ನವದೆಹಲಿ : ದೇಶದಲ್ಲಿ ಬರೋಬ್ಬರಿ 15 ವರ್ಷಗಳ ನಂತರ ನಡೆಯಲಿರುವ ಜನಗಣತಿಯ ಜತೆ ಜಾತಿಗಣತಿಯನ್ನೂ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಹಾಗೂ ಕರ್ನಾಟಕ ಸೇರಿ ಕೆಲ ರಾಜ್ಯಗಳು ಜಾತಿಗಣತಿ ನಡೆಸಲು ಹೊರಟಿರುವ ಹೊತ್ತಿನಲ್ಲಿ, ‘ಈ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಜಾತಿಗಣತಿ ಮಾಡದೇ ಇದ್ದದ್ದು ಕಾಂಗ್ರೆಸ್ ಪಕ್ಷದ ತಪ್ಪಲ್ಲ. ಅದು ನನ್ನ ತಪ್ಪು. ಅದನ್ನು ಈಗ ಸರಿಪಡಿಸಿಕೊಂಡು ಗಣತಿ ಮಾಡುತ್ತಿದ್ದೇವೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇತರೆ ಹಿಂದುಳಿದ ವರ್ಗಗಳ ‘ಭಾಗೀದಾರಿ ನ್ಯಾಯ ಸಮ್ಮೇಳನ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ತೆಲಂಗಾಣದಲ್ಲಿ ನಡೆದ ಜಾತಿಗಣತಿಯು ರಾಜಕೀಯ ಭೂಕಂಪವಾಗಿದ್ದು, ದೇಶದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಲಿದೆ. ನಾವು ಕೂಡ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಜಾತಿಗಣತಿ ನಡೆಸುತ್ತೇವೆ’ ಎಂದರು.
ಒಬಿಸಿ ಪರ ಕೆಲಸ ಮಾಡಿಲ್ಲ:
ಒಬಿಸಿ ಕಾರ್ಯಕ್ರಮವಾಗಿದ್ದರಿಂದ ಆ ಸಮುದಾಯದ ಬಗ್ಗೆ ಮಾತನಾಡುತ್ತಾ, ‘2004ರಲ್ಲಿ ರಾಜಕೀಯ ಪ್ರವೇಶಿಸಿದ ನಾನು, ಈ 21 ವರ್ಷಗಳಲ್ಲಿ, ಒಬಿಸಿಗಳ ಹಿತ ಕಾಪಾಡದೆ ಇನ್ನೊಂದು ತಪ್ಪು ಮಾಡಿದ್ದೇನೆ. ದಲಿತರು, ಬುಡಕಟ್ಟು ಜನಾಂಗದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ವಿಷಯದಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ. ಆದರೆ ಒಬಿಸಿ ವಿಭಾಗವನ್ನು ರಕ್ಷಿಸಬೇಕಾದ ರೀತಿಯಲ್ಲಿ ರಕ್ಷಿಸಲಿಲ್ಲ. ನಿಮ್ಮ ಸಮುದಾಯದ ಇತಿಹಾಸ, ಸಮಸ್ಯೆಗಳ ಬಗ್ಗೆ ಗೊತ್ತಿದ್ದರೆ ನಾನು ಜಾತಿಗಣತಿ ಮಾಡಿಸುತ್ತಿದ್ದೆ. ಇದು ಕಾಂಗ್ರೆಸ್‌ನದ್ದಲ್ಲ, ನನ್ನ ಸಮಸ್ಯೆ’ ಎಂದು ರಾಹುಲ್ ಹೇಳಿದರು.
ಇದೇ ವೇಳೆ, ‘ಒಬಿಸಿ ಯುವಕರಿಗೆ ತಮ್ಮ ಸಾಮರ್ಥ್ಯ ಏನೆಂದೇ ತಿಳಿದಿಲ್ಲ. ನಿಮಗೆ ಅದರ ಅರಿವಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತದೆ’ ಎಂದರು.
ಮೋದಿಯಲ್ಲಿ ಏನೂ ಹುರುಳಿಲ್ಲ, ಎಲ್ಲಾ ತೋರಿಕೆ: ರಾಹುಲ್ ಟೀಕೆ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಏನೂ ಹುರುಳಿಲ್ಲ. ಎಲ್ಲಾ ಬರಿ ತೋರಿಕೆಯಷ್ಟೇ (ಶೋ ಆಫ್)’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.ಒಬಿಸಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್, ‘ರಾಜಕಾರಣದಲ್ಲಿ ದೊಡ್ಡ ಸಮಸ್ಯೆಯೇನು ಗೊತ್ತೇ? ಅದು ಮೋದಿಯಲ್ಲ. ಅವರಿಂದ ಏನೂ ತೊಂದರೆಯಿಲ್ಲ. ಇದು ಮೊದಲು ನನಗೆ ಗೊತ್ತಿರಲಿಲ್ಲ. ಇತ್ತೀಚೆಗೆ 2-3 ಬಾರಿ ಭೇಟಿಯಾದ ಮೇಲೆ ನನಗೆಲ್ಲಾ ತಿಳಿಯಿತು.
ಮಾಧ್ಯಮದವರೇ ಅವರಿಗೆ ಇಲ್ಲದ ಪ್ರಾಮುಖ್ಯತೆ ನೀಡಿ ಬಲೂನಿನಂತೆ ಉಬ್ಬಿಸುತ್ತಿದ್ದಾರೆ. ನೀವು ಯಾರೂ ಅವರನ್ನು ಭೇಟಿಯಾಗಿಲ್ಲ. ಆದರೆ ನಾನು ಆಗಿದ್ದೇನೆ’ ಎಂದರು.