ತಪ್ಪಿದ ಮತ್ತೊಂದು ಘೋರ ವಿಮಾನ ದುರಂತ - ದುಬೈ ವಿಮಾನ ಅಪಹರಿಸಿ ಮತ್ತೆ 9/11 ದಾಳಿ ಸಂಚು?

KannadaprabhaNewsNetwork |  
Published : Oct 01, 2026, 04:00 AM IST
Plane

ಸಾರಾಂಶ

80 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ತನ್ನ ವಶಕ್ಕೆ ಪಡೆದು ಬಳಿಕ ಪತನಗೊಳಿಸಿ ಅಮೆರಿಕದ 9/11 ಮಾದರಿ’ಯ ಕೃತ್ಯ ಎಸಗಲು ಸ್ವತಃ ಅದರ ಒಮಾನ್‌ ಮೂಲದ ಸಹ-ಪೈಲಟ್‌ ಯತ್ನಿಸಿದ ಕಂಡಕೇಳರಿಯದ ಘಟನೆ ಬುಧವಾರ ನಡೆದಿದೆ.

ಟೆಲ್‌ ಅವೀವ್‌: 180 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನವನ್ನು ತನ್ನ ವಶಕ್ಕೆ ಪಡೆದು ಬಳಿಕ ಪತನಗೊಳಿಸಿ ಅಮೆರಿಕದ 9/11 ಮಾದರಿ’ಯ ಕೃತ್ಯ ಎಸಗಲು ಸ್ವತಃ ಅದರ ಒಮಾನ್‌ ಮೂಲದ ಸಹ-ಪೈಲಟ್‌ ಯತ್ನಿಸಿದ ಕಂಡಕೇಳರಿಯದ ಘಟನೆ ಬುಧವಾರ ನಡೆದಿದೆ.

ಆದರೆ ಈ ವೇಳೆ, ಅದೇ ವಿಮಾನದಲ್ಲಿದ್ದ ಭಾರತೀಯ ಮೂಲದ ಮುಖ್ಯ ಪೈಲಟ್‌ ಸ್ಮಿತ್‌ ಮಚ್ಛರ್‌ ಎಂಬುವವರು, ತಮ್ಮ ಜೀವವನ್ನೂ ಲೆಕ್ಕಿಸದೆ ಹೋರಾಡಿ ವಿಮಾನ ಅಪಹರಣ ತಡೆದಿದ್ದು ಅಲ್ಲದೆ 180ಕ್ಕೂ ಹೆಚ್ಚು ಜನರ ಜೀವ ಉಳಿಸಿದ್ದಾರೆ. ಜೊತೆಗೆ ಪೈಲಟ್‌ಗಳು ಸೌದಿ ಅರೇಬಿಯಾದಲ್ಲಿ ವಿಮಾನವನ್ನು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇದರೊಂದಿಗೆ ಇಸ್ರೇಲ್‌ನಲ್ಲಿ ಸಂಭವಿಸಬಹುದಾಗಿದ್ದ ಘೋರ ದುರಂತವೊಂದು ತಪ್ಪಿದೆ.

ಭಾರತೀಯ ಮೂಲದ ಮುಖ್ಯ ಪೈಲಟ್‌ ಸ್ಮಿತ್ ಅವರ ವೀರಾವೇಶವನ್ನು ಖುದ್ದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪ್ರಶಂಸಿಸಿದ್ದಾರೆ ಹಾಗೂ ’ಒಮಾನ್ ಮೂಲದ ಪೈಲಟ್‌ ಉಗ್ರ ಕೃತ್ಯಕ್ಕೆ ಕೈಹಾಕಿದ್ದ. ಇಸ್ರೇಲಿಗಳ ಹತ್ಯೆ ಆತನ ಉದ್ದೇಶವಾಗಿತ್ತು. ಆತನನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿದ್ದಾರೆ. ಆತನ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಹಾಗೂ ಭಯೋತ್ಪಾದನೆ ಯತ್ನದ ಬಗ್ಗೆ ತನಿಖೆ ನಡೆದಿದೆ’ ಎಂದಿದ್ದಾರೆ.

ಆಗಿದ್ದೇನು?:

ಎಮಿರೇಟ್ಸ್ ಏರ್‌ಲೈನ್ಸ್‌ನ ಸಹ-ಸಂಸ್ಥೆಯಾದ ‘ಫ್ಲೈದುಬೈ’ನ ಎಫ್‌ಝಡ್‌ 1073 ವಿಮಾನವು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಸ್ರೇಲ್‌ನ ಬೆನ್‌ ಗುರಿಯನ್‌ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಅದರಲ್ಲಿ, ದುಬೈಗೆ ಪ್ರವಾಸಕ್ಕೆ ಬಂದಿದ್ದ 180 ಮಂದಿ ಇಸ್ರೇಲಿಗರಿದ್ದರು.

ವಿಮಾನ ಟೇಕಾಫ್‌ ಆಗಿ 2.5 ಗಂಟೆಗಳ ನಂತರ ಒಮಾನ್‌ ಪ್ರಜೆಯಾದ ಸಹ-ಪೈಲಟ್‌, ವಿಮಾನವನ್ನು ಪತನಗೊಳಿಸಲು ಮುಂದಾಗಿದ್ದಾನೆ. ಇದನ್ನು ಅರಿತ ಭಾರತೀಯ ಮೂಲದ ಮುಖ್ಯ ಪೈಲಟ್ ಸ್ಮಿತ್‌ ಮಚ್ಛರ್‌ ಅದನ್ನು ತಪ್ಪಿಸಲು ಮುಂದಾಗಿದ್ದಾರೆ. ಆಗ ಸ್ಮಿತ್‌ ಮತ್ತು ದುಷ್ಕೃತ್ಯಕ್ಕೆ ಮುಂದಾಗಿದ್ದ ಪೈಲಟ್‌ ನಡುವೆ ಹೊಡೆದಾಟ ಶುರುವಾಗಿದೆ. ಈ ಗದ್ದಲವನ್ನು ಕೇಳಿದ ವಿಮಾನದ ಮುಂಭಾಗದಲ್ಲಿದ್ದ ಪ್ರಯಾಣಿಕರು ಚೀರಾಡಲು ಪ್ರಾರಂಭಿಸಿದ್ದಾರೆ.

ಯಾವುದೇ ವಿಮಾನ ತುರ್ತು ಪರಿಸ್ಥಿತಿಗಳನ್ನೆದುರಿಸಿದಾಗ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಕೋಡ್ ಒಂದನ್ನು ರವಾನಿಸಲಾಗುತ್ತದೆ. ಈ ವಿಮಾನವೂ 7700 ಕೋಡ್‌ ಅನ್ನು ರವಾನಿಸಿದೆ. ಇದು ವಿಮಾನದ ಅಪಹರಣದಂತಹ (ಹೈಜಾಕ್‌) ಕಾನೂನುಬಾಹಿರ ತುರ್ತು ಪರಿಸ್ಥಿತಿಗಳನ್ನು ಸೂಚಿಸುತ್ತದೆ. ಆದರೆ, ತಕ್ಷಣ ಅದನ್ನು ಪೈಲಟ್‌ 7500ಕ್ಕೆ (ವಿಮಾನದಲ್ಲಿ ಗಲಾಟೆ) ಬದಲಾಯಿಸಿದ್ದಾರೆ. ಹೀಗೆ ಹೈಜಾಕ್‌ನ ತುರ್ತು ಎಚ್ಚರಿಕೆ ನೀಡಿದ ಬೆನ್ನಲ್ಲೇ, ವಿಮಾನದ ಹಿಂಭಾಗದಲ್ಲಿ ಕುಳಿತಿದ್ದ ಇಬ್ಬರು ಹೆಚ್ಚುವರಿ ಪೈಲಟ್‌ಗಳು ಕಾಕ್‌ಪೀಟ್‌ನತ್ತ ಧಾವಿಸಿ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ಪಡೆದು ಸೌದಿಯ ತಬುಕ್‌ ಏರ್ಪೋರ್ಟ್‌ನಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ.

ಭಾರತೀಯ ಪೈಲಟ್‌ಗೆ ಚೂರಿ:

ವಿಮಾನದ ಕಾಕ್‌ಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳ ನಡುವೆ ಪ್ರಾರಂಭವಾದ ಗಲಾಟೆ, ಹತ್ಯೆ ಯತ್ನದ ವರೆಗೂ ನಡೆದಿದೆ.

ವಿಮಾನ ಪತನಗೊಳಸುವ ತನ್ನ ಯತ್ನ ತಡೆಯಲು ಬಂದ ಸ್ಮಿತ್‌ ಮೇಲೆ ಸಿಟ್ಟಿಗೆದ್ದ ಒಮಾನಿ ಪೈಲಟ್‌, ಅವರನ್ನು ಚೂರಿಯಿಂದ ಭೀಕರವಾಗಿ ಇರಿದಿದ್ದಾನೆ. ಈ ಸಂಘರ್ಷದ ಸದ್ದು ಕೇಳಿ ಕಾಕ್‌ಪಿಟ್‌ಗೆ ಓಡಿಬಂದ ಕೆಲವು ಪ್ರಯಾಣಿಕರು ಸಿಬ್ಬಂದಿ ಜತೆಗೂಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಚೂರಿ ಇರಿತಕ್ಕೆ ಒಳಗಾದರೂ ಸ್ಮಿತ್‌ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ತುರ್ತಾಗಿ ನಾಗರಿಕ ಮತ್ತು ಮಿಲಿಟರಿ ನೆಲೆ ಇರುವ ಸೌದಿ ಅರೇಬಿಯಾದ ತಬುಕ್‌ನಲ್ಲಿ ಲ್ಯಾಂಡ್‌ ಮಾಡಿದ್ದಾರೆ ಎಂದು ಇಸ್ರೇಲಿ ಸಚಿವರೊಬ್ಬರು ಹೇಳಿದ್ದಾರೆ.

ನಂತರ ಗಾಯಗೊಂಡಿದ್ದ ಸ್ಮಿತ್‌ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹೊಡೆದಾಡಿಕೊಂಡ ಪೈಲಟ್‌ಗಳ ರಕ್ತಸಿಕ್ತ ಟೀಶರ್ಟ್‌ಗಳ ಫೋಟೋಗಳು ಪ್ರಯಾಣಿಕರ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಆಗಿವೆ.

ಇಸ್ರೇಲ್‌ನಿಂದ ಯುದ್ಧವಿಮಾನ ಸಜ್ಜು:

ಹೈಜಾಕ್‌ನ ತುರ್ತು ಎಚ್ಚರಿಕೆ ಬಂದ ಬೆನ್ನಲ್ಲೇ, ತನ್ನ ನೂರಾರು ನಾಗರಿಕರನ್ನು ರಕ್ಷಿಸುವ ಉದ್ದೇಶದಿಂದ ಇಸ್ರೇಲ್ ಯುದ್ಧವಿಮಾನಗಳನ್ನು ಸಜ್ಜುಗೊಳಿಸಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಏಕೆಂದರೆ 1960 ಮತ್ತು 1970ರ ದಶಕಗಳಲ್ಲಿ ಪ್ಯಾಲೆಸ್ಟೀನ್ ಉಗ್ರರು ನಡೆಸಿದ ಸರಣಿ ವಿಮಾನ ಅಪಹರಣ ಮತ್ತು ದಾಳಿಗಳಲ್ಲಿ ಇಸ್ರೇಲಿಗಳನ್ನು ಗುರಿಯಾಗಿಸಲಾಗಿತ್ತು. ಕಳೆದ ಕೆಲವು ದಶಕಗಳಲ್ಲಿ ಇಸ್ರೇಲ್‌ನಲ್ಲಿ ಯಾವುದೇ ವಿಮಾನ ಅಪಹರಣ ಘಟನೆಗಳು ನಡೆದಿಲ್ಲ. ಆದರೂ ಇಸ್ರೇಲ್‌ ಕಾರ್ಯಾಚರಣೆಗೆ ಸಿದ್ಧತೆ ನಡೆಸಿತ್ತು ಎಂದು ತಿಳಿದುಬಂದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಟ್ರಾಫಿಕ್‌ ದಂಡ ಕಟ್ಟದಿದ್ದರೆ ವಿದ್ಯುತ್‌ ಸಂಪರ್ಕ ಕಟ್‌?
ಹಿಂಗಾರಿಗೂ ಎಲ್‌ನಿನೋ ಕಾಟ: ಆಹಾರ ಉತ್ಪಾದನೆ ಕುಸಿತ?