ಮುಂಬೈ: ಜನಪ್ರಿಯ ಇ-ಕಾಮರ್ಸ್ ವೇದಿಕೆ ಮೀಶೋ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಚಿತ್ರವಿರುವ ಟೀ ಶರ್ಟ್‌ಗಳ ಮಾರಾಟ ಆರಂಭಿಸಿ ವಿವಾದ ಸೃಷ್ಟಿಸಿದೆ. ಆದರೆ ಇದಕ್ಕೆ ಆಕ್ರೋಶ ವ್ಯಕ್ತವಾದ ಬಳಿಕ ಮಾರಾಟ ನಿಲ್ಲಿಸಿದೆ.
ಚಿತ್ರ ನಿರ್ಮಾಪಕ ಅಲಿಶಾನ್ ಜಫ್ರಿ ಈ ಮಾರಾಟಕ್ಕೆ ಆಕ್ಷೇಪಿಸಿ, ‘ಮೀಶೋ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಫ್ಲಾಟ್‌ಫಾರ್ಮ್‌ಗಳಲ್ಲಿ ಲಾರೆನ್ಸ್ ಬಿಷ್ಣೋಯಿ ಚಿತ್ರವಿರುವ ಬಿಳಿ ಬಣ್ಣ ಟೀ ಶರ್ಟ್ ಮೇಲೆ ಗ್ಯಾಂಗ್‌ಸ್ಟರ್ ಎಂದು ಬರೆದು 168 ರು.ಗೆ ಮಾರುತ್ತಿದ್ದಾರೆ. ಇದು ಆನ್‌ಲೈನ್ ತೀವ್ರಗಾಮಿತನ’ ಎಂದು ಹೇಳಿದ್ದಾರೆ.‘ಇದು ಅಪರಾಧವನ್ನು ವೈಭವೀಕರಿಸುತ್ತಿದೆ. ಈ ಬ್ರ್ಯಾಂಡ್‌ಗಳ ಗುರಿ ಮಕ್ಕಳ ಕಡೆಗೆ ಆಗಿರುತ್ತದೆ’ ಎಂದು ಅವರು ಕಿಡಿಕಾರಿದ್ದಾರೆ. ಇದರ ಬೆನ್ನಲ್ಲೇ ಮೀಶೋ ಈ ಟೀಶರ್ಟ್‌ಗಳನ್ನು ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.
==ಟಾಕ್ಸಿಕ್ ಚಿತ್ರ ಬೇಗ ಪೂರ್ಣಗೊಳಿಸಿ: ಯಶ್‌ಗೆ ಶಾರುಖ್
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದು, ‘ನಿಮ್ಮ ಮುಂದಿನ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಗೆ ಕಾಯುತ್ತಿದ್ದೇನೆ. ಆ ಚಿತ್ರ ನಿರ್ಮಾಣ ಪೂರ್ಣಗೊಳಿಸಿ’ ಎಂದು ಮನವಿ ಮಾಡಿದ್ದಾರೆ.ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದೆ. ಅದರಲ್ಲಿ ಶಾರುಖ್ ‘ನನ್ನಂತೆಯೇ ಯಶ್ ಕೂಡ ಬೇಗ ಬೇಗ ಚಿತ್ರ ಪೂರ್ತಿಗೊಳಿಸಬೇಕು. ಬೆಂಗಳೂರಿನಿಂದ’ ಎಂದು ಹೇಳುವುದು ಕೇಳಿಸುತ್ತದೆ.ಶಾರುಖ್ ಖಾನ್ ಕಳೆದ ವರ್ಷ 3 ಚಿತ್ರದಲ್ಲಿ ನಟಿಸಿದ್ದರು. ಯಶ್ 6 ವರ್ಷದಲ್ಲಿ ಕೆಜಿಎಫ್-1 ಹಾಗೂ ಕೆಜಿಎಫ್-2ನಲ್ಲಿ ಮಾತ್ರ ನಟಿಸಿದ್ದಾರೆ. ಟಾಕ್ಸಿಕ್ ಇನ್ನೂ ಚಿತ್ರೀಕರಣ ನಡೆಯುತ್ತಿದೆ.
==ಬುಲೆಟ್ ಟ್ರೈನ್ ಸೇತುವೆ ನಿರ್ಮಾಣ ಹಂತದಲ್ಲೇ ಕುಸಿತ: 3 ಬಲಿ
ನವದೆಹಲಿ: ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಮಹತ್ವಾಕಾಂಕ್ಷಿ ಬುಲೆಟ್ ಯೋಜನೆಯ ಅಡಿ ನಿರ್ಮಾಣವಾಗುತ್ತಿದ್ದ ಸೇತುವೆ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಕುಸಿದಿದ್ದು, 3 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.ವಡೋದರಾ ಬಳಿಯ ಮಾಹಿ ನದಿ ಸಮೀಪದಲ್ಲಿ ಕುಸಿತ ಉಂಟಾಗಿದೆ. ಘಟನೆಯ ಬೆನ್ನಲ್ಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ಆರಂಭವಾಗಿದೆ.ಈ ಬಗ್ಗೆ ಮಾಹಿತಿ ನೀಡಿರುವ ಆನಂದ್‌ನ ಎಸ್‌ಪಿ, ‘ಅವಶೇಷಗಳ ಅಡಿಯಿಂದ ರಕ್ಷಿಸಲಾದ 2 ಕಾರ್ಮಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಇಬ್ಬರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ’ ಎಂದರು.
==ತಿರುಪತಿ ಲಡ್ಡು ವಿವಾದ: ಸಿಬಿಐ ಎಸ್‌ಐಟಿ ರಚನೆ
ಅಮರಾವತಿ: ತಿರುಪತಿ ದೇಗುಲದಲ್ಲಿ ತಯಾರಿಸುವ ಲಡ್ಡಿನಲ್ಲಿ ದನ ಮತ್ತು ಹಂದಿಯ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ಸ್ವತಂತ್ರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ.ಈ ತಂಡದಲ್ಲಿ ಇಬ್ಬರು ಸಿಬಿಐ ಅಧಿಕಾರಿಗಳು, ಆಂಧ್ರಪ್ರದೇಶದ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಸಂಸ್ಥೆ (ಎಫ್‌ಎಎಸ್‌ಎಐ) ಅಧಿಕಾರಿಯೊಬ್ಬರು ಇದ್ದಾರೆ.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಅಧಿಕಾರಾವಧಿಯಲ್ಲಿ ಲಡ್ಡು ತಯಾರಿಕೆಯಲ್ಲಿ ಕೊಬ್ಬನ್ನು ಬಳಸಲಾಗಿತ್ತು ಎಂದು ಇತ್ತೀಚೆಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿ, ತನಿಖೆಗೆ ಎಸ್‌ಐಟಿ ತಂಡವನ್ನು ರಚಿಸಿದ್ದರು. ಆದರೆ ಆ ತಂಡವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಸಿಬಿಐಗೆ ಎಸ್‌ಐಟಿ ತಂಡ ರಚಿಸಲು ನಿರ್ದೇಶಿಸಿತ್ತು.
==ನ.25ರಿಂದ ಡಿ.20ರವರೆಗೆ ಸಂಸತ್ ಚಳಿಗಾಲ ಅಧಿವೇಶನ
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ.25ರಂದು ಆರಂಭವಾಗಿ ಡಿ.20ರಂದು ಮುಕ್ತಾಯವಾಗಲಿದೆ. ಇದರ ನಡುವೆ ಸಂವಿಧಾನ ಅಂಗೀಕಾರದ 75ನೇ ವಾರ್ಷಿಕೋತ್ಸವ ನಿಮಿತ್ತ ನ.26ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ನಡೆಯಲಿದೆ.ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಂಗಳವಾರ ಈ ಘೋಷಣೆ ಮಾಡಿ, ‘ಭಾರತ ಸರ್ಕಾರದ ಶಿಫಾರಸಿನ ಮೇರೆಗೆ ನ.25ರಿಂದ ಡಿ.20ರವರೆಗೆ ಸಂಸತ್ತಿನ ಉಭಯ ಸದನಗಳ ಅಧಿವೇಶನ ನಡೆಸಲು ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ನವೆಂಬರ್ 26ರಂದು ಸಂವಿಧಾನದ ಅಂಗೀಕಾರದ 75ನೇ ವಾರ್ಷಿಕೋತ್ಸವದ ನಿಮಿತ್ತ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ನಡೆಯಲಿದೆ’ ಎಂದು ಹೇಳಿದ್ದಾರೆ.