ಇಂದು ಬಹುನಿರೀಕ್ಷಿತ ನೀಟ್‌ ಮರುಪರೀಕ್ಷೆ

KannadaprabhaNewsNetwork |  
Published : Jun 21, 2026, 01:45 AM ISTUpdated : Jun 21, 2026, 05:01 AM IST
 NEET UG Re exam NTA Guidelines in karnataka

ಸಾರಾಂಶ

 ನೀಟ್‌-ಯುಜಿ ಮರುಪರೀಕ್ಷೆ ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿದೆ. ದೇಶದ 551 ಹಾಗೂ ವಿದೇಶಗಳ 14 ನಗರಗಳ 5500 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸುಮಾರು 22.79 ಲಕ್ಷಕ್ಕೂ ಅಧಿಕ ವೈದ್ಯಕೀಯ ಆಕಾಂಕ್ಷಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

  ನವದೆಹಲಿ :  ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌-ಯುಜಿ ಮರುಪರೀಕ್ಷೆ ಭಾನುವಾರ ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ ನಡೆಯಲಿದೆ. ದೇಶದ 551 ಹಾಗೂ ವಿದೇಶಗಳ 14 ನಗರಗಳ 5500 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಸುಮಾರು 22.79 ಲಕ್ಷಕ್ಕೂ ಅಧಿಕ ವೈದ್ಯಕೀಯ ಆಕಾಂಕ್ಷಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮೇ 3ರಂದು ನಡೆದಿದ್ದ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆ ವಿವಾದ

ಮೇ 3ರಂದು ನಡೆದಿದ್ದ ಪರೀಕ್ಷೆಯು ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಬಳಿಕ ರದ್ದಾಗಿತ್ತು. ಈ ಪ್ರಕರಣ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಕೇಂದ್ರ ಸರ್ಕಾರಕ್ಕೆ ಭಾರಿ ತಲೆನೋವು ಸೃಷ್ಟಿಸಿತ್ತು. ಈ ವಿಚಾರ ರಾಜಕೀಯ ಹಾಗೂ ಕಾನೂನು ಸಮರಕ್ಕೂ ಕಾರಣವಾಗಿತ್ತು. ಇದಾಗಿ ಸುಮಾರು 7 ವಾರಗಳ ಬಳಿಕ ಮರುಪರೀಕ್ಷೆ ನಡೆಸಲಾಗುತ್ತಿದೆ. ಇದಕ್ಕೆ ಪೂರ್ವತಯಾರಿಯಾಗಿ ಶನಿವಾರ ದೇಶಾದ್ಯಂತ ಅಣಕು ಪರೀಕ್ಷೆ ನಡೆಸಲಾಗಿದೆ. ಈ ಮಧ್ಯೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪರೀಕ್ಷೆಯ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಗಳನ್ನು ನಡೆಸಿದ್ದಾರೆ. 

 ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ನೆರವಾಗುತ್ತಿದ್ದ ಟೆಲಿಗ್ರಾಂ ಆ್ಯಪ್‌ ಮೇಲೆ ಸರ್ಕಾರ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ. ಅಭ್ಯರ್ಥಿಗಳಿಗೆ ನೇರವಾಗಿ ಮಾಹಿತಿ ಒದಗಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಪರಿಶೀಲಿಸಿದ ವಾಟ್ಸಾಪ್‌ ಚಾನೆಲ್ ಪ್ರಾರಂಭಿಸಿದೆ.ಅಭ್ಯರ್ಥಿಗಳಿಗೆ ಮಾರ್ಗಸೂಚಿ: ಪರೀಕ್ಷಾರ್ಥಿಗಳಿಗೆ ಎನ್‌ಟಿಎ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರ ನಡುವೆ ತಮ್ಮ ಪರೀಕ್ಷಾ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ಮಧ್ಯಾಹ್ನ ಸರಿಯಾಗಿ 1.30ಕ್ಕೆ ಪ್ರವೇಶ ದ್ವಾರಗಳು ಮುಚ್ಚುತ್ತವೆ. ನಂತರ ಯಾವುದೇ ಸಂದರ್ಭದಲ್ಲೂ ಅಭ್ಯರ್ಥಿಗಳಿಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ.

ಅಭ್ಯರ್ಥಿಗಳು ಪಾರದರ್ಶಕ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಲು ಅವಕಾಶವಿರುತ್ತದೆ. ಮಧುಮೇಹಿಗಳು ಸಕ್ಕರೆ ಮಾತ್ರೆ, ಬಾಳೆಹಣ್ಣು, ಸೇಬು, ಕಿತ್ತಳೆ ಮುಂತಾದ ಹಣ್ಣುಗಳನ್ನು ತರಬಹುದು.

ಸಾಂಪ್ರದಾಯಿಕ ಅಥವಾ ಧಾರ್ಮಿಕ ಉಡುಪುಗಳನ್ನು ಧರಿಸಿರುವವರು ಹಾಗೂ ಪೂರ್ಣ ತೋಳಿನ ಅಥವಾ ಉಣ್ಣೆ ಬಟ್ಟೆ ಧರಿಸಿರುವ ಅಭ್ಯರ್ಥಿಗಳು ಮುಂಚಿತವಾಗಿಯೇ ವರದಿ ಮಾಡಿಕೊಳ್ಳುವಂತೆ ಎನ್‌ಟಿಎ ಸೂಚಿಸಿದೆ.ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯ:ವಂಚನೆ ತಡೆಯಲು ಪರೀಕ್ಷಾ ಕೇಂದ್ರಗಳಲ್ಲಿ ಹಾಜರಿರುವ ಅಭ್ಯರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ. ಪರಿಶೀಲನೆಯನ್ನು ತ್ವರಿತಗೊಳಿಸಲು ಹೆಚ್ಚುವರಿ ಬಯೋಮೆಟ್ರಿಕ್ ಯಂತ್ರಗಳು ಮತ್ತು ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟೀವಿ ಅಳವಡಿಕೆ, ಪ್ರಶ್ನೆಪತ್ರಿಕೆಗಳ ಸಾಗಾಟದ ವಾಹನಗಳಿಗೆ ಜಿಪಿಎಸ್‌ ವ್ಯವಸ್ಥೆ, ಪೊಲೀಸರ ಭದ್ರತೆ ಒದಗಿಸಲಾಗಿದೆ.  

ಎನ್‌ಟಿಎ ಕಚೇರಿಗೆ ಭದ್ರತೆಯನ್ನು ಬಿಗಿ

ದೆಹಲಿಯಲ್ಲಿ ಎನ್‌ಟಿಎ ಕಚೇರಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 2 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ:ಹಲವಾರು ಸಂಸ್ಥೆಗಳು ಮತ್ತು ಆಡಳಿತ ಮಟ್ಟಗಳ ನಡುವೆ ನಿಕಟ ಸಮನ್ವಯವನ್ನು ಸಾಧಿಸಿ ಪರೀಕ್ಷೆ ನಡೆಸಲಾಗುತ್ತಿದೆ. ನಗರ ಮಟ್ಟದ ಕಾರ್ಯಾಚರಣೆಗಳನ್ನು 674 ನಗರ ಸಂಯೋಜಕರು ನೋಡಿಕೊಳ್ಳುತ್ತಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸ್ವತಂತ್ರ ಮೇಲ್ವಿಚಾರಣೆಗಾಗಿ 6,669 ವೀಕ್ಷಕರನ್ನು ನಿಯೋಜಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ಸೂಪರಿಂಟೆಂಡೆಂಟ್‌ಗಳು ಮತ್ತು ಇನ್ವಿಜಿಲೇಟರ್‌ಗಳನ್ನು ನೇಮಿಸಲಾಗಿದೆ. ಪರೀಕ್ಷೆಯನ್ನು ಸುಗಮವಾಗಿ ಪೊಲೀಸರು ಹಾಗೂ ಅರೆಸೇನಾ ಸಿಬ್ಬಂದಿ ಸೇರಿದಂತೆ 2 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎನ್‌ಟಿಎ ತಿಳಿಸಿದೆ. 

ವೈದ್ಯ ವಿದ್ಯಾರ್ಥಿಗಳಿಗೆ 2 ದಿನ ರಜೆ ಇಲ್ಲ: ತುರ್ತು ಸಂದರ್ಭಗಳನ್ನು ಹೊರತುಪಡಿಸಿ, ಜೂ.20 ಮತ್ತು 21ರಂದು ವಿದ್ಯಾರ್ಥಿಗಳಿಗೆ ರಜೆ ನೀಡದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಪರೀಕ್ಷಾ ಅಕ್ರಮದಲ್ಲಿ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

 ಹಲವಾರು ರಾಜ್ಯಗಳು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ತಲುಪುವಂತೆ ಮಾಡಲು ಉಚಿತ ಸಾರಿಗೆ ಸೌಲಭ್ಯ ಘೋಷಿಸಿವೆ.ವಾಯುಪಡೆ ವಿಮಾನದಲ್ಲಿ ಪ್ರಶ್ನೆಪತ್ರಿಕೆ:ಪ್ರಶ್ನೆಪತ್ರಿಕೆ ಸಾಗಾಟದ ವೇಳೆ ಯಾವುದೇ ಸೋರಿಕೆ ಉಂಟಾಗದಂತೆ ತಡೆಯಲು ಈ ಬಾರಿ, ಇದೇ ಮೊದಲ ಬಾರಿಗೆ ವಾಯುಪಡೆಯ ನೆರವು ಪಡೆಯಲಾಗಿದೆ. ಬಿಗಿ ಭದ್ರತೆಯ ನಡುವೆ ಮಿ-17 ಹೆಲಿಕಾಪ್ಟರ್‌ಗಳು ಪ್ರಶ್ನೆಪತ್ರಿಕೆಗಳನ್ನು ದೇಶಾದ್ಯಂತ ಕೇಂದ್ರಗಳಿಗೆ ಸುರಕ್ಷಿತವಾಗಿ ಸಾಗಿಸಿವೆ.

ನಾಗ್ಪುರದ ನೀಟ್‌ ವಿದ್ಯಾರ್ಥಿಗೆ ಅಬುಧಾಬಿ ಕೇಂದ್ರ: ಗೊಂದಲ

ನವದೆಹಲಿ/ನಾಗಪುರ: ಮಹಾರಾಷ್ಟ್ರದ ನಾಗ್ಪುರದ ನೀಟ್‌ ಆಕಾಂಕ್ಷಿಯೊಬ್ಬನಿಗೆ, ನಾಗ್ಪುರದ ಬದಲು ಅರಬ್‌ ನಗರ ಅಬುಧಾಬಿ ಪರೀಕ್ಷಾ ಕೇಂದ್ರವನ್ನು ನೀಡಲಾಗಿದೆ ಎಂಬ ಆರೋಪ ಶನಿವಾರ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಪೋಷಕರು ಈ ಬಗ್ಗೆ ದೂರಿದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಆ ಬಳಿಕ ವಿದ್ಯಾರ್ಥಿಯೇ ತಪ್ಪಾಗಿ ಅಬುಧಾಬಿಯನ್ನು ಆಯ್ಕೆ ಮಾಡಿಕೊಂಡಿದ್ದ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

 ಆದರೂ ಮನವಿಯ ಮೇರೆಗೆ ನಾಗ್ಪುರ ಕೇಂದ್ರಕ್ಕೆ ಬದಲಾಯಿಸಿದೆ.ನೀಟ್‌ಗೆ ಕೇವಲ ಒಂದು ದಿನ ಇರುವಾಗ ಅಬ್ದುಲ್ಲಾ ಮೊಹಮ್ಮದ್ ತಾಲಿಬ್‌, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಾಗ ಅಬುಧಾಬಿ ಕೇಂದ್ರವನ್ನು ಆತನಿಗೆ ನೀಡಿರುವುದು ತಿಳಿದು ಬಂತು. ಇದರಿಂದ ತೀವ್ರ ಆತಂಕಿತರಾದ ಪೋಷಕರು ಎನ್‌ಟಿಎಗೆ ದೂರು ನೀಡಿದರು. ಬಳಿಕ ರಾಹುಲ್ ಗಾಂಧಿ, ‘ಸರ್ಕಾರ ಮಕ್ಕಳ ಭವಿಷ್ಯದೊಂದಿಗೆ ಜೂಜಾಡುವುದನ್ನು ನಿಲ್ಲಿಸಬೇಕು. ವಿದ್ಯಾರ್ಥಿಗೆ ಆತನ ಊರಿನಲ್ಲೇ ಪರೀಕ್ಷಾ ಕೇಂದ್ರ ನೀಡಲಾಗದ ವ್ಯವಸ್ಥೆಗೆ ಪರೀಕ್ಷೆ ನಡೆಸುವ ಯಾವ ಹಕ್ಕೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತರುವಾಯ ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಟಿಎ, ವಿದ್ಯಾರ್ಥಿಯೇ ಸ್ವಂತ ಲಾಗಿನ್ ಮೂಲಕ ‘ಕರೆಕ್ಷನ್ ವಿಂಡೋ’ ಅವಧಿಯಲ್ಲಿ ಅಬುಧಾಬಿ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ವೆಬ್ ದಾಖಲೆಗಳನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದೆ. ಆದರೂ ವಿದ್ಯಾರ್ಥಿಯ ಕುಟುಂಬದ ಕೋರಿಕೆಯ ಮೇರೆಗೆ ತಕ್ಷಣ ನಾಗ್ಪುರ ಕೇಂದ್ರಕ್ಕೆ ಬದಲಾಯಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜೆನ್‌ಝೀ ವಿರುದ್ಧ ಹಿಂಸೆ: ರಾಹುಲ್‌ ವರ್ಸಸ್ ಅಮಿತ್‌ ಶಾ
ಕಾವಡ ಯಾತ್ರೆ : ಹರಿದ್ವಾರದಲ್ಲಿ ಮೂತ್ರ ಬಾಟಲಿ, 7000 ಟನ್‌ ಕಸದ ರಾಶಿ!