ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದಕ್ಕೆ ವಿವಾಹಿತನೊಬ್ಬ ತನ್ನ ಲಿವ್ - ಇನ್ ಗೆಳತಿಯನ್ನು ಕೊಂದು ಸುಮಾರು 8 ತಿಂಗಳ ಕಾಲ ಶವವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದಿದೆ.
ಭೋಪಾಲ್:ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದಕ್ಕೆ ವಿವಾಹಿತನೊಬ್ಬ ತನ್ನ ಲಿವ್ - ಇನ್ ಗೆಳತಿಯನ್ನು ಕೊಂದು ಸುಮಾರು 8 ತಿಂಗಳ ಕಾಲ ಶವವನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಮಧ್ಯಪ್ರದೇಶದ ದೇವಾಸ್‌ನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಪಿಂಕಿ ಪ್ರಜಾಪತಿ ಎಂದು ಗುರುತಿಸಲಾಗಿದೆ. ಆಕೆಯನ್ನು ಲಿವ್- ಇನ್ ಗೆಳೆಯ ಸಂಜಯ್ ಪಾಟಿದಾರ್ ಕಳೆದ ಜೂನ್ ತಿಂಗಳಿನಲ್ಲಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಸಂಜಯ್ ಬಾಡಿಗೆಗೆ ಪಡೆದಿದ್ದ ಮನೆಯ ಫ್ರಿಡ್ಜ್‌ನಲ್ಲಿ ಆಭರಣ ಧರಿಸಿದ್ದ, ಸೀರೆಯುಟ್ಟ ಸ್ಥಿತಿಯಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಇಬ್ಬರು ಕೂಡ ಕಳೆದ 5 ವರ್ಷಗಳಿಂದ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಪಿಂಕಿ, ಪಾಟಿದಾರ್‌ಗೆ ಮದುವೆಯಾಗುವಂತೆ ಪದೇ ಪದೇ ಹೇಳುತ್ತಿದ್ದಳು, ಇದರಿಂದ ಸಿಟ್ಟಿಗೆದ್ದ ಸಂಜಯ್ ತನ್ನ ಸ್ನೇಹಿತನೊಂದಿಗೆ ಸೇರಿ ಪಿಂಕಿಯನ್ನು ಕೊಲ್ಲಲು ಸಂಚು ರೂಪಿಸಿದ್ದನು ಎಂದು ಮೂಲಗಳಿಂದ ತಿಳಿದು ಬಂದಿದೆ. 30 ವರ್ಷದ ಪಿಂಕಿ 2024ರ ಜೂನ್‌ನಲ್ಲಿ ಕೊಲೆಯಾಗಿರುವುದಾಗಿ ಅನುಮಾನ ವ್ಯಕ್ತವಾಗಿದೆ.
‘ಇತ್ತೀಚೆಗೆ ಮನೆಯಿಂದ ದುರ್ವಾಸನೆ ಬರಲು ಪ್ರಾರಂಭಿಸಿದಾಗ ನೆರೆಹೊರೆಯವರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಆಗ ಫ್ರಿಡ್ಜ್ ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ’ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ. ತುಂಬಾ ಹೊತ್ತು ವಿದ್ಯುತ್ ಕೈಕೊಟ್ಟ ಕಾರಣ ಫ್ರಿಡ್ಜ್ ಬಂದಾಗಿತ್ತು. ಇದೇ ವಾಸನೆ ಹರಡಲು ಕಾರಣ ಎಂದು ಗೊತ್ತಾಗಿದೆ.
ಹಿಂದಿನ ಇಂಥದ್ದೇ ಘಟನೆಗಳು:ದೇಶದಲ್ಲಿ ಈ ಹಿಂದೆ ಇಂತದ್ದೇ ಬೆಚ್ಚಿ ಬೀಳಿಸುವ ಕೃತ್ಯಗಳು ನಡೆದಿತ್ತು. 2022ರ ಮೇನಲ್ಲಿ ದೆಹಲಿಯ ಮೆಹ್ರೌಲಿಯಲ್ಲಿ ಶ್ರದ್ಧಾ ವಾಕರ್ ಎಂಬಾಕೆಯನ್ನು ಆಕೆಯ ಲಿವ್‌ಇನ್ ಗೆಳೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ ಹಾಗೂ ದೇಹವನ್ನು ತುಂಡು ಮಾಡಿದ್ದ. 2024ರಲ್ಲಿ ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಎನ್ನುವ ಮಹಿಳೆಯನ್ನು ಆಕೆಯ ಸ್ನೇಹಿತ 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಮಾಡಿ, ಫ್ರಿಡ್ಜ್‌ನಲ್ಲಿರಿಸಿದ್ದ.