ಜ.26ಕ್ಕೆ ಉತ್ತರಾಖಂಡದಲ್ಲಿ ಏಕರೂಪ ಸಂಹಿತೆ ಜಾರಿ?

KannadaprabhaNewsNetwork | Published : Jan 15, 2025 12:50 AM

ಸಾರಾಂಶ

ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮೂಲಗಳ ಪ್ರಕಾರ ಜ.26ರಂದು ಕಾಯ್ದೆ ಜಾರಿ ಸಾಧ್ಯತೆ ಇದೆ.

ಡೆಹ್ರಾಡೂನ್‌: ಬಿಜೆಪಿ ಆಡಳಿತದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮೂಲಗಳ ಪ್ರಕಾರ ಜ.26ರಂದು ಕಾಯ್ದೆ ಜಾರಿ ಸಾಧ್ಯತೆ ಇದೆ. ಅದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ‘ಮಕರ ಸಂಕ್ರಾಂತಿಯೊಂದಿಗೆ ಶುರುವಾಗುವ ಉತ್ತರಾಯಣದಲ್ಲಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ’ ಎಂದು ಹೇಳಿದ್ದಾರೆ. 2022ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯುಸಿಸಿ ಜಾರಿಯನ್ನೇ ಪ್ರಮುಖ ಭರವಸೆಯಾಗಿಟ್ಟುಕೊಂಡು ಉತ್ತರಾಖಂಡದಲ್ಲಿ ಗೆಲುವು ಸಾಧಿಸಿತ್ತು. ನಿರೀಕ್ಷೆಯಂತೆ ಜ.26ರಂದು ಅದು ನೆರವೇರಿದರೆ, ದೇಶದಲ್ಲಿ ಯುಸಿಸಿ ಜಾರಿ ಮಾಡಿದ ಮೊದಲ ರಾಜ್ಯ ಎನಿಸಿಕೊಳ್ಳಲಿದೆ. ಯುಸಿಸಿ ಎಂದರೇನು?:ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸೇರಿದಂತೆ ಕೆಲ ವಿಷಯಗಳಲ್ಲಿ ಎಲ್ಲಾ ಧರ್ಮ, ಜಾತಿ, ಸಮುದಾಯದವರಿಗೆ ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ಒಂದೇ ನಿಯಮ ಇರಲಿದೆ. ಈ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯ ಒದಗಿಸಲಾಗುವುದು ಎಂಬುದು ಸರ್ಕಾರದ ಆಶಯ. ಯುಸಿಸಿ ನಿಯಮಗಳು:-ಲಿವ್‌-ಇನ್‌ ನೋಂದಣಿ ಕಡ್ಡಾಯ: ಮದುವೆಯಂತೆ ಲಿವ್‌-ಇನ್‌ ಸಂಬಂಧ ನೋಂದಣಿ ಕಡ್ಡಾಯವಾಗಲಿದೆ. ಇದು ಉತ್ತರಾಖಂಡದಲ್ಲಿ ನೆಲೆಸಿರುವ ಅಥವಾ ಅನ್ಯ ರಾಜ್ಯಗಳಲ್ಲಿ ನೆಲೆಸಿರುವ ಉತ್ತರಾಖಂಡ ಮೂಲದವರಿಗೆ ಅನ್ವಯ. ಇದರಡಿ, ಇಬ್ಬರ ಹೆಸರು, ವಯಸ್ಸಿನ ಸಾಕ್ಷಿ, ದೇಶ, ಧರ್ಮ, ಹಿಂದಿನ ಸಂಬಂಧ, ಸಂಪರ್ಕ ಸಂಖ್ಯೆ ಕುರಿತ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇಂತಹ ಸಂಬಂಧದಿಂದ ಮಗು ಜನಿಸಿದರೆ, ಜನನ ಪ್ರಮಾಣ ಪತ್ರ ದೊರೆತ 7 ದಿನಗಳೊಳಗಾಗಿ ನೋಂದಣಿ ಕಡ್ಡಾಯ. -ಉಯಿಲಿನ ಸಾಕ್ಷಿಗಳ ವಿಡಿಯೋ ಕಡ್ಡಾಯ: ಉಯಿಲು ಬರೆಯುವವರು ತಮ್ಮ ಹಾಗೂ ಉತ್ತರಾಧಿಕಾರಿಯ ಆಧಾರ್‌ ಮಾಹಿತಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಜತೆಗೆ, 2 ಸಾಕ್ಷಿಗಳು ಉಯಿಲು ಪತ್ರವನ್ನು ಓದುವ ವಿಡಿಯೋವನ್ನೂ ಅಪ್‌ಲೋಡ್‌ ಮಾಡಬೇಕು.

Share this article