ನ್ಯೂಯಾರ್ಕ್ (ಅಮೆರಿಕ): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪತ್ನಿ ಮಿಶೆಲ್ ಒಬಾಮಾ ವಿಚ್ಛೇದನ ಪಡೆದುಕೊಳ್ಳುವತ್ತ ಸಾಗಿದ್ದಾರೆ.
ಹೀಗೊಂದು ವದಂತಿ ಹರಿದಾಡುತ್ತಿದೆ. ಮುಂದಿನ ಸೋಮವಾರ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗುವ ಬಗ್ಗೆ ಮಿಶೆಲ್ ಖಚಿತ ಪಡಿಸಿರುವುದು ದಂಪತಿ ಬೇರ್ಪಡುವಿಕೆಯ ಊಹಾಪೋಹಾಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಪತಿ ಒಬಾಮಾ ಭಾಗಿಯಾಗುವ ಅಧಿಕೃತ ಕಾರ್ಯಕ್ರಮದಿಂದ ಮಿಶೆಲ್ ಅಂತರ ಕಾಯ್ದುಕೊಳ್ಳುತ್ತಿರುವುದು ತಿಂಗಳಲ್ಲಿ ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಈ ತಿಂಗಳು ನಡೆದ ಜಿಮ್ಮಿ ಕಾರ್ಟರ್ ಅಂತ್ಯ ಸಂಸ್ಕಾರಕ್ಕೂ ಮಿಶೆಲ್ ಗೈರಾಗಿದ್ದರು. ಇದಕ್ಕೂ ಮೊದಲು ಕೂಡಾ ದಂಪತಿ ವಿವಿಧ ವಿಷಯಗಳಲ್ಲಿ ತಮ್ಮಿಬ್ಬರ ನಡುವಣ ಭಿನ್ನಾಭಿಪ್ರಾಯದ ಕುರಿತು ಸುಳಿವು ನೀಡಿದ್ದರು.
ಬಾರ್ಕ್ ಸೇರಿ ಭಾರತದ 3 ಅಣು ಸಂಸ್ಥೆಗಳ ಮೇಲಿನ ಅಮೆರಿಕ ನಿಷೇಧ ರದ್ದು
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಕೆಲವು ದಿನಗಳ ಮೊದಲೇ ಬೈಡೆನ್ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಬಾರ್ಕ್ ಸೇರಿ ಭಾರತದ 3 ಅಣುಸಂಸ್ಥೆಗಳ ಮೇಲಿನ ನಿಷೇಧವನ್ನು ರದ್ದು ಮಾಡಿದೆ. ಶೀತಲ ಸಮರದ ಕಾಲದಲ್ಲಿ ಭಾರತದ ಮೂರು ಅಣು ಸಂಸ್ಥೆಗಳಾದ ಇಂಡಿಯನ್ ರೇರ್ ಅರ್ಥ್ಸ್ , ಇಂದಿರಾ ಗಾಂಧಿ ಅಣು ಸಂಶೋಧನಾ ಕೇಂದ್ರ, ಬಾಬಾ ಅಣು ಸಂಶೋಧನಾ ಕೇಂದ್ರದ ಮೇಲೆ ಅಮೆರಿಕದ ಭದ್ರತೆ ಮತ್ತು ವಿದೇಶಾಂಗ ನೀತಿ ಹಿತಾಸಕ್ತಿಗಳಿಗೆ ವಿರುದ್ಧವಾದ ಚಟುವಟಿಕೆ ಹೊಂದಿದೆ ಎನ್ನುವ ಕಾರಣಕ್ಕೆ ನಿರ್ಬಂಧ ವಿಧಿಸಿತ್ತು. ಇದೀಗ ನಿರ್ಬಂಧ ತೆರವುಗೊಳಿಸುವುದಾಗಿ ಅಮೆರಿಕ ಘೋಷಿಸಿದ್ದು, ಇದು ಉಭಯ ದೇಶಗಳ ನಡುವೆ ಜಂಟಿ ಸಂಶೋಧನೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಜಂಟಿ ಸಹಕಾರ ಸೇರಿದಂತೆ ಸುಧಾರಿತ ಇಂಧನ ಸಹಕಾರಕ್ಕಿದ್ದ ಅಡೆತೆಗಳನ್ನು ತೊಡೆದು ಹಾಕುತ್ತದೆ ಎಂದು ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್) ಹೇಳಿದೆ.
ಬಾಹ್ಯಾಕಾಶ ಕೇಂದ್ರದಿಂದ 7 ತಿಂಗಳ ಬಳಿಕ ಹೊರಗೆ ಅಡಿಯಿಟ್ಟು ಸುನಿತಾ ನಡಿಗೆ
ಕೇಪ್ ಕಾರ್ನಿವಲ್: ಸತತ 7 ತಿಂಗಳಿಗೂ ಅಧಿಕ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿದ್ದ ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಇದೀಗ ಮೊದಲ ಹೊರಗಡಿಯಿಟ್ಟು ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಬಾಹ್ಯಾಕಾಶ ಕೇಂದ್ರದ ಕಮಾಂಡರ್ ಆಗಿರುವ ಸುನಿತಾ, ನಾಸಾದ ನಿಕ್ ಹೇಗ್ ಅವರ ಜತೆಗೂಡಿ ಕೇಂದ್ರದ ಹೊರಗೆ ಕೆಲ ದುರಸ್ತಿ ಕೆಲಸವನ್ನು ಮಾಡಬೇಕಿದ್ದುದರಿಂದ ಹೊರಬಂದಿದ್ದರು. ಕಳೆದ ವರ್ಷ ಜೂನ್‌ನಲ್ಲಿ 8 ದಿನಗಳ ಯೋಜನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ, ಸ್ಟಾರ್‌ಲೈನ್ ಕ್ಯಾಪ್ಸೂಲ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಅಲ್ಲೇ ಉಳಿಯಬೇಕಾಗಿ ಬಂದಿತ್ತು. ಅವರು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಭೂಮಿಗೆ ಮರಳುವ ನಿರೀಕ್ಷೆಯಿದೆ.
ಕಾಲು ಜಾರಿ ಬಿದ್ದ ಪೋಪ್ ಫ್ರಾನ್ಸಿಸ್ ಕೈಗೆ ಪೆಟ್ಟು: ತಿಂಗಳಲ್ಲಿ 2ನೇ ಘಟನೆ
ರೋಮ್: ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ (88) ಅವರು ಗುರುವಾರ ಕಾಲು ಜಾರಿ ಬಿದ್ದಿದ್ದಾರೆ. ಇದರಿಂದಾಗಿ ಅವರ ಬಲಗೈಗೆ ಪೆಟ್ಟಾಗಿದೆ ಎಂದು ವ್ಯಾಟಿಕನ್ ತಿಳಿಸಿದೆ. ಪೋಪ್ ತಮ್ಮ ಸಾಂತಾ ಮಾರ್ತಾ ಹೌಸ್‌ನಲ್ಲಿ ನಡೆದುಕೊಂಡು ಹೋಗುವ ವೇಳೆ ಬಿದ್ದಿದ್ದಾರೆ. ಬಿದ್ದಾಗ ಬಲಗೈಗೆ ಪೆಟ್ಟಾಗಿದೆ. ಆದರೆ ಫ್ರಾಕ್ಚರ್ ಆಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಬ್ಯಾಂಡೇಜ್ ಹಾಕಲಾಗಿದೆ ಎಂದು ವ್ಯಾಟಿಕನ್ ಅಧಿಕಾರಿಗಳು ತಿಳಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಈ ತಿಂಗಳಲ್ಲಿ ಹೀಗೆ ಕಾಲು ಜಾರಿ ಬಿದ್ದ ಎರಡನೇ ಘಟನೆ ಇದಾಗಿದೆ.
ಕದನ ವಿರಾಮ ಒಪ್ಪಂದ ಪೂರ್ಣಗೊಂಡಿಲ್ಲ: ನೆತನ್ಯಾಹು
ಟೆಲ್ ಅವೀವ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಒಪ್ಪಂದ ಇನ್ನು ನಡೆದಿಲ್ಲ. ಒಪ್ಪಂದ ಜಾರಿಗಾಗಿ ಕಡೆಯ ಹಂತದಲ್ಲಿ ಹಮಾಸ್ ಮುಂದಿಟ್ಟಿರುವ ಕೆಲವು ಬೇಡಿಕೆಗಳು ಒಪ್ಪಂದ ಜಾರಿಗೆ ಅಡ್ಡಿಯಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಕತಾರ್ ಮತ್ತು ಅಮೆರಿಕ ಮಧ್ಯಸ್ಥಿಕೆಯಲ್ಲಿ ಎರಡು ದೇಶಗಳ ನಡುವೆ ಕದನ ವಿರಾಮದ ಒಪ್ಪಂದ ನಡೆದಿದೆ ಎಂದು ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇಸ್ರೇಲ್ ಇನ್ನೂ ಒಪ್ಪಂದ ಪೂರ್ಣಗೊಂಡಿಲ್ಲ ಎಂದಿದೆ, ಜೊತೆಗೆ ಹಮಾಸ್ ತನ್ನ ಹೊಸ ಬೇಡಿಕೆಯಿಂದ ಹಿಂದೆ ಸರಿಯುವವರೆಗೂ ಒಪ್ಪಂದ ಜಾರಿಗೆ ಅನುಮತಿ ನೀಡಲು ಅಗತ್ಯವಾದ ಸಂಪುಟ ಸಭೆ ಕರೆಯಲ್ಲ ಎಂದು ಇಸ್ರೇಲ್ ಹೇಳಿದೆ.
ಶ್ರೀಹರಿಕೋಟಾದಲ್ಲಿ 3ನೇ ಉಡ್ಡಯನ ಕೇಂದ್ರಕ್ಕೆ ಕೇಂದ್ರ ಸಂಪುಟ ಸಮ್ಮತಿ
ನವದೆಹಲಿ: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 3985 ಕೋಟಿ ರು. ವೆಚ್ಚದಲ್ಲಿ 3ನೇ ಉಡ್ಡಯನ ಕೇಂದ್ರ ತೆರೆಯಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯನ್ನು 4 ವರ್ಷಗಳಲ್ಲಿ ನಿರ್ಮಿಸುವ ಗುರಿಯನ್ನು ಇಸ್ರೋ ಹೊಂದಿದೆ. 3ನೇ ಉಡ್ಡಯನ ಕೇಂದ್ರವು ಮುಂದಿನ ತಲೆಮಾರಿನ ಉಡ್ಡಯನ ವಾಹನಗಳಿಗೆ (ಎನ್‌ಜಿಎಲ್‌ವಿ) ಸಹಕಾರಿಯಾಗಿರಲಿದ್ದು, ಸೆಮಿ ಕ್ರಯೋಜೆನಿಕ್ ಹಂತದ ಎಲ್‌ವಿಎಂ3 ರಾಕೆಟ್ ಉಡಾವಣೆಗೂ ಸಹ ಬಳಕೆಯಾಗಲಿದೆ. ಇದನ್ನು ಇಸ್ರೋದ ನುರಿತ ಉಡ್ಡಯನ ತಂತ್ರಜ್ಞರು ನಿರ್ಮಿಸಲಿದ್ದಾರೆ. ಇದರಿಂದಾಗಿ ಇಸ್ರೋದ ಉಡ್ಡಯನ ಸಾಮರ್ಥ್ಯ ಇಮ್ಮಡಿಗೊಳ್ಳಲಿದೆ.