ಮೋದಿಗೆ ನಿವೃತ್ತಿ ಪಡೆಯಲು ಹೇಳಿಲ್ಲ : ಭಾಗವತ್‌

KannadaprabhaNewsNetwork |  
Published : Aug 29, 2025, 01:00 AM IST
ಭಾಗವತ್  | Kannada Prabha

ಸಾರಾಂಶ

75 ವರ್ಷಕ್ಕೆ ನಿವೃತ್ತಿಯಾಗಬೇಕು ಎಂದು ನಾನು ಯಾರಿಗೂ ಹೇಳಿಲ್ಲ, ನಾನೂ ನಿವೃತ್ತನಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

 ನವದೆಹಲಿ: 75 ವರ್ಷಕ್ಕೆ ನಿವೃತ್ತಿಯಾಗಬೇಕು ಎಂದು ನಾನು ಯಾರಿಗೂ ಹೇಳಿಲ್ಲ, ನಾನೂ ನಿವೃತ್ತನಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಆರ್‌ಎಸ್‌ಎಸ್‌ ಶತಮಾನೋತ್ವದ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್‌, ಪ್ರಧಾನಿ ಮೋದಿಯವರ ನಿವೃತ್ತಿಯಿಂದ ಹಿಡಿದು ಬಿಜೆಪಿ ಜತೆಗಿನ ನಂಟು ಹಾಗೂ ರಾಷ್ಟ್ರೀಯ ಭಾಷೆಯ ವರೆಗೆ ಹಲವು ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.

ನಿವೃತ್ತಿಯಾಗ್ಲಿ ಅಂದಿಲ್ಲ: ‘75 ವರ್ಷದ ಬಳಿಕ ನಿವೃತ್ತಿ ಪಡೆಯಬೇಕು’ ಎಂಬ ಇತ್ತೀಚಿನ ಮಾತುಗಳು ಮೋದಿಯವನ್ನು ಉದ್ದೇಶಿಸಿ ಇರಬಹುದು ಎಂಬ ಚರ್ಚೆಗಳ ಬೆನ್ನಲ್ಲೇ ಆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿರುವ ಭಾಗವತ್‌, ‘ಅಂದು ನಾನು ಆರ್‌ಎಸ್‌ಎಸ್‌ ನಾಯಕ ಮೋರೋಪಂತ್‌ ಪಿಂಗಳೆ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದೆ ಅಷ್ಟೇ. ಆದರೆ ಯಾವತ್ತೂ ನಾನು ನಿವೃತ್ತನಾಗುತ್ತೇನೆ ಅಥವಾ ಬೇರೆಯವರು ಆಗಲಿ ಎಂದಿರಲಿಲ್ಲ. ಸಂಘ ಹೇಳಿದ್ದನ್ನು ನಾವು ಮಾಡುತ್ತೇವೆ’ ಎಂದರು.

ಬಿಜೆಪಿ ಜತೆ ಸಂಘರ್ಷ ಇಲ್ಲ :ಬಿಜೆಪಿ ಮತ್ತು ಸಂಘದ ನಡುವೆ ಸಂಘರ್ಷದ ಕುರಿತು, ‘ಎರಡೂ ಕಡೆಯವರಿಗೆ ಪರಸ್ಪರ ನಂಬಿಕೆ ಇದೆ. ಆದರೆ ಎಲ್ಲಾ ವಿಷಯಗಳಲ್ಲೂ ಒಂದೇ ಅಭಿಪ್ರಾಯ ಇರಬೇಕು ಎಂದೇನಿಲ್ಲ. ಹಾಗೆಂದು ಬಿಜೆಪಿ ಜತೆಗೆ ಸಂಘರ್ಷವೂ ಇಲ್ಲ. ನಮ್ಮ ನಡುವೆ ಮತಭೇದ ಇದೆ ಹೊರತು ಮನಭೇದ ಅಲ್ಲ’ ಎಂದು ಸ್ಪಷ್ಟನೆ ನೀಡಿದರು. ಜತೆಗೆ, ‘50 ವರ್ಷಗಳಿಂದ ನಾನು ಶಾಖೆಗಳನ್ನು ನಡೆಸುವಲ್ಲಿ ಸಮರ್ಥನಿದ್ದೇನೆ ಮತ್ತು ಬಿಜೆಪಿಗೆ ಸರ್ಕಾರ ನಡೆಸುವ ನೈಪುಣ್ಯತೆ ಇದೆ’ ಎಂದರು.

ಬಿಜೆಪಿ ಅಧ್ಯಕ್ಷ ಆಯ್ಕೆ ನಮ್ಮದಲ್ಲ: ಬಿಜೆಪಿ ಅಧ್ಯಕ್ಷರ ಆಯ್ಕೆಯಿಂದ ಹಿಡಿದು ಬಿಜೆಪಿಯ ಎಲ್ಲಾ ನಿರ್ಧಾರ ಆರ್‌ಎಸ್‌ಎಸ್‌ ತೆಗೆದುಕೊಳ್ಳುತ್ತದೆ ಎಂಬ ಆರೋಪ ತಳ್ಳಿಹಾಕಿರುವ ಭಾಗವತ್‌, ‘ನಾವು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅದೇನಿದ್ದರೂ ಪಕ್ಷದ ಕೆಲಸ. ಸಂಘ ಸಲಹೆ ಕೊಡುತ್ತದೆ. ಇಲದ್ದಿದ್ದರೆ ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಇಷ್ಟೇಕೆ ವಿಳಂಬ ಆಗುತ್ತಿತ್ತು?’ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲರೂ 3 ಮಕ್ಕಳನ್ನು ಹೊಂದಿ:

‘ದಂಪತಿಗಳು 3 ಮಕ್ಕಳನ್ನು ಹೊಂದುವುದು ಅಗತ್ಯ. ಇದರಿಂದ ಮಕ್ಕಳ ಮುಂದಿನ ಜೀವನಕ್ಕೆ ಮಾತ್ರವಲ್ಲದೆ ದೇಶದ ಜನಸಂಖ್ಯೆಗೂ ಒಳ್ಳೆಯದು’ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ‘ಪರಿವಾರದಲ್ಲಿ 3 ಮಕ್ಕಳಿದ್ದರೆ ಅವರು ಪರಸ್ಪರ ಹೊಂದಿಕೊಂಡು ಇರುವುದನ್ನು ಕಲಿಯುತ್ತಾರೆ ಹಾಗೂ ಅವರಲ್ಲಿ ಅಹಂಕಾರ ಇರುವುದಿಲ್ಲ’ ಎಂದರು.

ವಿಪಕ್ಷಗಳಿಗೆ ನೆರವಾಗಲೂ ಸಿದ್ಧ:

‘ಸಂಘ ಕೇವಲ ಬಿಜೆಪಿಗೆ ಸಹಾಯ ಮಾಡುವುದಿಲ್ಲ. ನಾವು ಎಲ್ಲರಿಗೂ ನೆರವಾಗುತ್ತದೆ. ಒಳ್ಳೆ ಕೆಲಸ ಮಾಡುವುದರಲ್ಲಿ ನಮ್ಮ ಸಹಕಾರ ಬೇಕಿದ್ದರೆ ನಾವದಕ್ಕೆ ಸಿದ್ಧರಿದ್ದೇವೆ’ ಎಂದು ಭಾಗವತ್‌ ಹೇಳಿದ್ದಾರೆ.

ಭಾಷಾ ಗದ್ದಲ ಸಲ್ಲದು‘ಭಾರತದಲ್ಲಿ ಹುಟ್ಟಿದ ಎಲ್ಲಾ ಭಾಷೆಗಳೂ ರಾಷ್ಟ್ರಭಾಷೆ. ಆದರೆ ನಮಗೆ ಸಂವಹನಕ್ಕೊಂದು ಸಾಮಾನ್ಯ ಭಾಷೆ ಬೇಕು. ಆದರೆ ಅದು ಪರಕೀಯ ಭಾಷೆ ಆಗಿರಬಾರದು. ಹಾಗೆಂದು ಈ ವಿಷಯದಲ್ಲಿ ಜಗಳದ ಅಗತ್ಯವಿಲ್ಲ’ ಎಂದು ಭಾಗವತ್‌ ಹೇಳಿದ್ದಾರೆ. ಜತೆಗೆ, ‘ಎಲ್ಲರೂ ನಿರರ್ಗಳವಾಗಿ ಮಾತೃಭಾಷೆಯಲ್ಲಿ ಮಾತನಾಡಲು ಬಲ್ಲವರಾಗಿರಬೇಕು. ಜತೆಗೆ ತಾವಿರುವ ಪ್ರದೇಶದ ವ್ಯಾವಹಾರಿಕ ಭಾಷೆಯನ್ನೂ ಅರಿತಿರಬೇಕು. ಹಾಗೆಂದು ಹೆಚ್ಚು ಭಾಷೆ ಕಲಿಯುವುದರ ಮೇಲೆ ನಿರ್ಬಂಧ ಇಲ್ಲ’ ಎಂದು ಹೇಳಿದರು,

PREV
Read more Articles on

Recommended Stories

ಜಿ-ಕ್ಯಾಪ್ 2025 : ಭೂಮಿ ಪುನಃಸ್ಥಾಪನೆಯಲ್ಲಿ ಭಾರತದ ಸಾಧನೆ
ಇಂದು ಚುನಾವಣೆ ನಡೆದರೆ ಮೋದಿ ನೇತೃತ್ವದ ಎನ್‌ಡಿಎಗೆ 300+ ಸೀಟು