ನವದೆಹಲಿ: 2024ರ ಲೋಕಸಭಾ ಚುನಾವಣೆಯು ಏ.16ರ ಆಸುಪಾಸಿನಲ್ಲಿ ನಡೆಯಲಿದೆ ಎಂಬ ದಿಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಟಿಪ್ಪಣಿಯೊಂದು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.
ಆದರೆ ಇದು ಕೇವಲ ಉಲ್ಲೇಖದ ಟಿಪ್ಪಣಿ ಮಾತ್ರ. ಅಂತಿಮ ದಿನಾಂಕವಲ್ಲ ಎಂದು ಚುಣಾವಣಾಧಿಕಾರಿಗಳ ಕಚೇರಿ ಸ್ಪಷ್ಟಪಡಿಸಿದೆ.
‘ಭಾರತೀಯ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಏಪ್ರಿಲ್ 16, 2024 ಎಂದು ಚುನಾವಣಾ ದಿನಾಂಕವನ್ನು ನೀಡಿದೆ. ಉಲ್ಲೇಖದ ಉದ್ದೇಶಕ್ಕಾಗಿ ಮತ್ತು ಚುನಾವಣಾ ಸಿದ್ಧತೆಯ ಪ್ರಾರಂಭ ಮತ್ತು ಅಂತಿಮ ದಿನಾಂಕಗಳನ್ನು ಲೆಕ್ಕಹಾಕಲು ಇದನ್ನು ನೀಡಲಾಗಿದೆ’ ಎಂದು ಟಿಪ್ಪಣಿಯಲ್ಲಿದೆ.
ದೆಹಲಿಯಲ್ಲಿರುವ ಎಲ್ಲಾ 11 ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಅಧಿಸೂಚನೆಯನ್ನು ನೀಡಲಾಗಿತ್ತು.ಈ ಟಿಪ್ಪಣಿ ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ‘ಏ.16ರಂದು ಲೋಕಸಭೆ ಚುನಾವಣೆ ನಿಗದಿಯಾಗಿದೆ’ ಎಂದು ದೇಶದೆಲ್ಲೆಡೆ ಗುಲ್ಲು ಹರಡಿತ್ತು.
ಬಳಿಕ ಎಚ್ಚೆತ್ತ ದಿಲ್ಲಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ,‘ಏಪ್ರಿಲ್ 16ರ ದಿನಾಂಕವನ್ನು ಕೇವಲ ‘ಉಲ್ಲೇಖಕ್ಕಾಗಿ ಮಾತ್ರ’ ನೀಡಲಾಗಿದೆ. ಅದು ಅಂತಿಮ ದಿನಾಂಕವಲ್ಲ. ಕೆಲವು ಮಾಧ್ಯಮಗಳು ಇದು ಚುನಾವಣಾ ದಿನಾಂಕವೇ ಎಂಬ ಪ್ರಶ್ನೆ ಕೇಳಿವೆ.
ಆದರೆ ಇದು ಚುನಾವಣಾ ಸಿದ್ಧತೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ನೀಡಿದ ಟಿಪ್ಪಣಿ ಮಾತ್ರ’ ಎಂದು ಸ್ಪಷ್ಟಪಡಿಸಿದೆ.2019ರಲ್ಲಿ ಏ.11ರಿಂದ ಮೇ 19ರವರೆಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆದಿದ್ದವು ಹಾಗೂ ಮೇ 23ಕ್ಕೆ ಫಲಿತಾಂಶ ಪ್ರಕಟವಾಗಿತ್ತು.