ಸುಕ್ಮಾ: ಬಿಜೆಪಿ ಆಡಳಿತ ಇರುವ ಛತ್ತೀಸಗಢದಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ತಲೆಗೆ 43 ಲಕ್ಷ ರು. ಇನಾಮು ಹೊಂದಿದ್ದ ಇಬ್ಬರು ಮಹಿಳೆಯರು ಸೇರಿದಂತೆ 9 ನಕ್ಸಲರು ಶನಿವಾರ ಪೊಲೀಸರಿಗೆ ಶರಣಾಗಿದ್ದಾರೆ.9 ಮಂದಿಯು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನ ಹಿರಿಯ ಅಧಿಕಾರಿಗಳ ಮುಂದೆ ಹಾಜರಾಗಿ, ‘ಮಾವೋವಾದಿ ಸಿದ್ಧಾಂತ ಪೊಳ್ಳು ಹಾಗೂ ಅಮಾನವೀಯವಾಗಿದೆ. ಅಲ್ಲದೆ ನಕ್ಸಲರ ನಡುವೆಯೇ ಆಂತರಿಕ ಸಂಘರ್ಷವಿದೆ’ ಎಂದು ಹೇಳಿ ಶರಣಾರಾದರು.
ಆದರೆ ಇವರು ಯಾವುದೇ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಲಿಲ್ಲ. ಶಸ್ತ್ರಾಸ್ತ್ರ ರಹಿತರಾಗಿ ಶರಣಾದರು. ಕರ್ನಾಟಕದಲ್ಲಿ ಕೂಡ ಶಸ್ತ್ರಾಸ್ತ್ರ ರಹಿತರಾಗಿ ಇತ್ತೀಚೆಗೆ 6 ನಕ್ಸಲರು ಸಿಎಂ ಮುಂದೆ ಶರಣಾಗಿದ್ದನ್ನು ಬಿಜೆಪಿ ಇಲ್ಲಿ ಟೀಕಿಸುತ್ತಿರುವುದು ಗಮನಾರ್ಹ.ಶರಣಾದ ನಕ್ಸಲೀಯರಿಗೆ ತಲಾ 25 ಸಾವಿರ ರು. ನೀಡಲಾಗಿದ್ದು, ಸರ್ಕಾರ ನೀತಿಯಂತೆ ಇನ್ನಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಬಸ್ತರ್ ಪ್ರದೇಶದಲ್ಲಿ 792 ನಕ್ಸಲರು ಶರಣಾಗಿದ್ದರು.
43 ಲಕ್ಷ ರು. ಇನಾಮು ಇತ್ತು:ಈ 9 ನಕ್ಸಲರ ಪತ್ತೆಗೆ ಪೊಲೀಸರು 43 ಲಕ್ಷ ರು. ಇನಾಮು ಘೋಷಿಸಿದ್ದರು. ಶರಣಾದ ನಕ್ಸಲರ ಪೈಕಿ ರಾನ್ಸಾಯಿ ಅಲಿಯಾಸ್ ಓಯಂ ಬುಸ್ಕಾ, ಪ್ರದೀಪ್ ಅಲಿಯಾಸ್ ರವ್ವ ರಾಕೇಶ್ ತಲೆಗೆ ತಲಾ 8 ಲಕ್ಷ ರು. ಘೋಷಣೆಯಾಗಿತ್ತು. ಉಳಿದಂತೆ ನಾಲ್ವರ ಕೇಡರ್‌ಗಳ ತಲೆಗೆ 5 ಲಕ್ಷ ರು. ಮಹಿಳಾ ನಕ್ಸಲ್ ತಲೆಗೆ 3 ಲಕ್ಷ ರು., ಮಹಿಳೆ ಸೇರಿದಂತೆ ಇನ್ನಿಬ್ಬರ ಇಬ್ಬರ ತಲೆಗೆ 2 ಲಕ್ಷ ರು. ಬಹುಮಾನ ಘೋಷಣೆಯಾಗಿತ್ತು. 2007ರ ನಾರಾಯಣಪುರ, ರಾಣಿಬೋಡ್ಲಿ, 2017 ಮತ್ತು 2020ರಲ್ಲಿ ಸುಕ್ಮಾದಲ್ಲಿ ನಡೆದಿದ್ದ ಭದ್ರತಾ ಸಿಬ್ಬಂದಿಗಳ ಮೇಲಿನ ದಾಳಿ ಪ್ರಕರಣದಲ್ಲಿ ಈ ನಕ್ಸಲರು ಭಾಗಿಯಾಗಿದ್ದರು.