ಕೆನಡಾ ಪ್ರಧಾನಿಯಾಗಿ ಮಾರ್ಕ್ ಕರ್ನಿ ಶಪಥ : ಜಸ್ಟಿನ್‌ ಟ್ರುಡೋ ಅವರ ಅಧಿಕಾರ ಮುಕ್ತಾಯ

KannadaprabhaNewsNetwork | Updated : Mar 15 2025, 05:16 AM IST

ಸಾರಾಂಶ

ಭಾರತದ ವಿರುದ್ಧ ಸದಾ ಕಾಲ ಕತ್ತಿ ಮಸೆಯುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಅಧಿಕಾರ ಶುಕ್ರವಾರ ಮುಕ್ತಾಯಗೊಂಡಿದೆ. ಹೊಸ ಪ್ರಧಾನಿಯಾಗಿ ಮಾರ್ಕ್‌ ಕರ್ನಿ ಅಧಿಕಾರ ಸ್ವೀಕರಿಸಿದ್ದಾರೆ.

ಒಟ್ಟಾವ: ಭಾರತದ ವಿರುದ್ಧ ಸದಾ ಕಾಲ ಕತ್ತಿ ಮಸೆಯುತ್ತಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರ ಅಧಿಕಾರ ಶುಕ್ರವಾರ ಮುಕ್ತಾಯಗೊಂಡಿದೆ. ಹೊಸ ಪ್ರಧಾನಿಯಾಗಿ ಮಾರ್ಕ್‌ ಕರ್ನಿ ಅಧಿಕಾರ ಸ್ವೀಕರಿಸಿದ್ದಾರೆ.

ಕರ್ನಿ ಅವರು ಈ ಮೊದಲು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಮತ್ತು ಬ್ಯಾಂಕ್‌ ಆಫ್‌ ಕೆನಡಾದ ಅಧ್ಯಕ್ಷರಾಗಿದ್ದರು. ಇವರು ಲಿಬರಲ್ ಪಕ್ಷದಿಂದ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. ದೇಶದ 24ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದು, ಭಾರತದ ಜತೆ ಉತ್ತಮ ಬಾಂಧವ್ಯ ಹೊಂಡಿದ್ದಾರೆ.

ತಮ್ಮ ವಿರುದ್ಧ ಸ್ವಪಕ್ಷ ಮತ್ತು ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಟ್ರುಡೋ ಅವರು ಜನವರಿಯಲ್ಲಿ ತಾವು ಪಟ್ಟದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಇವರು ಖಲಿಸ್ತಾನಿ ಉಗ್ರರ ಪರ ಭಾರತ ವಿರುದ್ಧ ಹಲವು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು.

ಉ.ಪ್ರ.: ದಾಖಲೆಯ 60,244 ಪೊಲೀಸ್‌ ಪೇದೆ ನೇಮಕ

ಲಖನೌ: ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿಯು ನೇರ ನೇಮಕಾತಿ-2023ರ ಅಡಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ 60,244 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಒಮ್ಮೆಲೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಭರ್ತಿ ಮಾಡಿಕೊಂಡಿರುವುದು ದೇಶದಲ್ಲೇ ಮೊದಲ ಬಾರಿ.ಆಯ್ಕೆಯಾದ ಒಟ್ಟು ಅಭ್ಯರ್ಥಿಗಳಲ್ಲಿ ಮಹಿಳೆಯರು 12,048; ಸಾಮಾನ್ಯ ವರ್ಗದ 12,937; ಹಿಂದುಳಿದ ವರ್ಗಗಳ 32,052; ಪರಿಶಿಷ್ಟ ಜಾತಿಗಳ 14,026 ಮತ್ತು ಪರಿಶಿಷ್ಟ ಪಂಗಡಗಳ 1,229 ಮಂದಿ ಸೇರಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಯ್ಕೆಯಾದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರೀನ್‌ಕಾರ್ಡ್‌ ಇದ್ದರೆ ಶಾಶ್ವತ ನಿವಾಸಿ ಎಂದರ್ಥವಲ್ಲ: ಅಮೆರಿಕ ಉಪಾಧ್ಯಕ್ಷ

ವಾಷಿಂಗ್ಟನ್‌: ಗ್ರೀನ್‌ಕಾರ್ಡ್‌ ಇದ್ದರೆ ಅಮೆರಿಕದ ಶಾಶ್ವತ ನಿವಾಸಿ ಎಂದರ್ಥವಲ್ಲ ಎಂದು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಹೇಳಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ಗ್ರೀನ್‌ಕಾರ್ಡ್‌ ಹೊಂದಿರುವ ಸಾವಿರಾರು ಭಾರತೀಯರಿಗೆ ಆತಂಕ ಉಂಟಾಗಿದೆ.ಶನಿವಾರ ಮಾತನಾಡಿದ ವ್ಯಾನ್ಸ್‌, ‘ಗ್ರೀನ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಇರಲು ಅನಿರ್ದಿಷ್ಟ ಹಕ್ಕನ್ನು ಹೊಂದಿಲ್ಲ. ಅಮೆರುಕ ಅಧ್ಯಕ್ಷರು ಮತ್ತು ವಿದೇಶಾಂಗ ಸಚಿವರು- ‘ಈ ವ್ಯಕ್ತಿ ಅಮೆರಿಕದಲ್ಲಿ ಇರಬಾರದು‘ ಎಂದು ನಿರ್ಧರಿಸಿದರೆ ಮತ್ತು ‘ಅವರಿಗೆ ಇಲ್ಲಿ ಉಳಿಯಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ’ ಎಂದು ಹೇಳಿದರೆ ಮುಗಿಯತು. ಏಕೆಂದರೆ ಇದು ರಾಷ್ಟ್ರೀಯ ಭದ್ರತೆ ವಿಚಾರ’ ಎಂದರು.

ಗ್ರೀನ್ ಕಾರ್ಡ್ ಅನ್ನು ಅಧಿಕೃತವಾಗಿ ಅಮೆರಿಕದ ‘ಶಾಶ್ವತ ನಿವಾಸಿ ಕಾರ್ಡ್’ ಎಂದು ಕರೆಯಲಾಗುತ್ತದೆ, ಇದು ಭಾರತೀಯರು ಸೇರಿದಂತೆ ವಿದೇಶಿ ಪ್ರಜೆಗಳಿಗೆ ದೇಶದಲ್ಲಿ ಅನಿರ್ದಿಷ್ಟ ಅವಧಿಗೆ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ನಿವೃತ್ತಿ ವದಂತಿಗೆ ಬ್ರೇಕ್: ಕೆಬಿಸಿಯಲ್ಲೇ ಬಚ್ಚನ್‌ ಮುಂದುವರಿಕೆ

ಮುಂಬೈ: ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡಪತಿಗೆ ಬಿಗ್‌ ಬಿ ಅಮಿತಾಭ್ ಬಚ್ಚನ್‌ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ವದಂತಿಯನ್ನು ಸ್ವತಃ ಅವರೇ ತಳ್ಳಿ ಹಾಕಿದ್ದು, ಕೆಬಿಸಿ ಕಾರ್ಯಕ್ರಮದ ನಿರೂಪಣೆ ಮುಂದುವರೆಸುವುದಾಗಿ ಹೇಳಿದ್ದಾರೆ.ಕೌನ್ ಬನೇಗಾ ಕರೋಡಪತಿಗೆ ಅಮಿತಾಭ್ ನಿವೃತ್ತಿಯನ್ನು ಹೇಳಲಿದ್ದು, ಐಶ್ವರ್ಯಾ ರೈ ಅಥವಾ ಶಾರುಖ್‌ ಖಾನ್ ಮುಂದಿನ ಸೀಸನ್ ನಡೆಸಿಕೊಡಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು.ಇದಕ್ಕೆ ಕೌನ್‌ ಬನೇಗಾ 16ನೇ ಆವೃತ್ತಿಯ ಕೊನೆಯ ಸಂಚಿಕೆಯಲ್ಲಿ ಬಿಗ್ ಬಿ ಸ್ಪಷ್ಟನೆ ನೀಡಿದ್ದು ‘ ಪ್ರತಿ ಆವೃತ್ತಿಯ ಅಂತ್ಯದ ವೇಳೆಗೆ ನಾನು ಪಡೆದ ಪ್ರೀತಿ ಎಂದಿಗಿಂತಲೂ ಹೆಚ್ಚಿನದಾಗಿದೆ ಎಂಬುದು ಸತ್ಯ. ನಾನು ಅದನ್ನು ಅನಂತವಾಗಿ ಸ್ವೀಕರಿಸುತ್ತಲೇ ಇರುತ್ತೇನೆ. ಈ ಪ್ರೀತಿ ಹಾಗೆಯೇ ಉಳಿಯುತ್ತದೆ. ಎಂದಿಗೂ ಮಸುಕಾಗುವುದಿಲ್ಲ ಎಂಬುದು ನನ್ನ ಭರವಸೆ’ ಎಂದರು. ಕೊನೆಗೆ ಪ್ರೇಕ್ಷಕರನ್ನು ಉದ್ದೇಶಿಸಿ, ‘ಮುಂದಿನ ಅಧ್ಯಾಯದಲ್ಲಿ ನಾನು ನಿಮ್ಮನ್ನು ಮತ್ತೆ ಭೇಟಿಯಾಗುತ್ತೇನೆ’ ಎನ್ನುವ ಮೂಲಕ ವದಂತಿಗೆ ಬ್ರೇಕ್ ಹಾಕಿದರು.

ಸ್ವರ್ಣಮಂದಿರದಲ್ಲಿ ರಾಡ್‌ನಿಂದ ಭಕ್ತರ ಮೇಲೆ ಹಲ್ಲೆ: ಐವರಿಗೆ ಗಾಯ

ಅಮೃತಸರ: ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿ ವ್ಯಕ್ತಿಯೊಬ್ಬಕಬ್ಬಿಣದ ರಾಡ್‌ನಿಂದ ಭಕ್ತರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಐವರು ಗಾಯಗೊಂಡಿರುವ ಆತಂಕಕಾರಿ ಘಟನೆ ಶುಕ್ರವಾರ ನಡೆದಿದೆ.ಸಿಖ್ ಸಮುದಾಯದ ಹೊಸ ವರ್ಷ ಆಚರಣೆಗಾಗಿ ಗೋಲ್ಡನ್ ಟೆಂಪಲ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದ ಸಂದರ್ಭದಲ್ಲಿ ಈ ಹಲ್ಲೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಭಕ್ತರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಹರ್ಯಾಣ ಮೂಲದ ಜುಲ್ಫಾನ್ ಎಂದು ಗುರುತಿಸಲಾಗಿದೆ. 3 ದಿನಗಳ ಹಿಂದೆ ಮನೆ ಬಿಟ್ಟಿದ್ದ ಆತ ಶುಕ್ರವಾರ ಈ ಕೃತ್ಯ ಎಸಗಿದ್ದಾನೆ.

ಶಿರೋಮಣಿ ಗುರದ್ವಾರ ಪ್ರಬಂಧಕ್ ಸಮಿತಿ (ಎಸ್‌ಜಿಪಿಸಿ) ಗುರುರಾಮ್‌ ದಾಸ್‌ ಇನ್‌ನಲ್ಲಿರುವ ಸಮುದಾಯ ಅಡುಗೆ ಮನೆಯ ಬಳಿ ಈ ಘಟನೆ ನಡೆದಿದೆ ಎಂದಿದೆ.ಹಲ್ಲೆಗೂ ಮುನ್ನ ಆರೋಪಿ ತನ್ನ ಸಹಚರನ ಮೂಲಕ ಮಂದಿರದ ಸ್ಥಳವನ್ನು ಪರಿಶೀಲಿಸಿದ್ದಾನೆ. ಕೃತ್ಯ ನಡೆಸಿದ ಆರೋಪಿ ಮತ್ತು ಆತನಿಗೆ ಸಹಕರಿಸಿದ ಸಹಚರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share this article