ಚುನಾವಣೆ ಸೋಲಿನ ಹತಾಶೆಯಿಂದ ಸದನಕ್ಕೆ ಕಾಂಗ್ರೆಸ್‌ನಿಂದ ಅಡ್ಡಿಯಅಗುತ್ತಿದೆ, ಕೆಲವು ಪಕ್ಷಗಳು ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆಯುತ್ತಿವೆ, ಭದ್ರತಾ ಲೋಪಕ್ಕೆ ಬೆಂಬಲಿಸುವುದೂ ಭದ್ರತಾ ಲೋಪಕ್ಕೆ ಸಮವಾದಂತೆ, ಬಿಜೆಪಿಯನ್ನು ಕಿತ್ತೊಗೆಯುವುದು ಇಂಡಿಯಾ ಕೂಟದ ಧ್ಯೇಯವಾದರೆ, ರಾಷ್ಟ್ರವನ್ನು ಅಭಿವೃದ್ಧಿ ಮಾಡುವುದು ಬಿಜೆಪಿ ಧ್ಯೇಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.ನವದೆಹಲಿ: ‘ಪಂಚರಾಜ್ಯ ಚುನಾವಣೆಯಲ್ಲಿ ಎದುರಿಸಿದ ಸೋಲಿನ ಹತಾಶೆಯಿಂದ ಪ್ರತಿಪಕ್ಷಗಳು ಸದನದಲ್ಲಿ ಕಾರ್ಯಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಅಲ್ಲದೆ, 141 ಸಂಸದರು ಸದನದಿಂದ ಅಮಾನತಾಗಿರುವುದನ್ನು ಉಲ್ಲೇಖಿಸಿರುವ ಅವರು, ‘ಈಗ ಖಾಲಿ ಆಗಿರುವ ಆಸನಗಳನ್ನು ಬಿಜೆಪಿ ಸಂಸದರು 2024ರಲ್ಲಿ ಅಲಂಕರಿಸಲಿದ್ದಾರೆ. ಈ ಮೂಲಕ ಮುಂದಿನ ಚುನಾವಣೆ ಬಳಿಕ ವಿಪಕ್ಷಗಳು ಮತ್ತಷ್ಟು ಬಲಹೀನ ಆಗಲಿವೆ’ ಎಂದಿದ್ದಾರೆ.ಮಂಗಳವಾರ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ‘ಚುನಾವಣೆಯ ಸೋಲಿನಿಂದ ಹತಾಶಗಿಂಡು, ಪ್ರತಿಪಕ್ಷಗಳು ಸದನದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಬೆಂಬಲಿಸುವ ರೀತಿ ನಡೆದುಕೊಳ್ಳುತ್ತಿವೆ. ಭದ್ರತಾ ಲೋಪವು ಗಂಭೀರ ವಿಷಯವಾಗಿದ್ದು, ಅದನ್ನು ಬೆಂಬಲಿಸುವುದೂ ಸಹ ಭದ್ರತಾ ಲೋಪ ಮಾಡುವುದಕ್ಕೆ ಸಮನಾಗುತ್ತದೆ. ಇದರಿಂದಾಗಿ ಯುವಜನತೆ ದಾರಿ ತಪ್ಪುತ್ತಿದ್ದಾರೆ’ ಎಂದು ಕಿಡಿಕಾರಿದರು.