ಮೊದಲ ಮಳೆಗೆ ಮುಳುಗಿದ ಮಾಯಾನಗರಿ

KannadaprabhaNewsNetwork | Updated : May 27 2025, 04:14 AM IST

 ಮುಂಗಾರು ಮಾರುತಗಳ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಆರಂಭದಲ್ಲೇ ಭಾರೀ ಅಬ್ಬರ ತೋರಿಸಿವೆ. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಮೊದಲ ಮಳೆಗೆ ತತ್ತರಿಸಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

Follow Us

 ತಿರುವನಂತಪುರಂ/ ಮುಂಬೈ/ ವಿಶಾಖಪಟ್ಟಣಂ: 16 ವರ್ಷಗಳಲ್ಲೇ ಮೊದಲ ಬಾರಿಗೆ ಅತಿ ಬೇಗನೆ ಕೇರಳದ ಕರಾವಳಿ ಪ್ರವೇಶಿಸಿದ್ದ ಮುಂಗಾರು ಮಾರುತಗಳ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಆರಂಭದಲ್ಲೇ ಭಾರೀ ಅಬ್ಬರ ತೋರಿಸಿವೆ. ಅದರಲ್ಲೂ ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಮೊದಲ ಮಳೆಗೆ ತತ್ತರಿಸಿದ್ದು, ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

75 ವರ್ಷಗಳ ದಾಖಲೆ:

ಸಾಮಾನ್ಯವಾಗಿ ಜೂನ್ 11ಕ್ಕೆ ಮುಂಬೈಗೆ ಕಾಲಿಡುತ್ತಿದ್ದ ಮುಂಗಾರು ಕಳೆದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 15 ದಿನಗಳ ಮುಂಚಿತವಾಗಿ ಪ್ರವೇಶಿಸಿದೆ. ವಾಣಿಜ್ಯ ನಗರಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ವಡಾಲಾ ರಸ್ತೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟಮಿರ್ನಸ್‌ ಉಪನಗರ ರೈಲು ಸೇವೆ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಮತ್ತೊಂದೆಡೆ ಮಸೀದಿ ನಿಲ್ದಾಣದಲ್ಲಿ ಹಳಿಗಳ ಮೇಲೆ ನೀರು ನಿಂತಿದ್ದರಿಂದ ಹಾರ್ಬರ್ ರೈಲು ಸೇವೆ ವ್ಯತ್ಯಯವಾಗಿದೆ. ಜೊತೆಗೆ ಸುಮಾರು 250 ವಿಮಾನಗಳ ಸಂಚಾರದಲ್ಲಿಯೂ ವ್ಯತ್ಯಯವಾಗಿದೆ.ಇನ್ನು ಕೆಲವಡೆ ತಗ್ಗು ಪ್ರದೇಶಗಳಿಗೂ ಮಳೆಯ ನೀರು ನುಗ್ಗಿದ್ದು , ವಾಹನ ಸವಾರರು ಪರದಾಡುವಂತಾಯಿತು.

ದಾಖಲೆ ಮಳೆ:

1918ರಲ್ಲಿ ಮೇ ತಿಂಗಳಲ್ಲಿ ಮುಂಬೈನಲ್ಲಿ 279.4 ಮಿ.ಮೀ ಮಳೆಯಾಗಿತ್ತು. ಆದರೆ ಈ ವರ್ಷ ಈಗಾಗಲೇ 295 ಮಿ.ಮೀ ಮಳೆ ಸುರಿಯುವ ಮೂಲಕ 107 ವರ್ಷಗಳ ದಾಖಲೆ ನಿರ್ಮಾಣವಾಗಿದೆ. ಮಳೆ ಮುಂದುವರೆಯುವ ಸೂಚನೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್‌ ಅಲರ್ಟ್‌ ಘೊಷಿಸಲಾಗಿದೆ.

ಹಲವೆಡೆ ಭಾರೀ ಮಳೆ:

ಮುಂಬೈ ಮಾತ್ರವಲ್ಲ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಿದೆ. ಥಾಣೆ ಮತ್ತು ಪಾಲ್ಘರ್‌, ಪುಣೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ.

ಪುಣೆಯ ಬಾರಾಮತಿ, ಇಂದಾಪುರ , ದೌಂಡಾ ತಾಲೂಕುಗಳಲ್ಲಿ ಮಳೆ ದಾಖಲೆ ಬರೆದಿದ್ದು, ಕಳೆದ 50 ವರ್ಷಗಳಲ್ಲಿಯೇ ಮೇ ತಿಂಗಳಿನಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಈ ತಾಲೂಕುಗಳಲ್ಲಿ ಮಾನ್ಸೂನ್ ಋತುವಿನಲ್ಲಿ 14 ಸೆಂ.ಮೀ ಮಳೆಯಾಗುತ್ತಿತ್ತು. ಆದರೆ ಭಾನುವಾರ ಒಂದೇ ದಿನ 13 ಸೆಂ.ಮೀ ಮಳೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದ ಕೋರಿಕೆಯ ಮೇರೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಎರಡು ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ. ಭಾನುವಾರ ಇಂದಾಪುರದ 70 ಹಳ್ಳಿ, ಬಾರಾಮತಿಯ 150 ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಥಾಣೆ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗಿದ್ದು, ಕೆಲ ರಸ್ತೆಗಳನ್ನು ಮುಚ್ಚಲಾಯಿತು. ಉಲ್ಹಾಸ್ ನದಿಯ ನೀರಿನ ಮಟ್ಟ ಏರಿಕೆಯಿಂದಾಗಿ ಕಲ್ಯಾಣ್‌- ಮುರ್ಬಾದ್‌ ರಸ್ತೆಯ ರೈಟೆ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಂಡಿದೆ.

ಕೇರಳ ತತ್ತರ:

ದೇಶಕ್ಕೆ ಮೊದಲು ಮುಂಗಾರು ಪ್ರವೇಶಿಸಿದ ಕೇರಳದಲ್ಲಿ ಮಳೆ ಅಬ್ಬರ ಜೋರಾಗಿದೆ, ಕೇರಳದ ಉತ್ತರ ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಮರಗಳು ಧರೆಗುರುಳಿದೆ. ಮುಂಜಾಗ್ರತಾ ಕ್ರಮವಾಗಿ ಜನರನ್ನು ನಿರಾಶ್ರಿತ ಕೇಂದ್ರ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕಳೆದ ವರ್ಷ ಭೀಕರ ಭೂಕುಸಿತಕ್ಕೆ ನಲುಗಿದ್ದ ವಯನಾಡಿನಲ್ಲಿ ಸದ್ಯ ಮಳೆ ಅಬ್ಬರಿಸುತ್ತಿದ್ದ ಇಲ್ಲಿನ ಪುಳಂಕುನಿ ಹಳ್ಳಿಯ ಬುಡಕಟ್ಟು ಕುಟುಂಬಗಳನ್ನು ಸುಲ್ತಾನ್ ಬತ್ತೇರಿ ನಿರಾಶ್ರಿತ ಶಿಬಿರಗಳಿಗೆ ಕಳುಹಿಸಲಾಗಿದೆ.

ಕೇರಳದ ತ್ರಿಶೂರ್‌, ಪಾಲಕ್ಕಡ್‌, ಕಲ್ಲಿಕೋಟೆ, ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ , ಕಣ್ಣೂರು, ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲವಡೆ ಮರಗಳು ಧರಶಾಹಿಯಾಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಎಚ್ಚರವಾಗಿರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭೂಕುಸಿತ ಆಗುವ ಸಾಧ್ಯತೆಯಿದೆ ಎಂದಿದೆ.

ಆಂಧ್ರದಲ್ಲಿ ಭಾರೀ ಮಳೆ

ಆಂಧ್ರಪ್ರದೇಶದಲ್ಲಿಯೂ ಮುಂಗಾರು ಮಳೆಯಾಗುತ್ತಿದ್ದು ರಾಯಲಸೀಮಾ ಮೂಲಕ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿದೆ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನ ಉಳಿದ ಭಾಗಗಳಿಗೆ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೆಲವು ಕಡೆಗಳಲ್ಲಿ ಮಳೆ ಅಬ್ಬರಿಸಿದೆ. ವಿಜಯವಾಡದಲ್ಲಿಯೂ ಉತ್ತಮ ಮಳೆಯಾಗಿದೆ.

ಬೆಂಗ್ಳೂರಷ್ಟೇ ಅಲ್ಲ, ದೆಹಲಿ, ಮುಂಬೈ ಕೂಡ ಮುಳುಗಿದೆ 

ನವದೆಹಲಿ: ಮೊದಲ ಮುಂಗಾರು ಮಳೆಗೆ ಮುಂಬೈ, ದೆಹಲಿ ನಗರಗಳು ಮುಳುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆಗೆ ಕಾರಣವಾಗಿದೆ. ಬೆಂಗಳೂರಲ್ಲಿ ಭಾರೀ ಮಳೆ ಬಂದು ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾದಾಗಲೆಲ್ಲಾ ಹೊರ ರಾಜ್ಯದ ನೆಟ್ಟಿಗರು ಮತ್ತು ಬೆಂಗಳೂರಿನಲ್ಲಿದ್ದೇ ಬೆಂಗಳೂರನ್ನು ಟೀಕಿಸುವವರು ಜಾಲತಾಣದಲ್ಲಿ ಬೆಂಗಳೂರನ್ನು ಟೀಕಿಸುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದರು.

ಆದರೆ ಇದೀಗ ಮುಂಬೈ, ದೆಹಲಿ ನೀರಿನಲ್ಲಿ ಮುಳುಗಿ ನಿಂತಾಗ ಅವರೆಲ್ಲಾ ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಅಂಥವರ ಇದೀಗ ಬೆಂಗಳೂರಿಗರೂ ಪ್ರತಿಕ್ರಿಯಿಸಿ, ‘ರಾಷ್ಟ್ರರಾಜಧಾನಿ ದೆಹಲಿ ಮತ್ತು ಆರ್ಥಿಕ ರಾಜಧಾನಿ ಮುಂಬೈ ಪರಿಸ್ಥಿತಿ ಕೂಡ ಮಳೆಗಾಲದಲ್ಲಿ ಇದಕ್ಕೆ ಹೊರತಾಗಿಲ್ಲ. ಅಲ್ಲೂ ವಸತಿ ಪ್ರದೇಶಗಳು ಜಲಾವೃತವಾಗಿ ರಸ್ತೆಗಳೆಲ್ಲ ಕೆರೆಗಳಾಗುತ್ತವೆ, ಇದಕ್ಕೆ ಏನು ಹೇಳ್ತೀರಾ?’ ಎಂದು ಪ್ರಶ್ನಿಸುತ್ತಿದ್ದಾರೆ.

ಮಹಾ ಮಳೆಗೆ ಮೆಟ್ರೋ ಸ್ಟೇಷನ್ ಜಲಾವೃತ

ಮುಂಬೈ: ಮುಂಬೈನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಆಚಾರ್ಯ ಅತ್ರೆ ಚೌಕ ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ಆಚಾರ್ಯ ಅತ್ರೆ ಚೌಕ ಮತ್ತು ವರ್ಲಿ ನಿಲ್ದಾಣದ ನಡುವಿನ ಮೆಟ್ರೋ ಮಾರ್ಗ 3 ರ ಸಂಚಾರ ಸ್ಥಗಿತಗೊಂಡಿದೆ. ಮೆಟ್ರೋ ನಿಲ್ದಾಣದದ ಆವರಣದೊಳಗೆ, ಫ್ಲ್ಯಾಟ್‌ಫಾರ್ಮ್‌, ಟಿಕೆಟ್‌ ಕೌಂಟರ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತಿರುವ ವಿಡಿಯೋಗಳು ವೈರಲ್ ಆಗಿವೆ. ಮಳೆಯಿಂದಾಗಿ ಎಸ್ಕ್‌ಲೇಟರ್‌ ಉದ್ದಕ್ಕೂ ನೀರು ಸೋರಿಕೆಯಾಗುತ್ತಿದ್ದು, ನಿಲ್ದಾಣದ ಒಳಗಿನ ಮೇಲ್ಛಾವಣಿ ಕುಸಿದಿದ್ದು, ಕೆಲವು ಯಂತ್ರೋಪಕರಣಗಳು ಚೆಲ್ಲಾಪಿಲ್ಲಿಯಾಗಿವೆ.

Read more Articles on