ಏನೂ ಮುಚ್ಚಿಡದೆ ಬಾಂಡ್‌ನ ಎಲ್ಲ ವಿವರ ಕೊಡಿ: ಸುಪ್ರೀಂ

KannadaprabhaNewsNetwork |  
Published : Mar 19, 2024, 12:46 AM ISTUpdated : Mar 19, 2024, 08:06 AM IST
ಚುನಾವಣಾ ಬಾಂಡ್‌ | Kannada Prabha

ಸಾರಾಂಶ

ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಆಯ್ದ ಮಾಹಿತಿಯನ್ನಷ್ಟೇ ನೀಡುವುದನ್ನು ನಿಲ್ಲಿಸಿ, ಸಂಪೂರ್ಣ ವಿವರಗಳನ್ನು ಮಾ.21ರೊಳಗೆ ಬಹಿರಂಗಪಡಿಸುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ)ಗೆ ಸುಪ್ರೀಂಕೋರ್ಟ್‌ ಸೋಮವಾರ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಪಿಟಿಐ ನವದೆಹಲಿ

ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಆಯ್ದ ಮಾಹಿತಿಯನ್ನಷ್ಟೇ ನೀಡುವುದನ್ನು ನಿಲ್ಲಿಸಿ, ಸಂಪೂರ್ಣ ವಿವರಗಳನ್ನು ಮಾ.21ರೊಳಗೆ ಬಹಿರಂಗಪಡಿಸುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ)ಗೆ ಸುಪ್ರೀಂಕೋರ್ಟ್‌ ಸೋಮವಾರ ಕಟ್ಟುನಿಟ್ಟಿನ ತಾಕೀತು ಮಾಡಿದೆ.

ಬಾಂಡ್‌ ಖರೀದಿದಾರರು ಹಾಗೂ ಅದನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ನಂಟನ್ನು ಬಹಿರಂಗಪಡಿಸುವ ವಿಶಿಷ್ಟ ಬಾಂಡ್‌ ನಂಬರ್‌ಗಳನ್ನು ಕೂಡ ಸಮಗ್ರ ಮಾಹಿತಿ ಹೊಂದಿರಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ನಿರ್ದೇಶನ ನೀಡಿದೆ.

ಚುನಾವಣೆ ಬಾಂಡ್‌ಗಳಿಗೆ ಸಂಬಂಧಿಸಿದಂತೆ ತಾನು ಹೊಂದಿರುವ ಎಲ್ಲ ಮಾಹಿತಿಯನ್ನೂ ಬಹಿರಂಗಪಡಿಸಲಾಗಿದೆ, ಇನ್ನು ಯಾವುದೇ ಮಾಹಿತಿಯನ್ನೂ ತಾನು ಇಟ್ಟುಕೊಂಡಿಲ್ಲ ಎಂಬ ಪ್ರಮಾಣಪತ್ರವನ್ನು ಮಾ.21ರ ಗುರುವಾರ ಸಂಜೆ 5ರೊಳಗೆ ಎಸ್‌ಬಿಐ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಕೆ ಮಾಡಬೇಕು. 

ಎಸ್‌ಬಿಐ ನೀಡುವ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ತಾಕೀತು ಮಾಡಿದೆ.

ಮಾ.13ರಂದು ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ನ ಪಂಚ ಸದಸ್ಯ ಸಾಂವಿಧಾನಿಕ ಪೀಠ, ಚುನಾವಣಾ ಬಾಂಡ್‌ ವ್ಯವಸ್ಥೆಯನ್ನು ಅಸಾಂವಿಧಾನಿಕ ಎಂದು ಘೋಷಣೆ ಮಾಡಿತ್ತು. 

ಅಲ್ಲದೆ, ಚುನಾವಣೆ ಬಾಂಡ್‌ ನೀಡಿದವರು ಹಾಗೂ ಅದನ್ನು ಪಡೆದವರ ವಿವರಗಳನ್ನು ಮಾ.13ರೊಳಗೆ ಚುನಾವಣಾ ಆಯೋಗ ಬಹಿರಂಗಪಡಿಸಬೇಕು ಎಂದು ನಿರ್ದೇಶಿಸಿತ್ತು.

ಈ ಬಾಂಡ್‌ಗಳನ್ನು ಎಸ್‌ಬಿಐ ಮೂಲಕ ವಿತರಣೆ ಮಾಡಲಾಗಿತ್ತು. ಹೀಗಾಗಿ ಮಾ.11ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಎಸ್‌ಬಿಐ, ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ವಿವರಗಳನ್ನು ಸಲ್ಲಿಕೆ ಮಾಡಲು ಜೂ.30ರವರೆಗೂ ಕಾಲಾವಕಾಶ ನೀಡಬೇಕು ಎಂದು ಕೋರಿತ್ತು.

ಅದನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು. ತನ್ನ ಆದೇಶವನ್ನು ಏಕೆ ಪಾಲಿಸಿಲ್ಲ ಎಂದು ಪ್ರಶ್ನೆ ಮಾಡಿತ್ತು.ಈ ನಡುವೆ, ಅಪೂರ್ಣ ಮಾಹಿತಿಯನ್ನು ಎಸ್‌ಬಿಐ ಒದಗಿಸಿದ್ದಕ್ಕೆ ಶುಕ್ರವಾರ ಕೆಂಡಾಮಂಡಲಗೊಂಡಿದ್ದ ಸುಪ್ರೀಂಕೋರ್ಟ್‌, ಬ್ಯಾಂಕಿಗೆ ಛೀಮಾರಿ ಹಾಕಿತ್ತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ