ಉತ್ತರಕಾಶಿ: ಉತ್ತರಕಾಶಿ ಸುರಂಗ ಕುಸಿದ ಘಟನೆಗೆ ಸಂಬಂಧಿಸಿದಂತೆ 9ನೇ ದಿನ ಮಹತ್ವದ ಯಶಸ್ಸೊಂದು ಸಿಕ್ಕಿದ್ದು, ಸುರಂಗದೊಳಗೆ 6 ಇಂಚಿನ ದೊಡ್ಡ ‘ಜೀವರಕ್ಷಕ ಪೈಪ್’ ಅಳವಡಿಸುವ ಕೆಲಸ ಯಶಸ್ವಿಯಾಗಿದೆ. ಈ ಮೂಲಕ ಸಿಕ್ಕಿಬಿದ್ದ 41 ಕಾರ್ಮಿಕರಿಗೆ 9 ದಿನದಲ್ಲಿ ಇದೇ ಮೊದಲ ಬಾರಿ ಘನ ಆಹಾರ ಪೂರೈಸಲು ಸಾಧ್ಯವಾಗಲಿದೆ.
ವಿದೇಶಿ ತಜ್ಞ ಭೇಟಿ:
ಸುರಂಗದಲ್ಲಿ ಭೂಕುಸಿತ ಉಂಟಾಗಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ವಿದೇಶಿ ತಜ್ಞ ಅರ್ನಾಲ್ಡ್ ಡಿಕ್ಸ್ ಆಗಮಿಸಿದ್ದಾರೆ. ‘ಕಾರ್ಮಿಕರನ್ನು ಎಷ್ಟು ವೇಗವಾಗಿ ರಕ್ಷಿಸುತ್ತೇವೆ ಎಂಬುದಕ್ಕಿಂತ ಎಷ್ಟು ಸುರಕ್ಷಿತವಾಗಿ ರಕ್ಷಿಸುತ್ತೇವೆ ಎಂಬುದು ಮುಖ್ಯ. ಬೆಟ್ಟದ ಮೇಲಿನಿಂದ ಕೊರೆಯುವ ಮೂಲಕ ಅವರ ರಕ್ಷಣಾ ಕಾರ್ಯ ಆರಂಭಿಸಲು ಸದ್ಯಕ್ಕೆ ಯೋಜಿಸಲಾಗಿದೆ’ ಎಂದಿದ್ದಾರೆಇದರ ನಡುವೆ, ಸುರಂಗದಲ್ಲಿ ರಂಧ್ರ ಕೊರೆವ ಇನ್ನೊಂದು ಯಂತ್ರವನ್ನು ತರಿಸಿಕೊಳ್ಳಲಾಗುತ್ತಿದೆ. ಆದರೆ ಅದು ತುಂಬಾ ಭಾರ ಇರುವ ಕಾರಣ ವಿಮಾನದಲ್ಲಿ ತರಲು ಆಗುತ್ತಿಲ್ಲ. ರೈಲಿನಲ್ಲಿ ತರಲಾಗುತ್ತಿದೆ. ರೈಲು ನಿಲ್ದಾಣದಿಂದ ಘಟನಾ ಸ್ಥಳಕ್ಕೆ ಅದನ್ನು ತರಲು ಗುಡ್ಡ ಅಗೆದು ಅಗಲವಾದ ರಸ್ತೆ ನಿರ್ಮಿಸಲಾಗುತ್ತಿದೆ.
ಈ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸುರಂಗದಡಿ ಸಿಲುಕಿರುವ 41 ಕಾರ್ಮಿಕರ ಕುಟುಂಬದ ವಸತಿ, ಆಹಾರ ಮತ್ತು ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದಾರೆ.