ನವದೆಹಲಿ: ಮಂಗಳವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ. ಪಿ. ರಾಧಾಕೃಷ್ಣನ್ ಅವರು 452 ಮತಗಳನ್ನು ಗಳಿಸಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ವಿರೋಧ ಪಕ್ಷದ ಅಭ್ಯರ್ಥಿ ನ್ಯಾ. ಬಿ. ಸುದರ್ಶನ್ ರೆಡ್ಡಿ 300 ಮತಗಳನ್ನು ಗಳಿಸಿದ್ದಾರೆ. ಚುನಾವಣಾ ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ ಪಿ. ಸಿ. ಮೋದಿ, ‘ರಾಧಾಕೃಷ್ಣನ್ 452 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದರೆ, ರೆಡ್ಡಿ 300 ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆದಿದ್ದಾರೆ.
ಸಿ. ಪಿ. ರಾಧಾಕೃಷ್ಣನ್ ಅವರನ್ನು ಭಾರತದ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸುತ್ತೇನೆ’ ಎಂದರು. ರಾಧಾಕೃಷ್ಣನ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.ಒಟ್ಟು 767 ಸಂಸದರು ಮತ ಚಲಾಯಿಸಿದ್ದು, ಶೇ.98.2ರಷ್ಟು ಮತದಾನವಾಗಿದೆ. ಅದರಲ್ಲಿ 752 ಮತಗಳು ಮಾನ್ಯವಾಗಿವೆ. 15 ಮತಗಳನ್ನು ಅಮಾನ್ಯವೆಂದು ಪರಿಗಣಿಸಲಾಗಿದೆ. ಓರ್ವ ಸಂಸದರು ಮತ ಚಲಾಯಿಸಲು ನಿರಾಕರಿಸಿದ್ದರಿಂದ ಒಂದು ಅಂಚೆ ಮತಪತ್ರ ರದ್ದಾಗಿದೆ ಎಂದು ತಿಳಿಸಿದರು.
-ವಿಪಕ್ಷಗಳ ಕನಿಷ್ಠ 11 ಸಂಸದರಿಂದ ಅಡ್ಡಮತದಾನರಾಧಾಕೃಷ್ಣನ್ ಪರವಾಗಿ ವಿಪಕ್ಷಗಳ ಕೆಲವು ಸಂಸದರು ಅಡ್ಡ ಮತದಾನ ಮಾಡಿರುವುದು ಮತ ಎಣಿಕೆ ಬಳಿಕ ಬಹಿರಂಗವಾಗಿದೆ. ವಿಪಕ್ಷಗಳ ಕನಿಷ್ಠ 11 ಸಂಸದರು ತಮ್ಮ ಅಭ್ಯರ್ಥಿ ಪರ ಮತದಾನ ಮಾಡಿರುವುದಾಗಿ ಎನ್‌ಡಿಎ ಹೇಳಿಕೊಂಡಿದೆ.
ಈ ಹಿಂದೆ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ತನ್ನ 315 ಸಂಸದರೆಲ್ಲರೂ ಬಂದಿದ್ದು, ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ನಿಂತಿವೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಲೋಕಸಭೆಯ 543 ಸಂಸದರು ಹಾಗೂ ರಾಜ್ಯಸಭೆಯ 245 ಸದಸ್ಯರು ಸೇರಿ ಒಟ್ಟು 788 ಸದಸ್ಯರು ಮತ ಚಲಾಯಿಸಲು ಅರ್ಹರಾಗಿದ್ದರು. ರಾಜ್ಯಸಭೆಯಲ್ಲಿ 6 ಮತ್ತು ಲೋಕಸಭೆಯಲ್ಲಿ 1 ಸ್ಥಾನ ಖಾಲಿ ಇರುವುದರಿಂದ ಎಲೆಕ್ಟೊರಲ್ ಕಾಲೇಜಿನ ಪ್ರಸ್ತುತ ಬಲ 781 ಆಗಿದೆ. ಈ ಪೈಕಿ ಎನ್‌ಡಿಎ ಪರ ಸಿ. ಪಿ. ರಾಧಾಕೃಷ್ಣನ್ ಅವರು 452 ಮತಗಳನ್ನು ಗಳಿಸಿದ್ದರಿಂದ ದೇಶದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಹೋರಾಟ ನಿರಂತರ
‘ಫಲಿತಾಂಶ ನನ್ನ ಪರವಾಗಿ ಬರದಿದ್ದರೂ, ಸೈದ್ಧಾಂತಿಕ ಹೋರಾಟ ಇನ್ನೂ ಹೆಚ್ಚಿನ ಹುರುಪಿನಿಂದ ಮುಂದುವರಿಯುತ್ತದೆ.’
-ನ್ಯಾ. ಸುದರ್ಶನ್ ರೆಡ್ಡಿ, ಪರಾಜಿತ ಅಭ್ಯರ್ಥಿ