ನವದೆಹಲಿ: ನಾನು ವಿಐಪಿ ಅಲ್ಲ, ಜನ ಸಾಮಾನ್ಯ ಎಂದು ಹೇಳಿದ್ದೆ - ಪ್ರಧಾನಿ ನರೇಂದ್ರ ಮೋದಿ

KannadaprabhaNewsNetwork |  
Published : Jan 11, 2025, 12:48 AM ISTUpdated : Jan 11, 2025, 04:32 AM IST
ಮೋದಿ | Kannada Prabha

ಸಾರಾಂಶ

‘ನಾನು ವಿಐಪಿ ಅಲ್ಲ, ಜನಸಾಮಾನ್ಯ ಎಂದು ನನ್ನ ಭದ್ರತಾ ಸಿಬ್ಬಂದಿಗೆ ಗುಜರಾತ್‌ ಸಿಎಂ ಆದಾಗಲೇ ಹೇಳಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ನವದೆಹಲಿ: ‘ನಾನು ವಿಐಪಿ ಅಲ್ಲ, ಜನಸಾಮಾನ್ಯ ಎಂದು ನನ್ನ ಭದ್ರತಾ ಸಿಬ್ಬಂದಿಗೆ ಗುಜರಾತ್‌ ಸಿಎಂ ಆದಾಗಲೇ ಹೇಳಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು.

ಶುಕ್ರವಾರ ಪ್ರಸಾರವಾದ ಕನ್ನಡಿಗ ಉದ್ಯಮಿ ನಿಖಿಲ್‌ ಕಾಮತ್‌ ಅವರ ‘ಡಬ್ಲುಟಿಎಫ್‌’ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋದಿ 2 ತಾಸು ಕಾಲ ಅನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದು ಮೋದಿ ಅವರ ಮೊದಲ ಪೋಡ್‌ಕಾಸ್ಟ್‌ ಕೂಡ ಹೌದು.

‘ನಾನು ಗುಜರಾತ್‌ ಸಿಎಂ ಆಗಿದ್ದಾಗ 2002 ರಲ್ಲಿ ಗೋಧ್ರಾದಲ್ಲಿನ ದೃಶ್ಯಗಳನ್ನು ನೋಡಿದಾಗ ನನಗೆ ನೋವು ಉಂಟಾಯಿತು. ಆಗ ನಾನು ಹೆಲಿಕಾಪ್ಟರ್‌ ಮೂಲಕ ಗೋಧ್ರಾಗೆ ಹೋಗಲು ಬಯಸಿದೆ. ಒಂದೇ ಇಂಜಿನ್ ಹೆಲಿಕಾಪ್ಟರ್ ಇದೆ. ಇದು ವಿಐಪಿಗಳಿಗೆ ಅಲ್ಲ. ಹೋಗಬೇಡಿ ಎಂದು ಭದ್ರತಾ ಸಿಬ್ಬಂದಿ ಹೇಳಿದರು. ಆದರೆ ‘ನಾನು ವಿಐಪಿ ಅಲ್ಲ, ಸಾಮಾನ್ಯ ಮನುಷ್ಯ ... ಏನೇ ಸಂಭವಿಸಿದರೂ ನಾನೇ ಜವಾಬ್ದಾರ ಎಂದು ಬರೆದುಕೊಡುವೆ’ ಎಂದು ಹೇಳಿದೆ. ಕೊನೆಗೆ ಗೋಧ್ರಾಗೆ ಹೋಗಿ ನಾನು ಅಲ್ಲಿ ನೋವಿನ ದೃಶ್ಯಗಳನ್ನು ನೋಡಿದೆ. ಆಗ ನನ್ನಲ್ಲಿ ಭಾವನೆಗಳು ಉಕ್ಕಿ ಬಂದರೂ ಸುಮ್ಮನಿದ್ದೆ. ಏಕೆಂದರೆ ಒಂದು ರಾಜ್ಯದ ನಾಯಕನಾಗಿ ನನ್ನ ಭಾವನೆ ಹತ್ತಿಕ್ಕಿಕೊಳ್ಳಬೇಕು. ಸಮಚಿತ್ತದಿಂದ ಇರಬೇಕು’ ಎಂದರು.

‘2008ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ 5 ಸ್ಥಳಗಳಲ್ಲಿ ಸರಣಿ ಸ್ಫೋಟಗಳು ನಡೆದಿದ್ದವು. ಅಲ್ಲಿಗೆ ಹೋಗಬೇಡಿ ಎಂದು ನನ್ನ ಭದ್ರತಾ ಸಿಬ್ಬಂದಿ ಹೇಳಿದ್ದರೂ ನಾನು ಪೊಲೀಸ್ ನಿಯಂತ್ರಣ ಕೊಠಡಿಗೆ ಹೋದೆ’ ಎಂದೂ   ನುಡಿದರು. 

2002ರ ಗುಜರಾತ್‌ ಚುನಾವಣೆ ನನ್ನ ಅಗ್ನಿಪರೀಕ್ಷೆ: ಮೋದಿ

ಗೋಧ್ರಾ ಗಲಭೆ ನಡೆದ ವರ್ಷವೇ ಜರುಗಿದ 2002ರ ಗುಜರಾತ್ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಜೀವನದ ದೊಡ್ಡ ಪರೀಕ್ಷೆ ಎಂದು ಬಣ್ಣಿಸಿದ್ದಾರೆ.

’ಆ ಚುನಾವಣೆಗಳಲ್ಲಿ, ಫಲಿತಾಂಶಗಳು ಬರುತ್ತಿರುವಾಗ ನಾನು ಟೀವಿ ನೋಡಲೇ ಇಲ್ಲ. ಮಧ್ಯಾಹ್ನದವರೆಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಜನರಿಗೆ ಹೇಳಿದ್ದೆ. ನನ್ನ ಮನೆಯ (ಸಿಎಂ ಮನೆ) ಹೊರಗೆ ಮಧ್ಯಾಹ್ನದ ಸುಮಾರಿಗೆ, ಢೋಲ್‌ ಶಬ್ದ ಕೇಳಿದೆ. ನಂತರ ನನ್ನ ಆಪರೇಟರ್, ನಾವು ಮೂರನೇ ಎರಡರಷ್ಟು ಬಹುಮತದಿಂದ ಗೆದ್ದೆವು ಎಂದು ಹೇಳಿದ’ ಎಂದು ಮೋದಿ ಸ್ಮರಿಸಿದರು.

ನಾನೂ ಹಿಂದಿ ಭಾಷಿಕನಲ್ಲ: ಮೋದಿ

ನವದೆಹಲಿ: ಹಿಂದಿ ವರ್ಸಸ್‌ ಸ್ಥಳೀಯ ಭಾಷೆ ಯುದ್ಧವು ದೇಶದಲ್ಲಿ ನಡೆದಿರುವ ನಡುವೆಯೇ ‘ನಾನೂ ಹಿಂದಿ ಭಾಷಿಕನಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂದರ್ಶಕ ನಿಖಿಲ್‌ ಕಾಮತ್‌ ಅವರು, ‘ನನ್ನ ತಾಯಿ ಮೈಸೂರಿನವರು. ನನ್ನ ತಂದೆ ಮಂಗಳೂರವರು. ನನಗೆ ಅಷ್ಟು ಚೆನ್ನಾಗಿ ಹಿಂದಿ ಬರಲ್ಲ. ಅನ್ಯಥಾ ಭಾವಿಸಬೇಡಿ’ ಎಂದು ಮೋದಿಗೆ ಕೋರಿದರು. ಆಗ ಮೋದಿ, ‘ನಾನೂ ನಿಮ್ಮ ರೀತಿಯೇ. ನನ್ನದು ಗುಜರಾತ್‌. ನಾನೂ ಹಿಂದಿ ಭಾಷಿಕನಲ್ಲ’ ಎಂದರು.

ನಾನು ಬಟ್ಟೆ ಒಗೀತಿದ್ದೆ: ಮೋದಿ

‘ಚಿಕ್ಕಂದಿನಲ್ಲಿ ನನ್ನ ಹಳ್ಳಿಯಲ್ಲಿ ಮನೆಯವರ ಎಲ್ಲ ಬಟ್ಟೆಯನ್ನು ನಾನು ಒಗೆಯುತ್ತಿದ್ದೆ. ಹೀಗಾಗಿ ನನಗೆ ಕೆರೆಗೆ ಹೋಗಲು ಅವಕಾಶ ಸಿಗುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟೂರು ವಡ್‌ನಗರದಲ್ಲಿನ ಜೀವನದ ಬಗ್ಗೆ ಕುತೂಹಲದ ಮಾಹಿತಿ ಬಿಚ್ಚಿಟ್ಟರು.

ನಾನು ‘ಆರ್ಡಿನರಿ’ ವಿದ್ಯಾರ್ಥಿ: ಮೋದಿ

ನಾನು ಚಿಕ್ಕಂದಿನಲ್ಲಿ ಆರ್ಡಿನರಿ (ಸಾಮಾನ್ಯ) ವಿದ್ಯಾರ್ಥಿ ಆಗಿದ್ದೆ. ಪ್ರತಿಭೆ ಇದ್ದರೂ ಓದಿನ ಕಡೆ ಗಮನ ಹರಿಸಲ್ಲ ಎಂದು ಶಿಕ್ಷಕರು ನನ್ನ ತಂದೆಗೆ ನನ್ನ ಬಗ್ಗೆ ದೂರಿದ್ದರು. ಆದರೆ ಪಠ್ಯೇತರ ಚಟುವಟಿಕೆಯಲ್ಲಿ ಜೋರಾಗಿದ್ದೆ ಎಂದು ಮೋದಿ ಬಾಲ್ಯದ ದಿನಗಳನ್ನು ಸ್ಮರಿಸಿದರು.

ಚಂದ್ರಯಾನ-2 ವಿಫಲವಾದರೆ ನಾನು ಹೊಣೆ ಎಂದಿದ್ದೆ

ಈ ಹಿಂದೆ ಚಂದ್ರಯಾನ-2 ಉಡ್ಡಯನ ವೀಕ್ಷಿಸಲು ನಾನು ಬೆಂಗಳೂರು ಇಸ್ರೋ ಕಚೇರಿಗೆ ಬಂದಿದ್ದೆ. ಆದರೆ ಯಾನ ವಿಫಲ ಆದರೆ ಮುಜುಗರ ಆಗಬಹುದು ಬರಬೇಡಿ ಎಂದು ನನಗೆ ಕೆಲವರು ಸಲಹೆ ನೀಡಿದ್ದರು. ಆಗ ನಾನು. ‘ವಿಫಲವಾದರೆ ನಾನು ಹೊಣೆ ಹೊರುವೆ. ವಿಜ್ಞಾನಿಗಳಿಗೆ ಧೈರ್ಯ ತುಂಬುವೆ’ ಎಂದು ಬಂದೆ ಎಂದು ಮೋದಿ ಸ್ಮರಿಸಿದರು.

ಮೆಲೋನಿ ಜತೆಗಿನ ಮೀಮ್‌ ನೋಡಿದ್ದೇನೆ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆಗಿನ ಆತ್ಮೀಯತೆ ಕುರಿತ ಮೀಮ್‌ ನೋಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನಗುತ್ತಾ ಪ್ರತಿಕ್ರಿಯೆ ನೀಡಿದ ಮೋದಿ, ನಗುತ್ತಾ ಪ್ರತಿಕ್ರಿಯಿಸಿದರು, ‘ವೋ ತೋ ಚಲತಾ ರೆಹ್ತಾ ಹೈ’ (ಅದು ಹೀಗೆಯೇ ನಡೆಯುತ್ತದೆ) ಎಂದು ಚಟಾಕಿ ಹಾರಿಸಿದರು.

ನಾನು ದೇವರಲ್ಲ, ಮನುಷ್ಯ, ತಪ್ಪು ಆಗುತ್ತವೆ: ಮೋದಿ

ನವದೆಹಲಿ: ‘ನಾನೇನು ದೇವರಲ್ಲ. ಮನುಷ್ಯ ತಪ್ಪು ಆಗುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಿಖಿಲ್‌ ಕಾಮತ್‌ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನಲ್ಲಿ ಮಾಡಿದ ಭಾಷಣದಲ್ಲಿ ‘ನಾನು ಕೂಡ ತಪ್ಪು ಮಾಡುತ್ತೇನೆ’ ಎಂದು ಜನರಿಗೆ ಹೇಳಿದ್ದೆ. ಏಕೆಂದರೆ ನಾನು ಮನುಷ್ಯ, ದೇವರಲ್ಲ’ ಎಂದು ಹೇಳಿದರು.

ಇನ್ನು, ‘ರಾಜಕೀಯಕ್ಕೆ ಹೋಗಬೇಡಿ. ಕೆಟ್ಟದ್ದು. ಎಂದು ನಮ್ಮ ಮನೆಯವರು ನನಗೆ ಹೇಳುತ್ತಿದ್ದರು’ ಎಂದು ಕಾಮತ್‌ ಕೇಳಿದಾಗ, ‘ನೀವು ಆ ಮಾತನ್ನು ನಂಬಿದ್ದೇ ಆದಲ್ಲಿ ನನ್ನೆದುರು ಇಂದು ಕೂತು ಮಾತಾಡುತ್ತಿರಲಿಲ್ಲ’ ಎಂದು ಚಟಾಕಿ ಹಾರಿಸಿದರು.

ಇದಲ್ಲದೆ, ‘ಭಾರತ ಯಾವತ್ತೂ ಯುದ್ಧದ ಸಂದರ್ಭದಲ್ಲಿ ತಟಸ್ಥವಾಗಿಲ್ಲ. ಶಾಂತಿಯ ಪಕ್ಷಪಾತಿ ನಾವು’ ಎಂದರು.

ನಾನು ಮಾನವನಲ್ಲ ಎಂದಿದ್ದ ಮೋದಿಯಿಂದ ಡ್ಯಾಮೇಜ್‌ ಕಂಟ್ರೋಲ್‌ ಯತ್ನ: ಕಾಂಗ್ರೆಸ್

ನವದೆಹಲಿ: ‘ನಾನೇನು ದೇವರಲ್ಲ, ಮನುಷ್ಯ. ನನ್ನಿಂದ ತಪ್ಪು ಆಗುತ್ತವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌, ‘ಒಂದೊಮ್ಮೆ ನಾನು ಮಾನವನಲ್ಲ ಎಂದಿದ್ದವರು ಈಗ ಹೀಗೆ ಹೇಳುವ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನಿಸುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಮೇಶ್‌, ‘ಕೇವಲ 8 ತಿಂಗಳ ಮುಂಚೆ ನಾನು ದೇವರಿಂದ ಕಳಿಸಲ್ಪಟ್ಟವನು ಎಂದಿದ್ದ ಮೋದಿ ಈಗ ನಾನೂ ಮನುಷ್ಯನೇ ಎನ್ನುವ ಮೂಲಕ ತಮ್ಮ ತಪ್ಪಿಗೆ ತೇಪೆ ಹಚ್ಚಲು ಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.

ನಿಖಿಲ್‌ ಕಾಮತ್‌ ಅವರ ‘ಡಬ್ಲುಟಿಎಫ್‌’ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಮೋದಿ, ‘ನಾನು ತಪ್ಪು ಮಾಡುತ್ತೇನೆ. ಏಕೆಂದರೆ ನಾನು ಮನುಷ್ಯ, ದೇವರಲ್ಲ. ಆದರೆ ಕೆಟ್ಟ ಉದ್ದೇಶದೊಂದಿಗೆ ಯಾವತ್ತೂ ಕೆಡುಕನ್ನು ಮಾಡುವುದಿಲ್ಲ’ ಎಂದಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ