ಪೋರ್ಟ್ ಲೂಯಿಸ್: ಮಾರಿಷಸ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾರಿಷಸ್ ಪ್ರಧಾನಿ ನವಿನ್‌ಚಂದ್ರ ರಾಮಗೂಲಂ ಅವರು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ದಿ ಗ್ರ್ಯಾಂಡ್ ಕಮಾಂಡ್ ಆಫ್ ದಿ ಸ್ಟಾರ್ ಆ್ಯಂಡ್ ಕೋ ಆಫ್ ದಿ ಇಂಡಿಯನ್ ಓಷಿಯನ್’ ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ.ಭಾರತ ಮತ್ತು ಮಾರಿಷಸ್‌ನ ಸಂಬಂಧಗಳನ್ನು ಬಲಪಡಿಸುವಲ್ಲಿ ಕೊಡುಗೆ ನೀಡಿದವರಿಗಾಗಿ ನೀಡುವ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ, ಐದನೇ ವಿದೇಶಿ ಪ್ರಜೆ ಎನ್ನುವ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಇದು ನರೇಂದ್ರ ಮೋದಿಯವರಿಗೆ ವಿದೇಶಿ ರಾಷ್ಟ್ರವೊಂದು ನೀಡಿದ 21ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ.
==ಮಾರಿಷಸ್ ‘ಮಿನಿ ಇಂಡಿಯಾ’: ಮೋದಿ ಪ್ರಶಂಸೆ
ಪೋರ್ಟ್ ಲೂಯಿಸ್: ‘ಮಾರಿಷಸ್ ಮಿನಿ ಇಂಡಿಯಾ ಇದ್ದಂತೆ. ಅದು ಕೇವಲ ನಮ್ಮ ಪಾಲುದಾರ ದೇಶವಾಗಿರದೆ, ಭಾರತದ ಪರಿವಾರದ ಭಾಗವಾಗಿದೆ. ಇದು ಭಾರತ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಕೊಂಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾರಿಷಸ್ ಪ್ರವಾಸಕ್ಕೆ ತೆರಳಿರುವ ಮೋದಿ, ಭಾರತ ಮೂಲದವರೊಂದಿಗಿನ ಸಮುದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನಿ ನವೀನ್‌ಚಂದ್ರ ರಾಮಗೂಲಂ, ಅವರ ಮಡದಿ ಹಾಗೂ ಸಚಿವರ ಸಮ್ಮುಖದಲ್ಲಿ ಮಾತನಾಡಿದ ಅವರು, ‘ಮಾರಿಷಸ್ ಇದು ನಮ್ಮ ಪರಿವಾರದ ಭಾಗವಾಗಿದೆ. ಎರಡೂ ದೇಶಗಳ ನಡುವಿನ ಸಂಬಂಧವು ಇತಿಹಾಸ, ಪರಂಪರೆ ಮತ್ತು ಮಾನವ ಆತ್ಮದಲ್ಲಿ ಆಳವಾಗಿ ಬೇರೂರಿದೆ’ ಎಂದರು.ಅಂತೆಯೇ, ‘ನಾನು ಮೊದಲ ಬಾರಿ ಪ್ರಧಾನಿ ಆಗಿದ್ದಾಗ 2015ರಲ್ಲಿ ಸಾಗರ್ (ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ಯೋಜನೆಯನ್ನು ಘೋಷಿಸಿದ್ದೆ. ಮಾರಿಷಸ್ ಇಂದಿಗೂ ಇದರ ಕೇಂದ್ರಬಿಂದುವಾಗಿದೆ’ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.
ಎರಡು ದಿನಗಳ ಮಾರಿಷಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮಾ.12ರಂದು ಆಚರಿಸಲಾಗುವ ರಾಷ್ಟ್ರೀಯ ದಿನದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ, ದ್ವೀಪರಾಷ್ಟ್ರದೊಂದಿಗೆ ಹಲವು ಒಪ್ಪಂದಗಳನ್ನೂ ಮಾಡಿಕೊಳ್ಳಲಿದ್ದಾರೆ.==
ಮಾರಿಷಸ್ ಪ್ರಧಾನಿ, ಪತ್ನಿಗೆ ಸಾಗರೋತ್ತರ ನಾಗರಿಕತ್ವಪೋರ್ಟ್ ಲೋಯಿಸ್: ಮಾರಿಷಸ್ ಪ್ರಧಾನಿ ನವೀನ್ ರಾಮಗೂಲಂ ಹಾಗೂ ಅವರ ಪತ್ನಿ ವೀಣಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸಾಗರೋತ್ತರ ನಾಗರಿಕತ್ವ(ಒಸಿಐ) ಕಾರ್ಡ್ ನೀಡಿದ್ದಾರೆ.ಮಾರಿಷಸ್‌ನೊಂದಿಗಿನ ದ್ವಿಪಕ್ಷೀಯ ಸಂಬಂಧ ಮತ್ತು ಅಲ್ಲಿರುವ ಭಾರತೀಯರ ಪ್ರತಿ ಭಾರತದ ಬದ್ಧತೆಯ ಪ್ರತೀಕವಾಗಿ ಒಸಿಐ ಕಾರ್ಡ್ ನೀಡಲಾಗಿದೆ. ಮೋದಿ ಅವರಿಂದ ಒಸಿಐ ಕಾರ್ಡ್ ಸ್ವೀಕರಿಸಿದ ರಾಮಗೂಲಂ, ‘ನನಗೆ ಹಾಗೂ ನನ್ನ ಹೆಂಡತಿಗೆ ಇದು ಅಮೋಘ ಅಚ್ಚರಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.ಇದಕ್ಕೂ ಮೊದಲು, ಅಧ್ಯಕ್ಷ ಧರಮ್ ಗೋಕುಲ್ ಹಾಗೂ ಮೊದಲ ಮಹಿಳೆ ವೃಂದಾ ಅವರಿಗೂ ಒಸಿಐ ಕಾರ್ಡ್ ನೀಡಿದ್ದರು.
2024ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾರಿಷಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಭಾರತದ ವಂಶಾವಳಿ ಹೊಂದಿರುವ 7ನೇ ತಲೆಮಾರಿನ ಮಾರಿಷಸ್ ಪ್ರಜೆಗಳಿಗೆ ಒಸಿಐ ಕಾರ್ಡ್ ಪಡೆಯುವ ಅರ್ಹತೆ ನೀಡಲಾಗಿತ್ತು.