;Resize=(412,232))
ಶ್ರೀನಗರ: ಕಳೆದ ವರ್ಷ ಏ.22ರಂದು ಕಾಶ್ಮೀರದ ಪಹಲ್ಗಾಂನ ಸುಂದರ ಕಣಿವೆಯಲ್ಲಿ 25 ಪ್ರವಾಸಿಗರು ಸೇರಿ 26 ಅಮಾಯಕರ ಸಾವಿಗೆ ಕಾರಣವಾಗಿದ್ದ ಉಗ್ರದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಮೊಹಮ್ಮದ್ ಆಸಿಫ್ ಅಲಿಯಾಸ್ ಹಾಶಿಮ್ ಮೂಸಾ ಕೊನೆಗೂ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಇದರೊಂದಿಗೆ, ಪಹಲ್ಗಾಂ ದಾಳಿಯ ಹಿಂದಿದ್ದ ಎಲ್ಲಾ 4 ಪ್ರಮುಖ ಉಗ್ರರು ಮೃತಪಟ್ಟಿದ್ದಾರೆ.
ಗುಪ್ತಚರ ಮಾಹಿತಿಯನ್ನಾಧರಿಸಿ ಮಂಗಳವಾರ ಸೇನೆ, ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ‘ಆಪರೇಷನ್ ಕೊರಗ್’ ಭಾಗವಾಗಿ ಬುದ್ಗಾಂನಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಉಗ್ರರು ಹಾರಿಸಿದ ಗುಂಡಿಗೆ ಪ್ರತಿಯಾಗಿ ಭದ್ರತಾ ಪಡೆಗಳೂ ದಾಳಿ ನಡೆಸಿದ್ದರು. ಬುಧವಾರ ಹುಡುಕಾಟ ನಡೆಸಿದಾಗಿ ಪಾಲ್‌ಮೈದಾನ್‌ನಲ್ಲಿ ಮೂಸಾನ ದೇಹ ಹಾಗೂ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಸೇನೆ ತಿಳಿಸಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಎಲ್‌ಇಟಿಗೆ ಸೇರುವ ಮುನ್ನ ಮೂಸಾ, ಪಾಕ್ ಸೇನೆಯ ಅತ್ಯುನ್ನತ ‘ಸ್ಪೆಷಲ್ ಸರ್ವಿಸಸ್ ಗ್ರೂಪ್’ನ ಹವಾಲ್ದಾರ್ ಆಗಿದ್ದ ಹಾಗೂ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್‌ನ ಭದ್ರತಾ ಬೆಂಗಾವಲಿನ ಭಾಗವೂ ಆಗಿದ್ದ. 2021ರಲ್ಲಿ ಕಾಶ್ಮೀರಕ್ಕೆ ಕಾಲಿಟ್ಟಿದ್ದ ಇವನು, ಪಿರ್ ಪಂಜಾಲ್ ಕಣಿವೆ ಮತ್ತು ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿದ್ದ. ಅನೇಕ ಉಗ್ರದಾಳಿಗಳಲ್ಲಿ ಭಾಗವಹಿಸಿದ್ದ ಇವನ ತಲೆಗೆ ಪಹಲ್ಗಾಂ ದಾಳಿಯ ಬಳಿಕ ಜಮ್ಮು ಕಾಶ್ಮೀರ ಪೊಲೀಸರು 20 ಲಕ್ಷ ರು. ಬಹುಮಾನ ಘೋಷಿಸಿದ್ದರು. ಈ ತಿಂಗಳ ಆರಂಭದಲ್ಲಿ ಯೂಸ್‌ಮಾರ್ಗ್ ಬೆಟ್ಟಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಯಿಂದ ಮೂಸಾ ತಪ್ಪಿಸಿಕೊಂಡಿದ್ದ ಎಂದು ವರದಿಯಾಗಿತ್ತು.
ಈ ಹತ್ಯಾಕಾಂಡದ ಮಾಸ್ಟರ್‌ಮೈಂಡ್ ಮೂಸಾ ಇರುವಿಕೆ ಬಗ್ಗೆ ಸೇನೆಗೆ ಮಾಹಿತಿ
ಈ ಹಿನ್ನೆಲೆಯಲ್ಲಿ ಬುದ್ಗಾಂನಲ್ಲಿ ಕಳೆದ 2 ದಿನದಿಂದ ಸೇನೆಯ ಕಾರ್ಯಾಚರಣೆ
ಈ ವೇಳೆ ನಡೆದ ಎನ್‌ಕೌಂಟರ್ ವೇಳೆ ಮೂಸಾ ಹತ್ಯೆ. ಬುಧವಾರ ಶವ ಪತ್ತೆ
ಇದರೊಂದಿಗೆ ಹತ್ಯಾಕಾಂಡದಲ್ಲಿ ಭಾಗಿ ಆಗಿದ್ದ ಎಲ್ಲಾ ನಾಲ್ವರು ಉಗ್ರರು ಬಲಿ
ಈ ಹಿಂದೆ ಪಾಕ್ ಅಧ್ಯಕ್ಷ ಮುಷರ್ರಫ್ ಭದ್ರತಾ ತಂಡದಲ್ಲಿ ಸೇವೆ ಸಲ್ಲಿಸಿದ್ದ ಉಗ್ರ