;Resize=(412,232))
ನವದೆಹಲಿ : ಇರಾನ್-ಅಮೆರಿಕ ನಡುವಿನ ಮಧ್ಯಪ್ರಾಚ್ಯ ಕದನದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ‘ಹೋರ್ಮುಜ್ ಜಲಸಂಧಿಯನ್ನು ವಿಶ್ವಕ್ಕೆ ಮುಕ್ತವಾಗಿಡಲು ಶ್ರಮಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಅಲ್ಲದೆ, ‘ಪಶ್ಚಿಮ ಏಷ್ಯಾದಲ್ಲಿ ಆದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಬೆಂಬಲ ನೀಡುತ್ತದೆ’ ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ‘ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ಈ ವೇಳೆ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಉಪಯುಕ್ತ ಅಭಿಪ್ರಾಯ ವಿನಿಮಯವಾಯಿತು. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲಿಸುತ್ತದೆ. ಹೋರ್ಮುಜ್ ಜಲಸಂಧಿಯು ಇಡೀ ಜಗತ್ತಿಗೇ ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳ ಎಂದು ಖಚಿತಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ಯತ್ನಗಳ ಬಗ್ಗೆ ಸಂಪರ್ಕದಲ್ಲಿರಲು ನಾವು ಒಪ್ಪಿಕೊಂಡಿದ್ದೇವೆ’ ಎಂದಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಟ್ವೀಟ್ ಮಾಡಿ, ‘ನಾಯಕರು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು. ಇದರಲ್ಲಿ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವವೂ ಸೇರಿದೆ’ ಎಂದಿದ್ದಾರೆ.