ದುರ್ಗಾ ಪೆಂಡಾಲ್‌ನಲ್ಲಿ ಭಾರಿ ಕಾಲ್ತುಳಿತ: 17 ಬಲಿ

Published : Oct 18, 2026, 06:01 AM IST
Durga Puja pandal stampede

ಸಾರಾಂಶ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿನ ಚೋರ್‌ಬಗನ್‌ ಸರ್ಬೋಜನಿನ್‌ ದುರ್ಗಾ ಪೂಜೆ ಪಂಡಾಲ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿನ ಚೋರ್‌ಬಗನ್‌ ಸರ್ಬೋಜನಿನ್‌ ದುರ್ಗಾ ಪೂಜೆ ಪಂಡಾಲ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಮೃತರಲ್ಲಿ ಒಂದು ಮಗು ಮತ್ತು 12 ಮಹಿಳೆಯರು ಸೇರಿದ್ದಾರೆ. ಜೊತೆಗೆ ಘಟನೆಯಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ. ಈ ನಡುವೆ ಭಾನುವಾರ ಕೋಲ್ಕತಾದ ವಿವಿಧ ದುರ್ಗಾ ಪಂಡಾಲ್‌ಗೆ ಭೇಟಿ ನೀಡಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಂಡಾಲ್‌ ಭೇಟಿ ರದ್ದುಪಡಿಸಿ ಗಾಯಾಳುಗಳ ಭೇಟಿಗೆ ನಿರ್ಧರಿಸಿದ್ದಾರೆ.

ಏನಾಯ್ತು?:

ನವರಾತ್ರಿ ಸಪ್ತಮಿ ಅಂಗವಾಗಿ ದುರ್ತಾ ಪಂಡಾಲ್‌ನಲ್ಲಿ ಶನಿವಾರ ಭಾರೀ ಜನಸಂದಣಿ ಸೇರಿತ್ತು. ಈ ನಡುವೆ ರಾತ್ರಿ 7.30ರ ವೇಳೆಗೆ ಭಾರೀ ಮಳೆ ಸುರಿದ ಕಾರಣ ಪಂಡಾಲ್‌ನ ಹೊರಗೆ ಸರದಿಯಲ್ಲಿ ನಿಂತಿದ್ದ ಭಕ್ತರು ಏಕಾಏಕಿ ಮುಂದೆ ನುಗ್ಗಿದ ಕಾರಣ ಕೆಲವರು ಉರುಳಿಬಿದ್ದಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಆಗ ಹಲವರು ಕಾಲ್ತುಳಿತಕ್ಕೆ ಸಿಕ್ಕಿ ಉಸಿರಾಡಲಾಗದೇ ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆಲವರು ಆಸ್ಪತ್ರೆಗೆ ಸಾಗುವ ವೇಳೆ ಮೃತಪಟ್ಟಿದ್ದಾರೆ.

ನಿರ್ಮಿಸಿದ್ದ ಜಾಗ ಅತ್ಯಂತ ಕಿರಿದಾಗಿತ್ತು

ಪಂಡಾಲ್‌ಗೆ ಪ್ರವೇಶ ಮಾಡುವ ಮತ್ತು ಪಂಡಾಲ್‌ನಿಂದ ಭಕ್ತರು ಹೊರಹೋಗಲು ನಿರ್ಮಿಸಿದ್ದ ಜಾಗ ಅತ್ಯಂತ ಕಿರಿದಾಗಿತ್ತು. ಜೊತೆಗೆ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯೂ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.

ಈ ನಡುವೆ ಘಟನೆ ಬೆನ್ನಲ್ಲೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಗಾಯಾಳುಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರಾತ್ರಿಯೇ ಹಗಲನ್ನು ಬಾಡಿಗೆ ಪಡೀರಿ!
ಅನುದಾನರಹಿತ ಖಾಸಗಿ ಶಿಕ್ಷಕರೂ ಇನ್ನು ಗಣತಿಗೆ - ಇದಕ್ಕಾಗಿ ನಿಯಮಗಳಿಗೆ ಕೇಂದ್ರ ತಿದ್ದುಪಡಿ