ಆದಿವಾಸಿಗಳ ಕಲ್ಯಾಣ: ನಾಳೆಯೋಜನೆಗೆ ಮೋದಿ ಚಾಲನೆ- (ಮೆಗಾ ಸ್ಕೀಂ) ₹24000 ಕೋಟಿ ವೆಚ್ಚದ ಬೃಹತ್‌ ಆಂದೋಲನ- 75 ಜನಾಂಗದ 28 ಲಕ್ಷ ಆದಿವಾಸಿಗಳ ಅಭಿವೃದ್ಧಿ ಗುರಿ

KannadaprabhaNewsNetwork | Updated : Nov 14 2023, 01:16 AM IST

ಸಾರಾಂಶ

ನವದೆಹಲಿ: ದೇಶದ ಬುಡಕಟ್ಟು ಸಮುದಾಯವನ್ನು ಸಬಲೀಕರಣಗೊಳಿಸುವ ಬೃಹತ್ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಪಿಎಂ ಪಿವಿಟಿಜಿ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿ ಮಿಷನ್‌ಗೆ ಚಾಲನೆ ನೀಡಲಿದ್ದಾರೆ.

ದೇಶದ ಬುಡಕಟ್ಟು ಸಮುದಾಯವನ್ನು ಸಬಲೀಕರಣಗೊಳಿಸುವ ಗುರಿ

ಪಿವಿಟಿಜಿ ಅಭಿವೃದ್ಧಿ ಆಂದೋಲನಕ್ಕೆ ನಾಳೆ ಪ್ರಧಾನಿ ಮೋದಿ ಚಾಲನೆ

18 ರಾಜ್ಯಗಳ 220 ಜಿಲ್ಲೆಗಳ 22544 ಹಳ್ಳಿಗಳಲ್ಲಿರುವ ಆದಿವಾಸಿಗಳು

ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ ಈಗ ಜಾರಿ

ನವದೆಹಲಿ: ದೇಶದ ಬುಡಕಟ್ಟು ಸಮುದಾಯವನ್ನು ಸಬಲೀಕರಣಗೊಳಿಸುವ ಬೃಹತ್ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನ.15 ರಂದು ಪಿಎಂ ಪಿವಿಟಿಜಿ (ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳು) ಅಭಿವೃದ್ಧಿ ಮಿಷನ್‌ಗೆ ಚಾಲನೆ ನೀಡಲಿದ್ದಾರೆ.

ದೇಶದ 18 ರಾಜ್ಯಗಳ 220 ಜಿಲ್ಲೆಗಳ 22,544 ಹಳ್ಳಿಗಳಲ್ಲಿ 75 ಅತಿ ದುರ್ಬಲ ಆದಿವಾಸಿ ಜನಾಂಗಗಳು (ಪಿವಿಟಿಜಿ) ಇದ್ದು, ಇವರ ಒಟ್ಟು ಜನಸಂಖ್ಯೆ 28 ಲಕ್ಷವಾಗಿದೆ. 24,000 ಕೋಟಿ ರು.ಗಳ ಈ ಯೋಜನೆಯು ಈ ದುರ್ಬಲ ಆದಿವಾಸಿ ಜನಾಂಗಗಳ ಸಮಗ್ರ ಅಭಿವೃದ್ಧಿಯತ್ತ ಗಮನ ಹರಿಸಲಿದೆ. ‘ಇದು ಸ್ವಾತಂತ್ರ್ಯದ ನಂತರದ ಇಂಥ ಮೊದಲ ಯೋಜನೆಯಾಗಿದೆ. ನ.15ರಂದು ಆದಿವಾಸಿಗಳ ಅಭಿವೃದ್ಧಿಯ ‘ಜನಜಾತೀಯ ಗೌರವ ದಿನಾಚರಣೆ’ ನಡೆಯಲಿದ್ದು, ಅಂದೇ ಯೋಜನೆಗೆ ಚಾಲನೆ ಸಿಗಲಿದೆ’ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ.

2023-24ರ ಬಜೆಟ್‌ನಲ್ಲಿ ಹೊಸ ಮಿಷನ್‌ನ ಘೋಷಣೆ ಮಾಡಲಾಗಿತ್ತು. ಈಗ 9 ಸಚಿವಾಲಯಗಳ ಮೂಲಕ ಮಿಷನ್ ಅನ್ನು ಕಾರ್ಯಗತಗೊಳಿಸಲಾಗುತ್ತದೆ.

ಏನೇನು ಅಭಿವೃದ್ಧಿ?:ಬುಡಕಟ್ಟು ಜನಾಂಗದವರು ಚದುರಿದ, ದೂರದ ಮತ್ತು ಪ್ರವೇಶಿಸಲಾಗದ ವಾಸಸ್ಥಳಗಳಲ್ಲಿ ವಾಸಿಸುತ್ತಾರೆ. ಅರಣ್ಯ ಪ್ರದೇಶಗಳಲ್ಲಿರುತ್ತಾರೆ. ಆದ್ದರಿಂದ ಇಂಥ ಕುಟುಂಬಗಳ ಸಮಗ್ರ ಅಭಿವೃದ್ಧಿಯೇ ಮಿಷನ್‌ನ ಉದ್ದೇಶವಾಗಿದೆ.

ಆದಿವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಟೆಲಿಕಾಂ ಸಂಪರ್ಕ, ವಿದ್ಯುತ್, ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಸುಧಾರಿತ ಪ್ರವೇಶ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಈ ಯೋಜನೆ ಮೂಲಕ ನೀಡಲಾಗುತ್ತದೆ.ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆ, ಪಿಎಂ ಗ್ರಾಮ ಆವಾಸ್‌ ಯೋಜನೆ, ಜಲಜೀವನ ಮಿಷನ್‌ಗಳನ್ನು ಆದಿವಾಸಿ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತದೆ. ಈ ಯೋಜನೆಗಳ ಸುಗಮ ಜಾರಿಗೆ ನಿಯಮ ಸಡಿಲ ಮಾಡಲಾಗುತ್ತದೆ.ಪಿಎಂ ಜನ ಆರೋಗ್ಯ ಯೋಜನೆಯಡಿ ಕುಡುಗೋಲು ಕೋಶ ರೋಗ ನಿವಾರಣೆ (ಸಿಕಲ್‌ ಸೆಲ್‌), ಟಿಬಿ ನಿವಾರಣೆ, ಶೇ.100ರಷ್ಟು ರೋಗ ನಿರೋಧಕ ಚುಚ್ಚುಮದ್ದು ವಿತರಣೆ, ಪಿಎಂ ಸುರಕ್ಷಿತ ಮಾತೃತ್ವ ಯೋಜನೆ, ಪಿಎಂ ಮಾತೃ ವಂದನಾ ಯೋಜನೆ, ಪಿಎಂ ಪೋಷಣ ಹಾಗೂ ಪಿಎಂ ಜನಧನ ಯೋಜನೆಗಳನ್ನು ಇಲ್ಲಿ ಜಾರಿ ಆಗಲಿವೆ.

Share this article