ವೊಯೋಜರ್‌ ನೌಕೆ ಮೂಲಕ2600 ಕಿ.ಮೀ ದಾಟಿದ ಕನ್ನಡ- 1 ಜ್ಯೋತಿರ್ದಿನ ದಾಟಿದ ನಾಸಾದ ನೌಕೆ- ನೌಕೆಯಲ್ಲಿದೆ ಕನ್ನಡದ ನಮಸ್ಕಾರ ಧ್ವನಿ

KannadaprabhaNewsNetwork |  
Published : Nov 19, 2026, 03:00 AM IST
ನೌಕೆ  | Kannada Prabha

ಸಾರಾಂಶ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ವೊಯೇಜರ್‌ 1’ ಬಾಹ್ಯಾಕಾಶ ನೌಕೆಯು ಬುಧವಾರ ಭೂಮಿಯಿಂದ 1 ಬೆಳಕಿನ ದಿನ (2,600 ಕೋಟಿ ಕಿ.ಮೀ.) ದೂರವನ್ನು ತಲುಪಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

49 ವರ್ಷಗಳ ಪಯಣ

1977ರಲ್ಲಿ ಅಮೆರಿಕದ ನಾಸಾದಿಂದ ವೊಯೇಜರ್‌ 1 ನೌಕೆ ಉಡ್ಡಯನ

49 ವರ್ಷಗಳಲ್ಲಿ 2600 ಕೋಟಿ ಕಿ.ಮೀ ದೂರ ಸಾಗಿ ತಿಹಾಸ ನಿರ್ಮಾಣ

ಈವರೆಗೆ ಯಾವುದೇ ನೌಕೆ ತಲುಪದ ದೂರ ತಲುಪಿದ ಹಿರಿಮೆ ಈ ನೌಕೆಗೆ

ಈ ನೌಕೆಯಲ್ಲಿ ಭಾರತದ 10 ಸೇರಿದಂತೆ ವಿಶ್ವದ 55 ಭಾಷೆಗಳಲ್ಲಿ ಸಂದೇಶ

ಒಂದೊಮ್ಮೆ ಅನ್ಯಗ್ರಹ ಜೀವಿಗಳು ಸಿಕ್ಕರೆ ಅವರಿಗೆಂದು ಈ ಸಂದೇಶ ರವಾನೆ

ವಾಷಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ‘ವೊಯೇಜರ್‌ 1’ ಬಾಹ್ಯಾಕಾಶ ನೌಕೆಯು ಬುಧವಾರ ಭೂಮಿಯಿಂದ 1 ಬೆಳಕಿನ ದಿನ (2,600 ಕೋಟಿ ಕಿ.ಮೀ.) ದೂರವನ್ನು ತಲುಪಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಮಾನವಕುಲದ ಇತಿಹಾಸದಲ್ಲಿ ಯಾವುದೇ ಬಾಹ್ಯಾಕಾಶ ನೌಕೆ ತಲುಪದ ಅತ್ಯಂತ ದೂರದ ತುದಿಯಾಗಿದೆ. ವಿಶೇಷವೆಂದರೆ, ಭೂಮಿಯ ಸಂಸ್ಕೃತಿಯ ಪ್ರತೀಕವಾಗಿ ಈ ನೌಕೆಯು ಕನ್ನಡದ ಶುಭಾಶಯ ಸಂದೇಶವನ್ನೂ ಹೊತ್ತು ಸಾಗಿದ್ದು, ‘ಅಂತರತಾರಾ ಬಾಹ್ಯಾಕಾಶ’ದಲ್ಲೂ ಕನ್ನಡದ ಕಂಪು ಮೊಳಗಿದಂತಾಗಿದೆ.

ಬಾಹ್ಯಾಕಾಶದ ಇತರ ಲೋಕಗಳಿಗೆ ಭೂಮಿಯ ಸಂಸ್ಕೃತಿಯನ್ನು ಪರಿಚಯಿಸಲು ವೊಯೇಜರ್ ನೌಕೆಯಲ್ಲಿ ‘ಗೋಲ್ಡನ್ ರೆಕಾರ್ಡ್’ಎಂಬ ತಾಮ್ರದ ಧ್ವನಿಮುದ್ರಿಕೆಯನ್ನು ಅಳವಡಿಸಲಾಗಿದೆ. ಇದರಲ್ಲಿ ಭಾರತದ 10 ಸೇರಿದಂತೆ ವಿಶ್ವದ ಒಟ್ಟು 55 ಭಾಷೆಗಳ ಶುಭಾಶಯ ಸಂದೇಶಗಳಿವೆ. ಇದರಲ್ಲಿ ಕನ್ನಡವೂ ಸೇರಿದ್ದು, ‘ನಮಸ್ಕಾರ. ಕನ್ನಡ ಭಾಷೆಯನ್ನು ಆಡುವ ಜನರ ಪರವಾಗಿ ಶುಭಾಶಯಗಳು’ ಎಂಬ ಧ್ವನಿಮುದ್ರಿಕೆಯನ್ನು ಅಳವಡಿಸಲಾಗಿದೆ.

ಉಡಾವಣೆ ಮತ್ತು ಉದ್ದೇಶ:

ಸೌರಮಂಡಲದ ಹೊರವಲಯದ ಗ್ರಹಗಳಾದ ಗುರು ಮತ್ತು ಶನಿಯ ಅಧ್ಯಯನಕ್ಕಾಗಿ ನಾಸಾ 1977ರ ಸೆ.5ರಂದು ವೊಯೇಜರ್ 1 ನೌಕೆಯನ್ನು ಉಡಾವಣೆ ಮಾಡಿತ್ತು. ಆ ಗ್ರಹಗಳು ಮತ್ತು ಅವುಗಳ ಉಪಗ್ರಹಗಳ ಕುರಿತು ವೈಜ್ಞಾನಿಕ ಮಾಹಿತಿ ಸಂಗ್ರಹಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿತ್ತು. ನಿಗದಿತ ಗುರಿ ಪೂರೈಸಿದ ಬಳಿಕವೂ ನೌಕೆಯು ಸೌರಮಂಡಲದ ಆಚೆಗಿನ ಅಧ್ಯಯನಕ್ಕಾಗಿ ತನ್ನ ಪ್ರಯಾಣ ಮುಂದುವರಿಸಿತು.

ಪ್ರಸ್ತುತ ಎಲ್ಲಿದೆ?:

2012ರ ಆಗಸ್ಟ್‌ನಲ್ಲಿ ಸೂರ್ಯನ ಪ್ರಭಾವಲಯವನ್ನು ದಾಟಿದ ನೌಕೆ, ನಕ್ಷತ್ರಗಳ ನಡುವಿನ ಅಂತರತಾರಾ ಬಾಹ್ಯಾಕಾಶವನ್ನು (ಇಂಟರ್‌ಸ್ಟೆಲ್ಲಾರ್‌ ಸ್ಪೇಸ್‌) ಪ್ರವೇಶಿಸಿದ ಮೊದಲ ಮಾನವ ನಿರ್ಮಿತ ನೌಕೆಯಾಗಿದೆ. ಸುಮಾರು 49 ವರ್ಷಗಳಿಂದ ಗಂಟೆಗೆ ಅಂದಾಜು 61,155 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಪ್ರಸ್ತುತ ಭೂಮಿಯಿಂದ ಸುಮಾರು 26,000 ಕಿ.ಮೀ.ಗಳ ದೂರದಲ್ಲಿದೆ.

ಬೆಳಕು 24 ಗಂಟೆಗಳಲ್ಲಿ ಕ್ರಮಿಸುವ ದೂರವನ್ನೇ ‘ಒಂದು ಬೆಳಕಿನ ದಿನ’ ಎನ್ನಲಾಗುತ್ತದೆ. ಈ ಅಗಾಧ ದೂರದಿಂದಾಗಿ, ಭೂಮಿಯಿಂದ ಕಳುಹಿಸುವ ರೇಡಿಯೋ ಸಂಕೇತವು ನೌಕೆಯನ್ನು ತಲುಪಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಅಲ್ಲಿಂದ ಮರಳಿ ಪ್ರತಿಕ್ರಿಯೆ ಬರಲು ಮತ್ತೊಂದು ದಿನ ಬೇಕಾಗುತ್ತದೆ. ಅಂದರೆ, ಒಂದು ಸಂದೇಶ ವಿನಿಮಯಕ್ಕೆ ಒಟ್ಟು 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

* 50 ಕೋಟಿ ಜನರ ಕಡುಬಡತನನೀಗಿಸಲು ಮೋದಿ ಸರ್ಕಾರ ಪಣ
ಒಂದೇ ವರ್ಷದಲ್ಲಿ ಮೋಸ್ಟ್ ವಾಂಟೆಡ್ ಉಗ್ರನಾದ!