿರೋಧಿಸಿದ ಸಮಿತಿಯ ವಿಪಕ್ಷ ಸದಸ್ಯರಾದ ಅಸಾದುದ್ದೀನ್‌ ಒವೈಸಿ, ಅರವಿಂದ್‌ ಸಾವಂತ್‌, ಸಂಜಯ ಸಿಂಗ್‌ ಹಾಗೂ ಇತರರು, ‘ಸಂಸದೀಯ ಸಮಿತಿ ಸಭೆಯಲ್ಲಿ ಈ ರೀತಿ ರುಜುವಾತಾಗದ ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಮುಸ್ಲಿಮರು ಈ ಮಸೂದೆ ವಿರೋಧಿಸಬಾರದು ಎಂದೂ ಮಾಣಿಪ್ಪಾಡಿ ಹೇಳಿದರು. ಇದೂ ನಿಯಮ ಮೀರಿದ ಮಾತು. ಸಭೆಯಲ್ಲಿ ಸ್ಪಷ್ಟನೆ ನೀಡಲು ಖರ್ಗೆ, ಖಾನ್‌ ಇಲ್ಲ. ಅಂಥದ್ದರಲ್ಲಿ ಅವರ ವಿರುದ್ಧ ಏಕಪಕ್ಷೀಯ ಆರೋಪ ಮಾಡುವುದು ತಪ್ಪು’ ಎಂದರು.

ಆದರೆ ಇದನ್ನು ತಳ್ಳಿಹಾಕಿದ ಸಮಿತಿ ಅಧ್ಯಕ್ಷ, ಬಿಜೆಪಿಯ ಜಗದಂಬಿಕಾ ಪಾಲ್ ಅವರು ಮಾಣಿಪ್ಪಾಡಿಗೆ ಭಾಷಣ ಮುಂದುವರಿಸಲು ಸೂಚಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ದನಿಗೂಡಿಸಿ, ‘ವಕ್ಫ್‌ ಆಸ್ತಿ ಅಕ್ರಮದ ಬಗ್ಗೆ ಸಭೆಯಲ್ಲಿ ಮಾತನಾಡುವುದು ತಪ್ಪಲ್ಲ’ ಎಂದರು.

ಆಗ ಒವೈಸಿ, ಸಾವಂತ್‌, ಸಂಜಯ್‌ ಸಿಂಗ್‌ ಅಲ್ಲದೆ, ವಿಪಕ್ಷ ಸದಸ್ಯರಾದ ಗೌರವ ಗೊಗೋಯ್‌, ಎ.ರಾಜಾ ಸೇರಿ ಅನೇಕರು ಸಭಾತ್ಯಾಗ ಮಾಡಿದರು ಹಾಗೂ ಸಭೆ ನಿಯಮಾನುಸಾರ ನಡೆಯುತ್ತಿಲ್ಲ ಎಂದು ಆರೋಪಿಸಿದರು. ಅಲ್ಲದೆ, ವಕ್ಫ್‌ ವಿಷಯಕ್ಕೆ ಸಂಬಂಧಪಡದೇ ಇದ್ದರೂ ಹಿಂದೂ ಸಂಘಟನೆಗಳ ಮುಖಂಡರನ್ನೂ ಅಭಿಪ್ರಾಯ ಸಂಗ್ರಹಕ್ಕೆ ಕರೆಯಲಾಗುತ್ತಿದೆ ಎಂದು ಕಿಡಿಕಾರಿದರು.

ಅನ್ವರ್ ಮಾಣಿಪ್ಪಾಡಿ ವಿರುದ್ಧ ಸಭಾತ್ಯಾಗಕ್ಕೆ ರಾಜೀವ್‌ ಖಂಡನೆ

ನವದೆಹಲಿ: ಕರ್ನಾಟಕ ವಕ್ಫ್‌ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಅವರು ವಕ್ಫ್‌ ತಿದ್ದುಪಡಿ ಮಸೂದೆ ಕುರಿತು ಜಂಟಿ ಸದನ ಸಮಿತಿ ಎದುರು ತಮ್ಮ ಅಭಿಪ್ರಾಯ ಮಂಡಿಸುವ ವೇಳೆ, ಸಮಿತಿಯಲ್ಲಿನ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದನ್ನು ಬಿಜೆಪಿ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಖಂಡಿಸಿದ್ದಾರೆ.

ಸೋಮವಾರ ಸಂಜೆ ಟ್ವೀಟ್‌ ಮಾಡಿರುವ ಅವರು, ‘ಅನ್ವರ್ ಮಾಣಿಪ್ಪಾಡಿ ಅವರು ಕರ್ನಾಟಕದಲ್ಲಿ ನಡೆದ ಬೃಹತ್‌ ವಕ್ಫ್ ಭೂಹಗರಣಗಳನ್ನು ಬಯಲಿಗೆಳೆದವರು. ಕೆಲವು ರಾಜಕಾರಣಿಗಳು ಅದರಿಂದ ಹೇಗೆ ಲಾಭ ಪಡೆದರು ಎಂಬದನ್ನು ಅವರು ಸಾರಿ ಹೇಳಿದರು. ವಕ್ಫ್‌ಬೋರ್ಡ್‌ ಗಳಲ್ಲಿನ ಭ್ರಷ್ಟಾಚಾರ, ಪಾರದರ್ಶಕತೆಯ ಕೊರತೆ ಬಗ್ಗೆ ತಮ್ಮ ವರದಿಯಲ್ಲಿ ಅವರು ವಿವರಿಸಿದರು. ಅವರ ಸಂಶೋಧನೆ ಆಧರಿಸಿ ಬಡಮುಸ್ಲಿಮರ ಸುಧಾರಣೆಗೆ ಕ್ರಮಗಳು ಅಗತ್ಯವಾಗಿವೆ. ಆದರೆ ಅದು ಆಗುತ್ತಿಲ್ಲ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮನೆಮನೆಗೆ ಆಯುರ್ವೇದ ಅಗತ್ಯ : ಸಚ್ಚಿದಾನಂದ ಶ್ರೀ
ಆಪರೇಷನ್‌ ಸಿಂದೂರ ವೇಳೆ ಸೈನಿಕರಿಗೆ ಚಹಾ ಕೊಟ್ಟಿದ್ದ ಬಾಲಕಗೆ ಬಾಲ ಪುರಸ್ಕಾರ