ರಾಮ ಕಾಲ್ಪನಿಕ ಎಂದ ಕಾಂಗ್ರೆಸ್ಸಿಂದ ‘ಜೈ ಸಿಯಾ ರಾಂ’ ಜಪ: ಮೋದಿ

KannadaprabhaNewsNetwork | Updated : Feb 17 2024, 12:11 PM IST

ಸಾರಾಂಶ

ಆಬ್‌ಕಿ ಬಾರ್‌ ಎನ್‌ಡಿಎ ಸರ್ಕಾರ್‌, 400 ಪಾರ್‌ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಕ್ಕಿಂತ ಕಾಂಗ್ರೆಸ್‌ಗೆ ಕುಟುಂಬ ಹಿತಾಸಕ್ತಿಯೇ ಹೆಚ್ಚು, ದೊಡ್ಡ ಹಗರಣವೇ ಇತಿಹಾಸದಲ್ಲಿ ಕಾಂಗ್ರೆಸ್ ಸಾಧನೆ ಎಂದು ಕಿಡಿ ಕಾರಿದ್ದಾರೆ.

ರೇವಾಡಿ (ಹರ್ಯಾಣ): ಭಗವಾನ್‌ ಶ್ರೀರಾಮ ಕೇವಲ ಕಾಲ್ಪನಿಕ ಎನ್ನುತ್ತಿದ್ದವರು ಹಾಗೂ ರಾಮ ಮಂದಿರ ನಿರ್ಮಾಣವನ್ನು ಬಯಸದವರು ಈಗ ‘ಜೈ ಸಿಯಾ ರಾಮ್‌’ ಎಂದು ಜಪಿಸುತ್ತಿದ್ದಾರೆ. ಎಂದು ಕಾಂಗ್ರೆಸ್‌ ವಿರುದ್ಧ ಮೋದಿ ವಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಹರ್ಯಾಣದ ರೇವಾರಿಯಲ್ಲಿ ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆ ಹಾಗೂ ಇತರ ಯೋಜನೆಗಳನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಭಾರತ ಇಂದು ವಿಶ್ವದಲ್ಲಿ ಹೊಸ ಎತ್ತರವನ್ನು ತಲುಪಿದೆ ಮತ್ತು ಜನರ ಆಶೀರ್ವಾದದಿಂದ ಇದು ಸಾಧ್ಯವಾಗಿದೆ. 

ಕೇವಲ ಮೋದಿಗೆ ಮಾತ್ರವಲ್ಲ, ವಿಶ್ವದ ಪ್ರತಿಯೊಂದು ಮೂಲೆಯಲ್ಲೂ ಭಾರತ ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಗೌರವವಿದೆ’ ಎಂದರು.

ಇದೇ ವೇಳೆ ವಿಪಕ್ಷ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ ಮೋದಿ ‘ಪ್ರಧಾನಿ ಅಭ್ಯರ್ಥಿಯಾಗಿ ನಾನು ಕೆಲವು ಭರವಸೆಗಳನ್ನು ಈಡೇರಿಸಿದ್ದೇನೆ. ದೇಶವು ಅಯೋಧ್ಯೆಯಲ್ಲಿ ಭವ್ಯ ರಾಮನ ಮಂದಿರ ನಿರ್ಮಾಣ ಬಯಸಿತ್ತು. 

ಭಗವಾನ್‌ ರಾಮನನ್ನು ಕಾಲ್ಪನಿಕ ಎಂದು ಕರೆಯುತ್ತಿದ್ದವರು ಮತ್ತು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವನ್ನು ಬಯಸದವರು ಈಗ ‘ಜೈ ಸಿಯಾ ರಾಮ್’ ಎಂದು ಘೋಷಣೆ ಕೂಗುತ್ತಿದ್ದಾರೆ. 

ದೇಶ ಮತ್ತು ದೆಶದ ಜನರಿಗಿಂತ ಒಂದು ಕುಟುಂಬದ ಹಿತಾಸಕ್ತಿಯನ್ನೇ ಮೇಲಿರಿಸುವುದು ಕಾಂಗ್ರೆಸ್‌ನ ದಾಖಲೆಯಾಗಿದೆ. ಇತಿಹಾಸದಲ್ಲಿ ದೊಡ್ಡ ಹಗರಣಗಳೇ ಕಾಂಗ್ರೆಸ್‌ನ ದಾಖಲೆಯಾಗಿವೆ’ ಎಂದು ಕಿಡಿಕಾರಿದರು. 

ಅಲ್ಲದೇ 2014ರಲ್ಲಿ ಬಿಜೆಪಿಯು ನನ್ನನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಬಳಿಕ ನನ್ನ ಮೊದಲ ಕಾರ್ಯಕ್ರಮ ಹರ್ಯಾಣದ ರೇವಾಡಿಯಲ್ಲಿ ನಡೆದಿತ್ತು. 

ಇದೀಗ ಮತ್ತೆ ರೇವಾಡಿಗೆ ಬಂದಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಜನರು ಹೇಳುತ್ತಿದ್ದಾರೆ. 

ಜನರ ಆಶೀರ್ವಾದದೊಂದಿಗೆ ‘ಈ ಬಾರಿ ಎನ್‌ಡಿಎ ಸರ್ಕಾರ 400 ಸ್ಥಾನ’ (ಆಬ್‌ಕಿ ಬಾರ್‌ ಎನ್‌ಡಿಎ ಸರ್ಕಾರ್‌ 400 ಪಾರ್) ಎಂದರು. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಲು ದಶಕಗಳಿಂದ ಕಾಂಗ್ರೆಸ್ ಅಡೆತಡೆ ಸೃಷ್ಟಿಸಿತ್ತು. 

ನಾನು ಗ್ಯಾರಂಟಿ ನೀಡಿದ್ದೆ. ಅದರಂತೆ 370ನೇ ವಿಧಿಯನ್ನು ರದ್ದುಗೊಳಿಸಿ ಅದನ್ನು ಈಡೇರಿಸಿದ್ದೇನೆ. ಜನರ ಆಶೀರ್ವಾದದಿಂದಾಗಿ ಭಾರತವು ಕಳೆದ ವರ್ಷ ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಯಿತು. 

ನಮ್ಮ ಸರ್ಕಾರದ 10 ವರ್ಷಗಳಲ್ಲಿ, ಭಾರತವು ಹನ್ನೊಂದನೇ ಸ್ಥಾನದಿಂದ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಮುಂಬರುವ ವರ್ಷಗಳಲ್ಲಿ ನನ್ನ ಮೂರನೇ ಅವಧಿಯಲ್ಲಿ ಭಾರತವನ್ನು ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡಲು ನನಗೆ ನಿಮ್ಮ ಆಶೀರ್ವಾದ ಬೇಕು ಎಂದರು.

Share this article