;Resize=(412,232))
ಚೆನ್ನೈ: ಹಿಂದೂ ದೇವಸ್ಥಾನಗಳ ನಿಧಿಯನ್ನು ಸರ್ಕಾರಿ ಯೋಜನೆ, ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸುವ ಹಿಂದಿನ ಡಿಎಂಕೆ ಸರ್ಕಾರದ ನಿರ್ಧಾರವನ್ನು ತಮಿಳುನಾಡಿನ ನೂತನ ವಿಜಯ್ ಸರ್ಕಾರ ರದ್ದು ಮಾಡಿದೆ.
ಡಿಎಂಕೆ ಸರ್ಕಾರದ ಕ್ರಮ ಹಿಂದು ಮುನ್ನಣಿ ಸೇರಿ ಅನೇಕ ಹಿಂದು ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ದೇವಸ್ಥಾನಗಳ ನಿಧಿ ಬಳಸಿ ನಿರ್ಮಿಸಲು ಉದ್ದೇಶಿಸಿದ್ದ 246 ಕೋಟಿ ರು. ಮೌಲ್ಯದ 29 ಕಲ್ಯಾಣ ಮಂಟಪಗಳು ಹಾಗೂ 17 ವಾಣಿಜ್ಯ ಕಾಂಪ್ಲೆಕ್ಸ್ ಯೋಜನೆಗೆ ಟಿವಿಕೆ ಸರ್ಕಾರ ಬ್ರೇಕ್ ಹಾಕಿದೆ.
‘ಇನ್ನು ದೇಗುಲಗಳ ಹಣವನ್ನು ದೇವಸ್ಥಾನಗಳು ಹಾಗೂ ದೇವರ ಕಲ್ಯಾಣಕ್ಕೆ ಬಳಸಲಾಗುತ್ತದೆ. ಈ ಕ್ರಮ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ದಿವಾಳಿಯಾಗುವುದನ್ನು ತಡೆಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಪ್ರಮುಖ ಧಾರ್ಮಿಕ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ನಿಧಿಯನ್ನು ಹಿಂದುಳಿದವರ ಮದುವೆ, ಕಲ್ಯಾಣ ಮಂಟಪಗಳ ಸ್ಥಾಪನೆಯಂಥ ಸರ್ಕಾರಿ ಕಲ್ಯಾಣ ಯೋಜನೆಗಳು ಹಾಗೂ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್‌ಗಳ ನಿರ್ಮಾಣಕ್ಕೆ ಬಳಸಲು ಹಿಂದಿನ ಸ್ಟಾಲಿನ್ ಸರ್ಕಾರ ನಿರ್ಧರಿಸಿತ್ತು.