ನವದೆಹಲಿ: ಅತಿ ಹೆಚ್ಚು ಜವಳಿ ರಫ್ತು ಮಾಡುತ್ತಿದ್ದ ಬಾಂಗ್ಲಾದೇಶ ಕಳೆದ 5 ತಿಂಗಳಿಂದ ಆಂತರಿಕ ಸಂಘರ್ಷದಲ್ಲಿ ಸಿಲುಕಿರುವ ಮತ್ತು ಸತತವಾಗಿ ಭಾರತ ವಿರೋಧಿ ಕೃತ್ಯ ಎಸಗುತ್ತಿರುವ ಬೆನ್ನಲ್ಲೇ, ಆ ದೇಶಕ್ಕೆ ಪರೋಕ್ಷವಾಗಿ ಆರ್ಥಿಕವಾಗಿ ಹೊಡೆತ ನೀಡಲು ಭಾರತ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಹೀಗಾಗಿ ದೇಶೀಯ ಜವಳಿ ಉದ್ಯಮವನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಬರುವ ಬಜೆಟ್‌ನಲ್ಲಿ ಹಲವು ಪಕ್ಕ ಕ್ರಮಗಳನ್ನು ಸರ್ಕಾರ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಏನೇನು ನೆರವು?:ಬಜೆಟ್‌ನಲ್ಲಿ ಜವಳಿ ವಲಯಕ್ಕೆ ನೀಡುವ ಅನುದಾನ ಹೆಚ್ಚಳ, ಕಚ್ಚಾವಸ್ತುಗಳ ಮೇಲಿನ ಸುಂಕ ಕಡಿತ, ಉತ್ಪಾದನೆ ಆಧರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯ ಮೊತ್ತವನ್ನು ಹಾಲಿ ಇರುವ 45 ಕೋಟಿ ರು.ನಿಂದ 60 ಕೋಟಿ ರು.ಗೆ ಹೆಚ್ಚಿಸುವ ಸಾಧ್ಯತೆ ಇದೆ.
ಈ ಕ್ರಮಗಳು ಭಾರತದ ಜವಳಿ ಉತ್ಪನ್ನವನ್ನು ಮತ್ತಷ್ಟು ಅಗ್ಗ ಮಾಡುವುದರ ಜೊತೆಗೆ, ಸಾಮರ್ಥ್ಯ ಹೆಚ್ಚಳಕ್ಕೂ ಕಾರಣವಾಗಲಿದೆ. ಇದು ಜವಳಿ ಉತ್ಪನ್ನಗಳ ರಫ್ತಿಗೆ ನೆರವು ನೀಡಲಿದ್ದು, ಭಾರತ ವಿರೋಧಿ ನಿಲುವು ತಳೆಯುತ್ತಿರುವ ಯೂನಸ್‌ರ ಮಧ್ಯಂತರ ಸರ್ಕಾರಕ್ಕೆ ಭಾರೀ ಪೆಟ್ಟು ನೀಡಲಿದೆ.
ಭಾರತದಲ್ಲಿ ಜವಳಿ ಉದ್ಯಮ 4.5 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿದ್ದು, ಕಳೆದ 8 ತಿಂಗಳಲ್ಲಿ ಶೇ.7ರಷ್ಟು ಬೆಳವಣಿಗೆ ಕಂಡಿದ್ದು, 19 ಲಕ್ಷ ಕೋಟಿ ರು. ತಲುಪಿದೆ. ಸಿದ್ಧ ಉಡುಪು ಉದ್ಯಮ ಶೇ. 11ರಷ್ಟು ಏರಿಕೆಯಾಗಿ 86 ಸಾವಿರ ಕೋಟಿ ರು. ಆಗಿದೆ.
ಬಾಂಗ್ಲಾದೇಶದ ರಫ್ತಿನಲ್ಲಿ ಜವಳಿಯೇ ಶೇ.80ರಷ್ಟು ಪಾಲು ಪಡೆದಿದ್ದು, ಜಿಡಿಪಿಗೆ ಶೇ.11ರಿಂದ 15ರಷ್ಟು ಕೊಡುಗೆ ನೀಡುತ್ತಿದೆ. ಒಂದು ವೇಳೆ ಬಾಂಗ್ಲಾದ ಜವಳಿ ರಫ್ತಿನಲ್ಲಿ ಭಾರತದ ದೊಡ್ಡ ಪಾಲು ಬಾಚಿಕೊಂಡರೆ ಅದು ಬಾಂಗ್ಲಾದೇಶಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಲಿದೆ.
ಜವಳಿ ರಫ್ತು
ಬಾಂಗ್ಲಾದೇಶ57000 ಕೋಟಿ ರು.
==
2024ರಲ್ಲಿ ಒಟ್ಟು ಜವಳಿ ರಫ್ತುಬಾಂಗ್ಲಾದೇಶ43 ಲಕ್ಷ ಕೋಟಿ ರು.
ಭಾರತ13 ಲಕ್ಷ ಕೋಟಿ ರು.