ಭೋಪಾಲ್: ಮಧ್ಯಪ್ರದೇಶ ರಾಜಧಾನಿಯಲ್ಲಿ 90 ಡಿಗ್ರಿ ತಿರುವಿನಲ್ಲಿ ಸೇತುವೆ ನಿರ್ಮಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇಂಥ ಅಪಾಯಕಾರಿ ಮೇಲ್ಸೇತುವೆ ನಿರ್ಮಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರ 7 ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ.ಇಲ್ಲಿನ ಐಶ್‌ಬಾಗ್‌ನಲ್ಲಿ ಸರ್ಕಾರ 18 ಕೋಟಿ ರು. ವೆಚ್ಚದಲ್ಲಿ ರೈಲು ಹಳಿಗಳ ಮೇಲೆ ಸೇತುವೆ ನಿರ್ಮಿಸಿತ್ತು. ಸ್ಥಳದ ಅಭಾವ ಹಾಗೂ ಪಕ್ಕದಲ್ಲೇ ಮೆಟ್ರೋ ನಿಲ್ದಾಣವಿದ್ದ ಕಾರಣ ಸೇತುವೆ ನೇರವಾಗಿರದೇ 90 ಡಿಗ್ರಿ ತಿರುವಿನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಿತ್ತು.
ಆದರೆ ಇಂಥ ಸೇತುವೆ ಅಸುರಕ್ಷಿತ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಾದ ಹೆಚ್ಚಾಗುತ್ತಿದ್ದಂತೆ ಮಧ್ಯಪ್ರದೇಶ ಸರ್ಕಾರ ಇಬ್ಬರು ಮುಖ್ಯ ಎಂಜಿನಿಯರ್ ಸೇರಿದಂತೆ 7 ಲೋಕೋಪಯೋಗಿ ಎಂಜಿನಿಯರ್‌ಗಳನ್ನು ವಜಾಗೊಳಿಸಿದೆ ಹಾಗೂ ಇಲಾಖಾ ವಿಚಾರಣೆಗೆ ಆದೇಶಿಸಿದೆ.
ವಿಧ್ವಂಸಕ ಕೃತ್ಯದ ದೃಷ್ಟಿಯಲ್ಲೂ ಏರಿಂಡಿಯಾ ದುರಂತದ ತನಿಖೆ
ನವದೆಹಲಿ: 270 ಜನರನ್ನು ಆಹುತಿ ಪಡೆದ ಜೂ.12ರ ಅಹಮದಾಬಾದ್ ಏರ್ ಇಂಡಿಯಾ ದುರಂತಕ್ಕೆ ಕಾರಣ ಪತ್ತೆ ಯತ್ನ ನಡೆಯುತ್ತಿದ್ದು, ಇದು ವಿಧ್ವಂಸಕ ಕೃತ್ಯ ಇರಬಹುದೇ ಎಂಬ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ತಿಳಿಸಿದ್ದಾರೆ.
ಎನ್‌ಡಿಟೀವಿ ಜತೆ ಮಾತನಾಡಿದ ಸಚಿವರು, ‘ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದೆ. ಆ ದುರಂತ ವಿಧ್ವಂಸ ಕೃತ್ಯ ಆಗಿರಬಹುದೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ವಿಮಾನದ ಎರಡೂ ಎಂಜಿನ್‌ಗಳು ಒಟ್ಟಿಗೆ ಹಾಳಾದ ಘಟನೆ ಎಂದೂ ನಡೆದಿಲ್ಲ’ ಎಂದು ಹೇಳಿದ್ದಾರೆ. ಈಗಾಗಲೇ ಸಿಸಿಟೀವಿ ದೃಶ್ಯಗಳನ್ನು ಪರಿಶೀಲಿಸಲಾಗಿದ್ದು, ವಿಮಾನದ ಬ್ಲ್ಯಾಕ್ ಬಾಕ್ಸ್‌ನ ತನಿಖೆ ನಡೆಯಲಿದೆ’ ಎಂದು ಮೊಹೋಲ್ ಮಾಹಿತಿ ನೀಡಿದ್ದಾರೆ.ಘಟನೆ ನಡೆದ ಮರುದಿನವೇ ಹಲವು ಕ್ಷೇತ್ರಗಳ ತಜ್ಞರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. ಕಳೆದ ವಾರ, ಕಾಕ್‌ಪಿಟ್ ಧ್ವನಿ ರೆಕಾರ್ಡರ್, ಫ್ಲೈಟ್ ಡೇಟಾ ರೆಕಾರ್ಡರ್ ಪತ್ತೆಯಾಗಿದ್ದವು.
ಖಾಲಿ ಹೊಟ್ಟೇಲಿ ಔಷಧಿ ಸೇವಿಸಿದ್ದೇ ನಟಿ ಶೆಫಾಲಿ ಸಾವಿಗೆ ಕಾರಣ?
ಮುಂಬೈ: ಕಾಂಟಾ ಲಗಾ ಹಾಗೂ ಬೋರ್ಡು ಇರದ ಬಸ್ಸನು ಖ್ಯಾತಿಯ ನೃತ್ಯದ ನಟಿ ಶೆಫಾಲಿ ಜರಿವಾಲಾ ಹಠಾತ್ ಸಾವಿಗೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ಅವರು ಖಾಲಿ ಹೊಟ್ಟೆಯಲ್ಲಿ ಔಷಧಿ ಸೇವಿಸಿದ್ದು, ಚುಚ್ಚುಮದ್ದು ಚುಚ್ಚಿಸಿಕೊಂಡಿದ್ದೇ ಕಾರಣವಾಗಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.ನಟಿ ತರುಣಿಯಂತೆ ಕಾಣುವುದಕ್ಕಾಗಿ ನಿಯಮಿತವಾಗಿ ಔಷಧಿಯನ್ನು ಸೇವಿಸುತ್ತಿದ್ದರು. ಅವರು ಸಾಯುವ ದಿನ ಪೂಜೆಯಿದ್ದ ಕಾರಣಕ್ಕೆ ಉಪವಾಸವಿದ್ದರು.
ಹೀಗಾಗಿ ಅವರು ಖಾಲಿ ಹೊಟ್ಟೆಯಲ್ಲಿಯೇ ಮಾತ್ರೆಗಳನ್ನು ಸೇವಿಸಿದ್ದಾರೆ. ಜೊತೆಗೆ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಸಂಭವಿಸಿ ಸಾವು ಸಂಭವಿಸಿದೆ ಎನ್ನಲಾಗಿದೆ.ವೈದ್ಯರ ವಿಶ್ಲೇಷಣೆಯ ಪ್ರಕಾರ. ಖಾಲಿ ಹೊಟ್ಟೆಯಲ್ಲಿ ಔಷಧಗಳ ಸೇವನೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಔಷಧಿ, ಸ್ಟಿರಾಯಿಡ್‌ಗಳನ್ನು ನೀವು ಊಟ ಸೇವನೆ ಮಾಡದೆ ಸೇವಿಸುವುದರಿಂದ ಅದರಿಂದ ನಿಮ್ಮ ಹೊಟ್ಟೆಯ ಒಳಪದರವು ದುರ್ಬಲಗೊಳ್ಳುತ್ತದೆ. ಇದು ಎದೆಯುರಿ, ವಾಕರಿಕೆಯ ಜೊತೆಗೆ ಹಠಾತ್ತನೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಮಾತ್ರವಲ್ಲದೇ ಮೂರ್ಛೆ ಹೋಗುವ ಸಂದರ್ಭವೂ ಇರುತ್ತದೆ. ಕೆಲವೊಮ್ಮೆ ಹೃದಯ ಬಡಿತ ಕುಂಠಿತವಾಗುವ ಸಾಧ್ಯತೆಯಿರುತ್ತದೆ.