ವರ್ಣದ್ವೇಷ ಎಂದಿಗೂ ಸಹಿಸಲ್ಲ: ಪಿತ್ರೋಡಾ ಹೇಳಿಕೆಗೆ ಮೋದಿ ಕಿಡಿ

KannadaprabhaNewsNetwork |  
Published : May 09, 2024, 01:05 AM ISTUpdated : May 09, 2024, 05:00 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಮತ್ತು ದಕ್ಷಿಣ ಭಾರತೀಯರನ್ನು ಕಪ್ಪುವರ್ಣೀಯರಿಗೆ ಹೋಲಿಸಿದ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಹೇಳಿಕೆ ವಿರುದ್ಧ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

  ವರಂಗಲ್‌ (ತೆಲಂಗಾಣ)/ನವದೆಹಲಿ :  ಉತ್ತರ ಭಾರತೀಯರನ್ನು ಶ್ವೇತವರ್ಣೀಯರಿಗೆ ಮತ್ತು ದಕ್ಷಿಣ ಭಾರತೀಯರನ್ನು ಕಪ್ಪುವರ್ಣೀಯರಿಗೆ ಹೋಲಿಸಿದ ಕಾಂಗ್ರೆಸ್‌ ನಾಯಕ ಸ್ಯಾಮ್‌ ಪಿತ್ರೋಡಾ ಹೇಳಿಕೆ ವಿರುದ್ಧ ದೇಶವ್ಯಾಪಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವರ್ಣದ್ವೇಷವನ್ನು ಎಂದಿಗೂ ಒಪ್ಪಲಾಗದು ಎಂದು ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.

ಇನ್ನೊಂದೆಡೆ ಪಿತ್ರೋಡಾ ಇತ್ತೀಚೆಗೆ ನೀಡಿದ್ದ ಪಿತ್ರಾರ್ಜಿತ ಆಸ್ತಿ ಹಕ್ಕು ಕುರಿತ ಏಟಿನಿಂದಲೇ ಇನ್ನೂ ಚೇತರಿಸಿಕೊಳ್ಳದ ಕಾಂಗ್ರೆಸ್‌, ತನ್ನ ನಾಯಕನ ಹೇಳಿಕೆಯಿಂದಲೂ ಅಂತರ ಕಾಯ್ದುಕೊಂಡಿದೆ. ‘ಇದು ದುರದೃಷ್ಟಕರ ಹೋಲಿಕೆ, ಒಪ್ಪಲಾಗದ ಸಂಗತಿ’ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಮಿತ್ರಪಕ್ಷ ಆಪ್‌ ಕೂಡ ಇದೇ ಮಾತು ಹೇಳಿದೆ.

ವರ್ಣದ್ವೇಷ:  ಪಿತ್ರೋಡಾ ಹೇಳಿಕೆ ಕುರಿತು ಬುಧವಾರ ವರಂಗಲ್‌ನಲ್ಲಿ ನಡೆದ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಚರ್ಮದ ಬಣ್ಣದ ಆಧಾರದಲ್ಲಿನ ಅವಮಾನವನ್ನು ದೇಶ ಎಂದಿಗೂ ಸಹಿಸದು. ನಾವು ಕಪ್ಪು ಚರ್ಮ ಹೊಂದಿದ್ದ ಕೃಷ್ಣನ ಆರಾಧಕರು. ರಾಷ್ಟ್ರಪತಿ ಚುನಾವಣೆ ವೇಳೆ ದ್ರೌಪದಿ ಮುರ್ಮು ಅವರನ್ನು ಸೋಲಿಸಲು ರಾಹುಲ್‌ ಗಾಂಧಿ ಕರೆ ನೀಡಿದ್ದು ಅವರ ಚರ್ಮದ ಬಣ್ಣ ಕಪ್ಪು ಎಂಬ ಕಾರಣಕ್ಕೇ ಎಂಬುದೀಗ ಅರ್ಥವಾಗಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಜೊತೆಗೆ ‘ನನ್ನ ದೇಶದ ಜನರ ಸಾಮರ್ಥ್ಯವನ್ನು ಅವರ ಚರ್ಮದ ಬಣ್ಣದ ಮೇಲೆ ನಿರ್ಧರಿಸಲಾಗುವುದೇ? ಈ ಚರ್ಮದ ಬಣ್ಣದ ಆಟ ಆಡಲು ಶೆಹಜಾದಾಗೆ (ರಾಹುಲ್‌ ಗಾಂಧಿ) ಅನುಮತಿ ಕೊಟ್ಟಿದ್ದು ಯಾರು? ಇದಕ್ಕೆ ಶೆಹಜಾದಾ ಉತ್ತರಿಸಲೇಬೇಕು. ನಾನು ಇಂದು ಬಹಳ ಕೋಪಗೊಂಡಿದ್ದೇನೆ. ನನ್ನನ್ನು ಯಾರು ಬೇಕಾದರೂ ನಿಂದಿಸಲಿ, ನಾನು ಸಹಿಸಿಕೊಳ್ಳುವೆ. ಆದರೆ ಶೆಹಜಾದಾನ ಚಿಂತಕ (ಪಿತ್ರೋಡಾ) ಇಂಥ ದೊಡ್ಡ ನಿಂದನೆ ಮಾಡುತ್ತಾರೆ ಎಂದಾದಲ್ಲಿ ಅದು ನನ್ನಲ್ಲಿ ಅತೀವ ಕೋಪ ತರಿಸಿದೆ’ ಎಂದು ರಾಹುಲ್‌ ಮತ್ತು ಪಿತ್ರೋಡಾ ವಿರುದ್ಧ ಮೋದಿ ಹರಿಹಾಯ್ದರು.

ಇದೇ ವೇಳೆ, ‘ದಕ್ಷಿಣ ಭಾರತೀಯರ ವರ್ಣದ ಬಗ್ಗೆ ಪಿತ್ರೋಡಾ ಮಾತಾಡಿರುವ ಕಾರಣ ಇಂಡಿಯಾ ಕೂಟದಿಂದ ಡಿಎಂಕೆ ಹೊರಬರುತ್ತದೆಯೇ?’ ಎಂದೂ ಮೋದಿ ಸವಾಲೆಸೆದರು.

ಬಿಜೆಪಿ ನಾಯಕರು ಕೆಂಡ:ಇನ್ನು ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ ಪ್ರತಿಕ್ರಿಯೆ ನೀಡಿ, ‘ಸ್ಯಾಮ್ ಪಿತ್ರೋಡಾ ಹೇಳಿಕೆ ದೇಶದ ಮೂಲಭೂತ ಹೆಗ್ಗುರುತಿನ ಕುರಿತ ಅವರ ಅಜ್ಞಾನ ಮತ್ತು ತಿರಸ್ಕಾರವನ್ನು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ. ಇನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಪ್ರತಿಕ್ರಿಯೆ ನೀಡಿ, ‘ಸ್ಯಾಮ್‌ ಭಾಯ್‌, ನಾನು ಈಶಾನ್ಯ ಭಾರತದವನು ಮತ್ತು ನಾನು ಭಾರತೀಯನ ರೀತಿಯಲ್ಲೇ ಕಾಣುತ್ತೇನೆ. ನಾವು ವೈವಿಧ್ಯಮ ದೇಶದವರು. ನಾವು ನೋಡಲು ಬೇರೆ ಬೇರೆ ರೀತಿ ಇರಬಹುದು, ಆದರೆ ನಾವೆಲ್ಲರೂ ಒಂದೇ. 

ದಯವಿಟ್ಟು ನಮ್ಮ ದೇಶದ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಲು ಪ್ರಯತ್ನಿಸಿ ಎಂದು ಸಲಹೆ ನೀಡಿದ್ದಾರೆ.ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರತಿಕ್ರಿಯೆ ನೀಡಿ, ‘ನಾನು ದಕ್ಷಿಣ ಭಾರತದವಳು. ನಾನು ಭಾರತೀಯರ ರೀತಿಯಲ್ಲೇ ಕಾಣುತ್ತೇನೆ. ನನ್ನ ತಂಡದಲ್ಲಿ ಈಶಾನ್ಯ ಭಾರತದ ಉತ್ಸಾಹ ಭರಿತ ಸದಸ್ಯರಿದ್ದಾರೆ. ಅವರೂ ಭಾರತೀಯರ ರೀತಿಯಲ್ಲೇ ಕಾಣುತ್ತಾರೆ. ನನ್ನ ಪಶ್ಚಿಮ ಭಾರತದ ಸಹದ್ಯೋಗಿಗಳು ಕೂಡಾ ಭಾರತೀಯರ ರೀತಿಯಲ್ಲೇ ಕಾಣುತ್ತಾರೆ. ಆದರೆ ರಾಹುಲ್‌ ಗಾಂಧಿಯ ಜನಾಂಗೀಯ ಮಾರ್ಗದರ್ಶಕರ ಪಾಲಿಗೆ ನಾವೆಲ್ಲಾ ಆಫ್ರಿಕಾ, ಅರಬ್‌, ಚೀನಿ ಮತ್ತು ಶ್ವೇತವರ್ಣೀಯರ ರೀತಿಯಲ್ಲಿ ಕಾಣುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ