;Resize=(412,232))
ನವದೆಹಲಿ: ಯುವಕರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ಸೆಲ್ಫಿ ವಿಡಿಯೋವನ್ನು ಸ್ವಲ್ಪ ಹೊತ್ತು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಅದರ ಮಾತೃಸಂಸ್ಥೆ ಮೆಟಾದ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಯಾಚಿಸಬೇಕು ಎಂದು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ಅಧ್ಯಕ್ಷ ನಿಶಿಕಾಂತ್ ದುಬೆ ಆಗ್ರಹ ಮಾಡಿದ್ದಾರೆ.
ಗೂಗಲ್, ಮೆಟಾದಂತಹ ಸಾಮಾಜಿಕ ಜಾಲತಾಣಗಳ ಪ್ರತಿನಿಧಿಗಳ ಜತೆ, ಸಂಸದೀಯ ಸ್ಥಾಯಿ ಸಮಿತಿ ಸೋಮವಾರ ಸಭೆ ನಡೆಸಿತ್ತು. ಈ ಸಭೆಯಲ್ಲಿ, ಪ್ರಧಾನಿಯವರ ವಿಡಿಯೋ ಡಿಲೀಟ್ ಆಗಿದ್ದರ ಹೊಣೆಯನ್ನು ಯಾರು ಹೊರುತ್ತಾರೆ? ಎಂಬಲ್ಲಿಂದ ಹಿಡಿದು, ಆಕ್ಷೇಪಾರ್ಹ ಪೋಸ್ಟ್‌ಗಳ ವಿರುದ್ಧ ಇಂಥ ಕ್ರಮಗಳನ್ನೇಕೆ ಕೈಗೊಳ್ಳಲಾಗುತ್ತಿಲ್ಲ ಎಂಬಲ್ಲಿಯ ವರೆಗೆ ಪ್ರಶ್ನೆಗಳನ್ನು ಮೆಟಾಗೆ ಕೇಳಲಾಯಿತು ಹಾಗೂ ಜನಸಾಮಾನ್ಯರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿತು. ಈ ವೇಳೆ ಘಟನೆ ಕುರಿತು ಕ್ಷಮೆ ಕೇಳುವುದಾಗಿ ಮೆಟಾದ ಅಧಿಕಾರಿಗಳು ಪ್ರಸ್ತಾಪ ಮಾಡಿದರು ಎನ್ನಲಾಗಿದೆ.
ಜುಕರ್‌ಬರ್ಗ್ ಅವರೇ ಕ್ಷಮೆ ಕೇಳಬೇಕು ಎಂದು ಒತ್ತಾಯ
ಆದರೆ ಇದಕ್ಕೆ ಒಪ್ಪದ ಸ್ಥಾಯಿ ಸಮಿತಿ ಅಧ್ಯಕ್ಷ ದುಬೆ, ಘಟನೆಯ ಹೊಣೆಯನ್ನು ಮೆಟಾ ಹೊರಬೇಕು ಮತ್ತು ಸ್ವತಃ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.