ಮಹಿಳಾ ನೇತೃತ್ವದ ಅಭಿವೃದ್ಧಿಗೆ ಕೇಂದ್ರದಿಂದ ಮರು ವ್ಯಾಖ್ಯಾನ

KannadaprabhaNewsNetwork |  
Published : Jun 09, 2025, 01:46 AM ISTUpdated : Jun 09, 2025, 01:47 AM IST
ಮೋದಿ | Kannada Prabha

ಸಾರಾಂಶ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮರು ವ್ಯಾಖ್ಯಾನ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

11 ವರ್ಷಗಳಲ್ಲಿ ಮಹಿಳೆಯರ ಬದುಕಲ್ಲಿ ಬದಲಾವಣೆ

ಎನ್‌ಡಿಎ ಸರ್ಕಾರದ ಸಾಧನೆ ವಿವರ ನೀಡಿದ ಮೋದಿ

ನವದೆಹಲಿ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮರು ವ್ಯಾಖ್ಯಾನ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ವರ್ಷ ಪೂರ್ಣಗೊಳ್ಳುವ ಮುನ್ನಾದಿನವಾದ ಭಾನುವಾರ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಪ್ರಧಾನಿ ಮೋದಿ ಅವರು ಸರ್ಕಾರದ ಯೋಜನೆಗಳಿಂದ ಮಹಿಳೆಯರು, ಬಡವರು ಮತ್ತಿತರರಿಗೆ ಹೇಗೆ ಅನುಕೂಲವಾಗಿದೆ ಎಂದು ವಿವರಣೆ ನೀಡಿದ್ದಾರೆ.

ವಿಜ್ಞಾನ, ಶಿಕ್ಷಣ, ಕ್ರೀಡೆ, ಸ್ಟಾರ್ಟಪ್ಸ್‌ ಮತ್ತು ಸೇನೆ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ವಿಶೇಷ ಸಾಧನೆ ಮಾಡುತ್ತಿದ್ದಾರೆ, ಹಲವರಿಗೆ ಸ್ಪೂರ್ತಿಯಾಗುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರದ ಹಲವು ಜನಕಲ್ಯಾಣ ಯೋಜನೆಗಳು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿವೆ. ಸ್ವಚ್ಛ ಭಾರತ್‌ ನಿಂದ ಹಿಡಿದು ಜನಧನ್‌ನಂಥ ಆರ್ಥಿಕ ಒಳಗೊಳ್ಳುವಿಕೆಯ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿವೆ. ಉಜ್ವಲಾ ಯೋಜನೆಯು ಬಡವರ ಅಡುಗೆಮನೆಯನ್ನು ಹೊಗೆಯಿಂದ ಮುಕ್ತಗೊಳಿಸಿದರೆ, ಮುದ್ರಾ ಸಾಲ ಯೋಜನೆಯು ಮಹಿಳಾ ಉದ್ಯಮಿಗಳಿಗೆ ಅವರ ಕನಸು ನನಸು ಮಾಡಲು ಅನುಕೂಲ ಮಾಡಿಕೊಟ್ಟಿದೆ. ಇನ್ನು ಪಿಎಂ ಆವಾಸ್‌ ಯೋಜನೆಯಡಿ ಮಹಿಳೆಯರ ಹೆಸರಿನಲ್ಲಿ ನಿರ್ಮಿಸುವ ಮನೆಗಳು ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿವೆ. ಅದೇ ರೀತಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವು ಹೆಣ್ಣುಮಕ್ಕಳ ರಕ್ಷಣೆ ವಿಚಾರದಲ್ಲಿ ರಾಷ್ಟ್ರೀಯ ಚಳವಳಿಯಾಗಿ ರೂಪುಗೊಂಡಿತು ಎಂದರು.

2011-13ರಲ್ಲಿ ಪ್ರತಿ ಲಕ್ಷಕ್ಕೆ 167 ಇದ್ದ ತಾಯಿ ಮರಣ ಪ್ರಮಾಣ 2019-21ರಲ್ಲಿ 93ಕ್ಕೆ ಇಳಿದಿದೆ. 2019ರ ಆಗಸ್ಟ್‌ನಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆ ಮೂಲಕ 3.29 ಕೋಟಿ ಮನೆಗಳಿಗೆ ನಳ್ಳಿ ನೀರು ಸಂಪರ್ಕ ಕಲ್ಪಿಸಿದರೆ, 2025ರಲ್ಲಿ ಇದು 15.64 ಕೋಟಿಗೆ ತಲುಪಿದೆ. ಉಜ್ವಲ್ ಯೋಜನೆಯಡಿ ಸುಮಾರು 10 ಕೋಟಿಗೂ ಹೆಚ್ಚು ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದು ಮೋದಿ ಅ‍ವರು ತಮ್ಮ ಸರ್ಕಾರಾವಧಿಯಲ್ಲಿ ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಜಾರಿಗೆ ತಂದ ಯೋಜನೆಗಳಿಂದ ಹೇಗೆ ಜನರಿಗೆ ಅನುಕೂಲವಾಯಿತು ಎಂಬ ಪಟ್ಟಿ ನೀಡಿದ್ದಾರೆ.

PREV

Recommended Stories

ನಮ್ಮ ತೆರಿಗೆ ದುಡ್ಡಲ್ಲಿ ಬಿಹಾರದಲ್ಲಿ ಗ್ಯಾರಂಟಿ ಜಾತ್ರೆ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಕನ್ನಡಕ್ಕೆ ಎರಡು ಗರಿ