ಇನ್ನು 10 ದಿನ, 12 ರಾಜ್ಯದ 29 ಕಾರ್ಯಕ್ರಮಕ್ಕೆ ನರೇಂದ್ರ ಮೋದಿ

KannadaprabhaNewsNetwork | Updated : Mar 04 2024, 09:13 AM IST

ಸಾರಾಂಶ

ಲೋಕಸಭೆ ಚುನಾವಣೆ ಮುನ್ನ ಸತತ ರಾಜ್ಯ ಪ್ರವಾಸ ಮಾಡುವ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಿಂದ ಸತತ 10 ದಿನ 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 29 ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮಾಡಲಿದ್ದಾರೆ.

 ಇದೇ ವೇಳೆ, ಆಯಾ ರಾಜ್ಯಗಳಲ್ಲಿ ಸಾರ್ವಜನಿಕ ಸಮಾವೇಶಗಳನ್ನೂ ಉದ್ದೇಶಿಸಿ ಮಾತನಾಡಿ, ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ಹೊಸ ಹುರುಪು ತುಂಬಲಿದ್ದಾರೆ.

ಪ್ರಧಾನಿ ಅವರ ಅಧಿಕೃತ ಕಾರ್ಯಕ್ರಮ ಪಟ್ಟಿಯ ಪ್ರಕಾರ, ಮುಂದಿನ 10 ದಿನಗಳಲ್ಲಿ ಅವರು ಬಿಹಾರ, ಉತ್ತರಪ್ರದೇಶ, ಗುಜರಾತ್‌, ರಾಜಸ್ಥಾನ, ದೆಹಲಿ, ಪಶ್ಚಿಮ ಬಂಗಾಳ, ತೆಲಂಗಾಣ, ತಮಿಳುನಾಡು, ಅಸ್ಸಾಂ, ಅರುಣಾಚಲಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.

ಸೋಮವಾರ ಮೋದಿ ಅವರ ಪ್ರವಾಸ ಆರಂಭವಾಗಲಿದೆ. ದೆಹಲಿಯಿಂದ ತೆಲಂಗಾಣದ ಅದಿಲಾಬಾದ್‌ಗೆ ತೆರಳಲಿರುವ ಅವರು ಅಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. 

ಬಳಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿಂದ ತಮಿಳುನಾಡಿನ ಕಲ್ಪಾಕಂ ಅಣು ಸ್ಥಾವರಕ್ಕೆ ತೆರಳಲಿದ್ದಾರೆ. ಬಳಿಕ ಚೆನ್ನೈನಲ್ಲಿ ಸಮಾವೇಶ ನಡೆಸಿ, ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.

ಮಾ.5ರ ಮಂಗಳವಾರ ತೆಲಂಗಾಣದ ಸಂಗಾರೆಡ್ಡಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ರ್‍ಯಾಲಿ ನಡೆಸಲಿದ್ದಾರೆ. ನಂತರ ಒಡಿಶಾಕ್ಕೆ ಪ್ರಯಾಣ ಬೆಳೆಸಿ, ಜಾಜ್‌ಪುರ ಜಿಲ್ಲೆಯ ಚಾಂಡಿಖೋಲೆಯಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ, ಪಶ್ಚಿಮ ಬಂಗಾಳಕ್ಕೆ ತೆರಳುತ್ತಾರೆ.

ಮಾ.6ರಂದು ಕೋಲ್ಕತಾ, ನಂತರ ಬಿಹಾರ ಬೆಟ್ಟಿಯಾಕ್ಕೆ ಭೇಟಿ ನೀಡಲಿದ್ದಾರೆ. ಮಾ.7ರಂದು ಜಮ್ಮು-ಕಾಶ್ಮೀರಕ್ಕೆ ಹೋಗಿ, ಸಂಜೆ ದೆಹಲಿಯಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಮಾ.8ರಂದು ದೆಹಲಿಯಲ್ಲಿ ಮತ್ತೊಂದು ಕಾರ್ಯಕ್ರಮ ಮುಗಿಸಿ ಅಸ್ಸಾಂಗೆ ಪ್ರಯಾಣ ಬೆಳೆಸಲಿದ್ದಾರೆ.ಮಾ.9ರಂದು ಅರುಣಾಚಲಪ್ರದೇಶ, ಬಳಿಕ ಅಸ್ಸಾಂ ನಂತರ ಪಶ್ಚಿಮ ಬಂಗಾಳದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಸಮಾವೇಶಗಳಲ್ಲಿ ಭಾಷಣ ಮಾಡಲಿದ್ದಾರೆ. 

ಮಾ.10ರಂದು ಉತ್ತರಪ್ರದೇಶ, ಮಾ11ರಂದು ದೆಹಲಿ, ಹರ್ಯಾಣ, ಮಾ.12ರಂದು ಗುಜರಾತ್‌, ರಾಜಸ್ಥಾನ, ಮಾ.13ರಂದು ಗುಜರಾತ್‌ ಹಾಗೂ ಅಸ್ಸಾಂನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Share this article