4 ತಿಂಗಳ ಮೊಮ್ಮಗನಿಗೆ ₹240 ಕೋಟಿ ಷೇರು ಕಾಣಿಕೆ ನೀಡಿದ ಇನ್ಫಿ ಮೂರ್ತಿ!

KannadaprabhaNewsNetwork | Updated : Mar 19 2024, 09:12 AM IST

ಸಾರಾಂಶ

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹ 240 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರು ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರ ರೋಹನ್ ಮೂರ್ತಿಗೆ ₹ 240 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ಫೋಸಿಸ್‌ ಷೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಈ ಪ್ರಕಾರ ಏಕಾಗ್ರ 15 ಲಕ್ಷ ಷೇರುಗಳನ್ನು ಇನ್ಫಿಯಲ್ಲಿ ಹೊಂದಿದ್ದಾನೆ. 

ಇದು ಒಟ್ಟಾರೆ ಇನ್ಫಿ ಷೇರಿನ ಶೇ.0.04ರಷ್ಟಾಗಿದೆ.ಏಕಾಗ್ರ ಮೂರ್ತಿಯು ನಾರಾಯಣ ಮೂರ್ತಿ-ಸುಧಾ ಮೂರ್ತಿ ದಂಪತಿಯ ಮಗ ರೋಹನ್ ಮೂರ್ತಿ ಮತ್ತು ಸೊಸೆ ಅಪರ್ಣಾ ಕೃಷ್ಣನ್ ದಂಪತಿಗೆ ಜನಿಸಿದ ಮಗು. 

ಆತ ಇನ್ಫಿ ಮೂರ್ತಿ ಅವರ 3ನೇ ಮೊಮ್ಮಗ. ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಮತ್ತು ಅಳಿಯ  ಬ್ರಿಟನ್‌ ಪ್ರಧಾನಿ ರಿಷಿ ಸುನಕ್ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಮಹಾಭಾರತದಲ್ಲಿನ ಅರ್ಜುನ್ ಪಾತ್ರವು ‘ಏಕಾಗ್ರ’ ಹೆಸರನ್ನು ಪ್ರೇರೇಪಿಸಿದೆ. ಸಂಸ್ಕೃತ ಪದ ‘ಏಕಾಗ್ರ’ ಎಂದರೆ ಅಚಲವಾದ ಗಮನ ಅಥವಾ ಏಕಾಗ್ರತೆ ಎಂದರ್ಥ.

1981 ರಲ್ಲಿ ಕೇವಲ 10 ಸಾವಿರ ರು. ಸಾಧಾರಣ ಹೂಡಿಕೆಯೊಂದಿಗೆ ಪ್ರಾರಂಭವಾದ ಇನ್ಫೋಸಿಸ್ ನಂತರ ಭಾರತದ 2 ನೇ ಅತಿದೊಡ್ಡ ಟೆಕ್ ಕಂಪನಿಯಾಗಿ ಬೆಳೆದಿದೆ.

Share this article