ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹೊರತಾಗಿ ಇನ್ಯಾವ ರಾಜಕಾರಣಿಗೂ ನಟರ ಜನಪ್ರಿಯತೆ ಬರಲು ಸಾಧ್ಯವಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಹೇಳಿದ್ದಾರೆ. ಇಂಡಿಯಾ ಟಿವಿ ಆಯೋಜಿಸಿದ್ದ ‘ಅವಳು’ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾನು ವಿರೋಧಪಕ್ಷಕ್ಕೆ ಸೇರಿದವಳಾದರೂ ಒಂದು ವಿಚಾರವನ್ನು ಒಪ್ಪುತ್ತೇನೆ.
ಬಿಜೆಪಿ ನಾಯಕರು, ಅವರು ನಟರಾಗಲಿ ಅಲ್ಲದಿರಲಿ, ಕೇವಲ ನರೇಂದ್ರ ಮೋದಿಯವರ ಹೆಸರಿನಿಂದ ಗೆಲುವು ಸಾಧಿಸಿದ್ದಾರೆ. ತಮ್ಮ ಸ್ವಂತ ರಾಜಕೀಯ ಸಾಮರ್ಥ್ಯದಿಂದಲ್ಲ. ನರೇಂದ್ರ ಮೋದಿಯವರ ಹೊರತಾಗಿ ಯಾವ ನಾಯಕನಿಗೂ ನಟನ ಜನಪ್ರಿಯತೆ ಬರಲು ಸಾಧ್ಯವಿಲ್ಲ’ ಎಂದರು.
ಕಾವೇರಿ ಸೇರಿ ದಕ್ಷಿಣದ ನದಿಗಳ ಜತೆ ಉತ್ತರದ ನದಿ ಜೋಡಿಸಿ: ಮನವಿ
ನವದೆಹಲಿ: ‘ದೇಶದ ಉತ್ತರ ಮತ್ತು ದಕ್ಷಿಣದ ನದಿ ಜೋಡಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ಸರಕು ಸಾಗಾಟ ಮತ್ತು ಆರ್ಥಿಕತೆಗೂ ನೆರವಾಗಲಿದೆ’ ಎಂದು ಡಿಎಂಕೆ ಸಂಸದ ಟಿ. ಆರ್.ಬಾಲು ಸಂಸತ್‌ನಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಸಂಸತ್‌ನಲ್ಲಿ ಈ ಬಗ್ಗೆ ಮಾತನಾಡಿದ ಅವರು‘ 2014ರ ಚುನಾವಣೆ ಸಮಯದಲ್ಲಿ ಮೋದಿ ಹೆಚ್ಚುವರಿ ನೀರಿರುವ ಹಿಮಾಲಯನ್ ನದಿಗಳನ್ನು ನೀರಿನ ಕೊರತೆಯಿರುವ ಪರ್ಯಾಯ ದ್ವೀಪಗಳೊಂದಿಗೆ ಸಂಪರ್ಕಿಸುವ ಬಗ್ಗೆ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ಮಹಾನದಿ, ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿಯಂತಹ ಪ್ರಮುಖ ಪರ್ಯಾಯ ದ್ವೀಪ ನದಿ ಜೋಡಿಸುವ ಅಗತ್ಯವಿದೆ. ಕೇಂದ್ರ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಉಷ್ಣಮಾರುತವನ್ನೂ ವಿಪತ್ತು ಪಟ್ಟಿಗೆ ಸೇರಿಸಲು ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು
ನವದೆಹಲಿ: ಉಷ್ಣಮಾರುತದಂಥ ಹೊಸ ಮತ್ತು ಉದಯೋನ್ಮುಖ ವಿಪತ್ತುಗಳನ್ನು ವಿಪತ್ತು ನಿರ್ವಹಣಾ ಯೋಜನೆಗಳಲ್ಲಿ ಸೇರಿಸುವಂತೆ ಸಂಸದೀಯ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. ಬಿಜೆಪಿಯ ರಾಜ್ಯಸಭಾ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವದ 31 ಸದಸ್ಯರ ಸಮಿತಿಯು ಹವಾಮಾನ ಬದಲಾವಣೆ ಮತ್ತು ಹೆಚ್ಚುತ್ತಿರುವ ವಿಪತ್ತುಗಳನ್ನು ಪರಿಗಣಿಸಿ ದೀರ್ಘಕಾಲೀನ ವಿಪತ್ತು ಸನ್ನದ್ಧತೆಯ ಬಗ್ಗೆ ಅಧ್ಯಯನ ಮಾಡುವಂತೆ ಸಚಿವಾಲಯಕ್ಕೆ ಮನವಿ ಮಾಡಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 2013ರಿಂದ 10 ವರ್ಷಗಳ ಅವಧಿಯಲ್ಲಿ ತೀವ್ರ ಬಿಸಿಲಿನಿಂದ ಭಾರತದಲ್ಲಿ 10,635 ಜನ ಬಲಿಯಾಗಿದ್ದಾರೆ. ಈ ಬಾರಿಯ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ ಕಂಡುಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಚಿನ್ನದ ಬೆಲೆ ಮತ್ತೆ ₹700 ಏರಿಕೆ, 10 ಗ್ರಾಂಗೆ ದಾಖಲೆಯ ₹91,9050 ರು.
ನವದೆಹಲಿ: ಚಿನ್ನದ ಬೆಲೆಯ ಏರಿಕೆ ಪರ್ವ ಬುಧವಾರವೂ ಮುಂದುವರಿದಿದ್ದು, 10 ಗ್ರಾಂ ಚಿನ್ನಕ್ಕೆ ಮತ್ತೆ 700 ರು. ಹೆಚ್ಚಳವಾಗಿದ್ದು ದಾಖಲೆಯ 91,950 ರು.ಗೆ ತಲುಪಿದೆ.ದೇಶದದಲ್ಲಿ ಮದುವೆ ಋತು ಸಮೀಪಿಸುತ್ತಿರುವುದರಿಂದ ಗ್ರಾಹಕರು ಆಭರಣ ಕೊಳ್ಳುವುದಕ್ಕೆ ಮುಗಿ ಬೀಳುತ್ತಿರುವುದು ದರ ಏರಿಕೆಗೆ ಕಾರಣ ಎಂದು ಅಖಿಲ ಭಾರತೀಯ ಸರಫಾ ಅಸೋಸಿಯೇಷನ್ ಹೇಳಿದೆ. ಇದರ ಜೊತೆಗೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಳವಳದಿಂದಾಗಿ ಜನರು ಚಿನ್ನದ ಮೊರೆ ಹೋಗುತ್ತಿರುವುದು ದರ ಏರಿಕೆಗೆ ಕಾರಣ.
ಚಿನ್ನದ ದರ ಮಂಗಳವಾರ 500 ರು. ಏರಿಕೆಯಾಗಿ ದಾಖಲೆಯ 91,250 ರು.ಕ್ಕೆ ತಲುಪಿತ್ತು. ಬುಧವಾರ ಮತ್ತೆ 700 ರು. ಏರಿಕೆಯಾಗಿದೆ. ಇತ್ತ ಬೆಳ್ಳಿ ದರದಲ್ಲಿಯೂ ಹೆಚ್ಚಳವಾಗಿದ್ದು, 1 ಸಾವಿರ ರು ಏರಿಕೆಯೊಂದಿಗೆ ಕೇಜಿಗೆ ದಾಖಲೆಯ 1,03,500 ರು.ಗೆ ತಲುಪಿದೆ.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಇಂಫಾಲ್: ಮಣಿಪುರದಲ್ಲಿ ಮತ್ತೆ ಜನಾಂಗೀಯ ಹಿಂಸಾಚಾರ ಭುಗುಲೆದ್ದಿದ್ದು, ಚೂರ್‌ಚಂದಾಪುರ ಜಿಲ್ಲೆಯಲ್ಲಿ ಝೋಮಿ ಮತ್ತು ಹಮರ್ ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಝೋಮಿ ಸಂಘಟನೆಯ ಧ್ವಜವನ್ನು ಇಳಿಸಲು ಹಮರ್ ಸಮುದಾಯದ ಗುಂಪು ಯತ್ನಿಸಿರುವುದೇ ಸಂಘರ್ಷಕ್ಕೆ ಕಾರಣವಾಗಿದೆ. ‘ಗುಂಪಿನಲ್ಲಿದ್ದ ಕೆಲವರು ತಮ್ಮ ಎದುರಾಳಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಕಲ್ಲುತೂರಾಟ ನಡೆಸಿ ಆಸ್ತಿಗಳನ್ನು ಧ್ವಂಸ ಮಾಡಿದ್ದಾರೆ. ತಕ್ಷಣವೇ ಭದ್ರತಾ ಪಡೆಗಳು ಅಶ್ರುವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಗುಂಪನ್ನು ಚದುರಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳು ಗಸ್ತು ಪರೇಡ್ ನಡೆಸಿ, ಪರಿಸ್ಥಿತಿಯ ಮೇಲೆ ಕಚ್ಚೆಚ್ಚರ ವಹಿಸಿವೆ. ಇಡೀ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಝೋಮಿ ವಿದ್ಯಾರ್ಥಿ ಒಕ್ಕೂಟವು ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿದೆ.